ಸಹಸ್ರ ಭಕ್ತರ ನಡುವೆ ಅದ್ಧೂರಿ ಚಿತ್ರಾವತಿ ಜಾತ್ರೆ
ಚಿಕ್ಕಬಳ್ಳಾಪುರ: ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧಿ ಹೊಂದಿರುವ ಚಿತ್ರಾವತಿಯ ಶ್ರೀ ಸುಬ್ರಮಣ್ಯೇಶ್ವರಸ್ವಾಮಿ ಜಾತ್ರೆ ಬುಧವಾರ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಘಾಟಿ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರೆ ನಡೆದ ಒಂದು ತಿಂಗಳ ನಂತರ ಷಷ್ಠಿ ದಿನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೇ ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ನೆರೆಯ ಗಡಿಭಾಗದಲ್ಲಿರುವ ಆಂಧ್ರದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬುಧವಾರ ಬೆಳಿಗ್ಗೆ ಚಿತ್ರಾವತಿಯಲ್ಲಿರುವ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಶಿವಪಾರ್ವತಿಯರಿಗೆ ವಿಶೇಷ ಅಭಿಷೇಕ, ಅಲಂಕಾರದೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾದವು. ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರಲ್ಲದೇ ಸಮೀಪದಲ್ಲಿರುವ ಹುತ್ತಗಳಲ್ಲಿ ಹಾಲು, ನಾಗಮುದ್ರಿಕೆಗಳನ್ನು ಹಾಕಿ ಹರಕೆಗಳನ್ನು ಹೊತ್ತುಕೊಂಡರು. ಬೆಳಿಗ್ಗೆ 10 ಗಂಟೆಗೆ ಶ್ರೀ ಕುಮಾರಸ್ವಾಮಿಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಶಾಂತಲಾ, ತಹಸೀಲ್ದಾರ್ ನಟೇಶ್ ಉಪಸ್ಥಿತರಿದ್ದರು. ನಂತರ ಸಿಂಗರಿಸಿದ್ದ ರಥ ಚಿತ್ರಾವತಿ ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕಿತು. ಈ ಸಂದರ್ಭದಲ್ಲಿ ಹಲವರು ದವನ ಸಮೇತ ಬಾಳೆಹಣ್ಣನ್ನು ದೇವರ ನಾಮಜಪದೊಂದಿಗೆ ತೇರಿನ ಮೇಲೆ ಎಸೆದು ದೇವರನ್ನು ಪ್ರಾರ್ಥಿಸಿದರು.
ಭರ್ಜರಿ ವ್ಯಾಪಾರ: ಸಹಜವಾಗಿ ಜಾತ್ರೆಯೆಂದರೆ ಮಕ್ಕಳ ಆಟಿಕೆ ವಸ್ತುಗಳು, ಸಿಹಿ ತಿಂಡಿ ತಿನಿಸು ಪದಾರ್ಥಗಳು, ತಂಪು ಪಾನೀಯಗಳ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ನಗರದ ಹೊರ ವಲಯದಲ್ಲಿರುವ ಚಿತ್ರಾವತಿಗೆ ತೆರಳಲು, ಅಲ್ಲಿಂದ ಮತ್ತೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಬರಲು ನಗರ ಸಾರಿಗೆ ಸಂಸ್ಥೆಯ ಬಸ್ಸು ಸೌಲಭ್ಯವನ್ನು ಹೆಚ್ಚಿಗೆ ಒದಗಿಸಲಾಗುತ್ತದೆಯಾದರೂ ಟಾಟಾ ಎಸಿ, ಟೆಂಪೋ, ಆಟೋಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬಂದು ಚಾಲಕರು ತಮ್ಮ ಜೇಬು ತುಂಬಿಸಿಕೊಂಡರು.
ಊಟದ ವ್ಯವಸ್ಥೆ: ಚಿತ್ರಾವತಿ ಜಾತ್ರೆ ಸಂದರ್ಭದಲ್ಲಿ ತಮ್ಮ ಮನೆಗಳಿಂದಲೇ ಅಡುಗೆ ತಯಾರಿಸಿಕೊಂಡು ಬಂದು ಆಲಯದ ಸುತ್ತಮುತ್ತಲಿನ ಗದ್ದೆ ತೋಟಗಳಲ್ಲಿ ಊಟ ಮಾಡುವುದು ವಿಶೇಷವಾಗಿದೆ. ನೀರಿನ ಸಮಸ್ಯೆಯಿಂದ ಜನರ ಆಸಕ್ತಿ ಕಡಿಮೆಯಾಗಿ ವನಭೋಜನ ವ್ಯವಸ್ಥೆ ಕಲೆ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿಸಿತು. ದೇವಾಲಯ ಸಮಿತಿ ಮತ್ತು ಮುಖಂಡರು ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಕೈಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

