ಕೋಲಾರ

ಶೇ.34 ಮಕ್ಕಳು ಶಾಲೆಯಿಂದ ಹೊರಗೆ

Published On :

ಕೋಲಾರ: ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿರುವ ಕೋಲಾರ ಜಿಲ್ಲೆಯಲ್ಲಿ ಈ ವರ್ಗಕ್ಕೆ ಸೇರಿದ 1,177(ಶೇ.33.99) ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಕಳೆದ ವರ್ಷ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯದಿಂದ ಈ ಅಂಶ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 3,492 ಮಂದಿ ಮಕ್ಕಳು ಶಾಲೆಯನ್ನು ವಿವಿಧ ಕಾರಣಗಳಿಂದ ತೊರೆದಿದ್ದಾರೆ. ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ನಡೆದ ಸಮೀಕ್ಷೆಯಿಂದಾಗಿ ಮಕ್ಕಳು ಶಾಲೆ ಬಿಡಲು ಬಡತನ, ವಲಸೆ,ಮನೆಗೆಲಸ,ಕುಟುಂಬ ನಿರ್ವಹಣೆ ಹಾಗೂ ಕೂಲಿ ಮಾಡಲು ಮಕ್ಕಳನ್ನು ಬಳಸಿಕೊಂಡಿರುವುದು ಕಾರಣವೆಂಬುದು ತಿಳಿದು ಬಂದಿದೆ.
ದಲಿತ ಮಕ್ಕಳಲ್ಲಿ 578 ಬಾಲಕರು, 609 ಬಾಲಕಿಯರು ಸೇರಿ ಒಟ್ಟು 1,177 ಮಕ್ಕಳು ಶಾಲೆ ತೊರೆದಿದ್ದು ಸರಾಸರಿ ಪ್ರಮಾಣ ಶೇ.33.99 ಆಗಿದ್ದರೆ, ನಂತರದ ಸ್ಥಾನ ಮುಸ್ಲಿಮ್ ಸಮುದಾಯದ್ದಾಗಿದೆ.
ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಮುಸ್ಲಿಂ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ, ಕೋಲಾರ ಜಿಲ್ಲೆಯಲ್ಲಿ 522 ಮಂದಿ ಬಾಲಕರು,519 ಬಾಲಕಿಯರು ಸೇರಿ ಒಟ್ಟು 1,041(ಶೇ.29.81) ಮಕ್ಕಳು ಕಲಿಕೆಯಿಂದ ದೂರ ಸರಿದಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ 115 ಹುಡುಗರು, 143 ಹುಡುಗಿಯರು ಸೇರಿ 254(ಶೇ.7.27), ಪ್ರವರ್ಗ-1ಕ್ಕೆ ಸೇರಿದ 20 ಹುಡುಗರು, 38 ಹುಡುಗಿಯರು ಸೇರಿ ಒಟ್ಟು 58 (ಶೇ.1.66)ಮಕ್ಕಳು, ಒಬಿಸಿಗೆ ಸೇರಿದ 429 ಹುಡುಗರು,427 ಮಂದಿ ಹುಡುಗಿಯರು ಸೇರಿ ಒಟ್ಟು 856 (ಶೇ.24.51) ಮಕ್ಕಳು ಶಾಲೆ ಬಿಟ್ಟಿದ್ದಾರೆ.
ಇತರೇ ಅಲ್ಪಸಂಖ್ಯಾತರು 6 ಮಂದಿ ಹುಡುಗರು, 4 ಮಂದಿ ಹುಡುಗಿಯರು ಸೇರಿ 10 (ಶೇ.0.28) ಮಕ್ಕಳು ಹಾಗೂ ಇತರೇ ವರ್ಗಕ್ಕೆ ಸೇರಿದ 51 ಮಂದಿ ಹುಡುಗರು, 31 ಮಂದಿ ಹುಡುಗಿಯರು ಸೇರಿ 82(ಶೇ.2.34) ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಕೋಲಾರ ತಾಲೂಕಿನಲ್ಲಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೆಜಿಎಫ್‌ನಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಪ್ರತಿ ವರ್ಷ ಮಕ್ಕಳು ನಿರಂತರವಾಗಿ 60 ರಿಂದ 90 ದಿನ ಗೈರು ಹಾಜರಾಗಿದ್ದಲ್ಲಿ ಅಂತಹ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆಂದು ಪರಿಗಣಿಸಲಾಗಿತ್ತು. ಆದರೆ, ಕಳೆದ ವರ್ಷ 7 ದಿನ ಸತತವಾಗಿ ಶಾಲೆಗೆ ಬರದಿದ್ದ ಮಕ್ಕಳನ್ನು ಗಣನೆಗೆ ತೆಗೆದುಕೊಂಡಿರುವುದರಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಶಿವಲಿಂಗಯ್ಯ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಶಾಲೆ ಬಿಟ್ಟ ಮಕ್ಕಳನ್ನು ಮನವೊಲಿಸಿ ಕರೆತರಲು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗುತ್ತದೆ. ಜನಪ್ರತಿನಿಧಿಗಳು, ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿ ಅದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗುವುದು. ಚಿಣ್ಣರ ಅಂಗಳದ ಯೋಜನೆಯಡಿ ಮಕ್ಕಳನ್ನು ಶಾಲೆಗೆ ಕರೆತರಲಾಗುವುದೆಂದು ಹೇಳಿದರು.
ಕ್ಷೇತ್ರವಾರು ವಿವರ
ಕ್ಷೇತ್ರ                       ಗಂಡು     ಹೆಣ್ಣು    ಶಾಲೆ ಬಿಟ್ಟ ಒಟ್ಟು ಮಕ್ಕಳು
ಬಂಗಾರಪೇಟೆ           170       328            498
ಕೆಜಿಎಫ್                   169       193            362
ಕೋಲಾರ                 443       469            912
ಮಾಲೂರು               396       233            634
ಮುಳಬಾಗಿಲು           280       291            555
ಶ್ರೀನಿವಾಸಪುರ         268       263            531
ಒಟ್ಟು                      1726     1766          3492


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.