ಕೋಲಾರ

ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಫೆ. 5
ಕೈಯಲ್ಲಿ ಸ್ಲೆಟು, ಬಳಪ ಇಲ್ಲವೇ ನೋಟ್ ಬುಕ್, ಪೆನ್ನು,ಪೆನ್ಸಿಲ್ ಹಿಡಿದು ಶಾಲೆಗೆ ಹೋಗಿ ಪಾಠ ಕಲಿತು ವಿದ್ಯಾವಂತರಾಗಿ ಎಲ್ಲರಂತೆ ತಮ್ಮ ಬದುಕಿಗೊಂದು ಭದ್ರವಾದ ನೆಲೆಯನ್ನು ಕಂಡುಕೊಳ್ಳಬೇಕಾದ ಮಕ್ಕಳು ಕಾದ ಕಬ್ಬಿಣ ತಟ್ಟಲು ಸುತ್ತಿಗೆ ಹಿಡಿದಿದ್ದಾರೆ...
ಹೌದು, ಇದು ವಿಚಿತ್ರವಾದರೂ ನಿಜ. ಸರ್ಕಾರಗಳು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ. ಬಡ ಮಕ್ಕಳು ಶಿಕ್ಷಣದಿಂದ ವಂಚನೆಗೊಳ್ಳಬಾರದೆಂಬ ಉದ್ದೇಶದಿಂದ ಆರ್‌ಟಿಇ ಕಾಯಿದೆಯನ್ನು ಅನುಷ್ಠಾನಗೊಳಿಸಲಾಗಿದೆ.
ಆದರೆ, ಅನೇಕ ಪೋಷಕರಲ್ಲಿ ಮತ್ತು ಸಾಂಪ್ರದಾಯಿಕ ಕುಲ ಕಸಬು ಬಿಡಲಾಗದೆ ತೋಳಲಾಡುತ್ತಿರುವ ಜನರು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವಿಲ್ಲದೆ ತಮ್ಮ ಮಕ್ಕಳನ್ನು ದುಡಿಮೆಗೆ ತಳ್ಳಿ ಮಕ್ಕಳ ಪ್ರಗತಿಗೆ ಮಾರಕವಾಗುತ್ತಿದ್ದಾರೆ.
ಈ ರೀತಿಯ ತೋಳಲಾಟದಲ್ಲಿ ಸಿಕ್ಕಿ ನರಳುತ್ತಿರುವ ಕುಟುಂಬಗಳ ಪೈಕಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನೀರಿಗೆ ಬರ ಇರುವುದರಿಂದ ಜೀವನ ಸಾಗಿಸುವುದು ಕಷ್ಟವೆಂದು ದೇಶ ಪರ್ಯಾಟನೆ ಮಾಡುತ್ತಿರುವ ಕುಲುಮೆದಾರರು ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಕಾದ ಕಬ್ಬಿಣವನ್ನು ತಟ್ಟಲು ಮತ್ತು ಸಲಕರಣೆಗಳನ್ನು ಮಾರಾಟ ಮಾಡುವುದಕ್ಕೆ ಬಳಸಿಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹೋರಾಡುತ್ತಿರುವವರ ಆಸೆ, ಆಶಯಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ.
ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಬಡವರು ಜೀವನ ಮಾಡುವುದಕ್ಕೆ ಸಮಸ್ಯೆ ಇರಬಹುದು. ಆದರೆ, ಮಕ್ಕಳಿಗಾಗಿಯೇ ಎಲ್ಲ ಸರ್ಕಾರಗಳಂತೆ ಅಲ್ಲಿಯೂ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿರುತ್ತದೆ, ಮಕ್ಕಳನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಮಾರ್ಗವಿದೆ. ಆದರೆ, ವಲಸೆ ಬಂದಿರುವ ಕುಲುಮೆಕಾರರು ಮಕ್ಕಳ ಭವಿಷ್ಯದ ಕಡೆ ಯೋಚನೆ ಮಾಡದೆ ಸುತ್ತಿಗೆಯನ್ನು ನೀಡಿ ಕಾದ ಕಬ್ಬಿಣದ ಜೊತೆ ಬದುಕು ಸಾಗಿಸಲು ತರಬೇತಿ ನೀಡುತ್ತಿದ್ದಾರೆ.
ಕೋಲಾರ ನಗರಕ್ಕೆ ಕಳೆದ ನಾಲ್ಕೈದು ದಿನಗಳ ಹಿಂದೆ ಬಂದಿರುವ ವಲಸಿಗ ಕುಲುಮೆಕಾರರು ರಸ್ತೆ ಬದಿಯಲ್ಲೇ ಬಿಡಾರ ಹಾಕಿಕೊಂಡು ಕುಲುಮೆ ಕೆಲಸ ಆರಂಭಿಸಿದ್ದಾರೆ, ಐದಾರು ಕುಟುಂಬಗಳು ಒಂದೇ ಕಡೆ ಕಸುಬು ನಡೆಸುತ್ತಿದ್ದಾರೆ, ಕ್ಯಾಂಪಿನಲ್ಲಿರುವ ದೊಡ್ಡವರ ಜೊತೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಸಹ ತಮ್ಮ ಪೋಷಕರೊಂದಿಗೆ ದುಡಿಮೆ ಮಾಡುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ರಾಜಾರೋಷವಾಗಿ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ರಚಿಸಿರುವ ಅಧಿಕಾರಿಗಳ ತಂಡ ಇತ್ತ ಸುಳಿದಿಲ್ಲ.
ಕಳೆದ 2008ರಲ್ಲಿ ಕೋಲಾರಕ್ಕೆ ಉತ್ತರ ಭಾರತದಿಂದ ವಲಸೆ ಬಂದ ಜ್ಯೂಸ್ ವ್ಯಾಪಾರಿಗಳು ನಗರದಲ್ಲಿ ಕಾಯಂ ಠಿಕಾಣಿ ಹೂಡಿಸಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿಯನ್ನು ಹೊಂದಿದ್ದಾರೆ. ತಮ್ಮ ಜನಾಂಗದ ಶಕ್ತಿ ಹೆಚ್ಚಿಸಿಕೊಳ್ಳಲು ಊರಿನ ಕೆಲ ಪ್ರಮುಖರು ಇವರಿಗೆ ಸಹಾಯ ಮಾಡಿದ್ದಾರೆ. ಅದೇ ರೀತಿ ಕುಲುಮೆದಾರರಿಗೆ ಕೋಲಾರದಲ್ಲೇ ಕಾಯಂ ಆಗಿ ಉಳಿಯಲು ಅವಕಾಶ ನೀಡಿದರೂ ಜನತೆ ವಿರೋಧಿಸುವುದಿಲ್ಲ. ಏಕೆಂದರೆ ವಲಸಿಗರ ಮಧ್ಯೆ ಬದುಕುವುದು ಕೋಲಾರ ಜನತೆಗೆ ಮಾಮೂಲಿ ಆಗಿಬಿಟ್ಟಿದೆ.
ಪ್ರಜ್ಞಾವಂತ ನಾಗರಿಕರ ಕಾಳಜಿ ಏನೆಂದರೆ ಕ್ಯಾಂಪಿನಲ್ಲಿರುವ ಮಕ್ಕಳಿಗೆ ತಾತ್ಕಾಲಿಕವಾಗಿಯಾದರೂ ಒಂದಿಷ್ಟು ದಿನ ನೆಮ್ಮದಿಯಿಂದ ಇರುವುದಕ್ಕೆ ಅವಕಾಶ ಕಲ್ಪಿಸಬೇಕೆಂಬುದಾಗಿದೆ. ಇದು ಕಷ್ಟದ ಕೆಲಸ. ಆದರೆ, ಜಿಲ್ಲಾ ಆಡಳಿತ ಮನಸ್ಸು ಮಾಡಿದಲ್ಲಿ ಮಕ್ಕಳಿಗೆ ನೆಮ್ಮದಿಯ ಜೊತೆಗೆ ಓದು-ಬರಹದ ಮೇಲೆ ಆಸಕ್ತಿ ಮೂಡಿಸಲು ಸಾಧ್ಯವೆಂದು ಪ್ರತಿಪಾದಿಸಿದ್ದಾರೆ.


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.