ಕೋಲಾರ

ಅಂಗನವಾಡಿ ಖಾಸಗೀಕರಣ ಖಂಡಿಸಿ ಪ್ರತಿಭಟನೆ

Published On :

ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿ ಮುಂಭಾಗ ಧರಣಿ ಕುಳಿತು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುತ್ತಿರುವುದರಲ್ಲದೇ ಕನಿಷ್ಠ ಕೂಲಿ ನಿಗದಿಪಡಿಸದೇ ಕಾರ್ಯಕರ್ತೆಯರು ಮತ್ತು ಸಹಾಯಕರಿಂದ ದುಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಮುಖಂಡ ಬಿ.ಎನ್. ಮುನಿಕೃಷ್ಣಪ್ಪ, ಅನೇಕ ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ವಿವಿಧ ರೀತಿಯಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದರೂ ಸಮರ್ಪಕವಾಗಿ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಟೀಕಿಸಿದರು.
ಇತ್ತೀಚೆಗೆ ಸರ್ಕಾರ ಹೋರಾಟಗಳ ಒತ್ತಡದ ಹಿನ್ನೆಲೆಯಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು. ಅದರಂತೆ ಹೊಸದಾಗಿ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಅನುಕೂಲಕರವಾಗಿಲ್ಲ. 10 ನೇ ತರಗತಿ ಓದಿದ ಅಂಗನವಾಡಿ ಸಹಾಯಕರನ್ನು ಕಾರ್ಯಕರ್ತೆಯಾಗಿ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ಸಹಾಯಕರಿಗೆ ಹೆರಿಗೆ ಭತ್ಯೆ ನೀಡುತ್ತಿಲ್ಲ ಎಂದು ಟೀಕಿಸಿದರು.
ಅಂಗನವಾಡಿ ಕಾರ್ಯಕರ್ತರನ್ನು ಕಾಯಂ ಮಾಡುವ ಬದಲಿಗೆ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲು ಕೈಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ವೇತನ 10 ಸಾವಿರ ರು. ನಿಗದಿ ಮಾಡುವುದಲ್ಲದೇ ಜನರ ವಿರೋಧಕ್ಕೆ ಕಾರಣವಾಗಿರುವ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸುವ ಕ್ರಮವನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕೆಂದರು.
ಜನವಾದಿ ಮಹಿಳಾ ಸಂಘಟನೆಯ ಮಧುಲತಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಿತ ರಕ್ಷಣೆಗೆ ಬದ್ಧವಾಗಬೇಕಾಗಿರುವ ಸರ್ಕಾರ ಐಸಿಡಿಎಸ್ ಯೋಜನೆ ಮಿಷನ್ ನನ್ನು ಕೈಬಿಡಬೇಕು, ಅಂಗನವಾಡಿ ಕಾರ್ಯಕರ್ತರ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು. ಈಗಾಗಲೇ 4 ಜಿಲ್ಲೆಗಳಲ್ಲಿ ವೇದಾಂತ ಫೌಂಡೇಷನ್ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವಧನವನ್ನು ಏಕ ಕಾಲದಲ್ಲಿ ಬಿಡುಗಡೆ ಮಾಡಬೇಕು. ಎಂದು ಆಗ್ರಹಿಸಿದರು. ಪದ್ಮ, ಟಿ.ಕೆ. ಗಾಯಿತ್ರಿ, ಐಶಾಬಿ, ವಿ. ದೇವಮ್ಮ, ಮಂಜುಳಾ, ಗಾಯಿತ್ರಿ ಇದ್ದರು.
ಬಾಗೇಪಲ್ಲಿಯಲ್ಲೂ...
ಬಾಗೇಪಲ್ಲಿ: ಅಂಗನವಾಡಿ ಕೇಂದ್ರಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕೃಷಿ ಕೂಲಿಕಾರರ ಸಂಘ ಹಾಗೂ ಜನವಾದಿ ಸಂಘಗಳ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ, ಅಂಗನವಾಡಿ ಕೇಂದ್ರಗಳನ್ನು ಪೂರಕ ಆಹಾರ ಕೂಡುವ ಕೇಂದ್ರಗಳ ಬದಲಿಗೆ ಕೇವಲ ಸಲಹೆ ಮತ್ತು ಕಲಿಯುವ ಕೇಂದ್ರಗಳನ್ನಾಗಿ ಬದಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುನ್ನಾರ ಹೂಡುತ್ತಿವೆ ಎಂದು ಆರೋಪಿಸಿದರು. ಸಿಐಟಿಯು ತಾಲೂಕು ಸಮಿತಿ ಕಾರ್ಯದರ್ಶಿ ಮುಸ್ತಾಫ್ ಮಾತನಾಡಿದರು. ಸಿಐಟಿಯು ತಾಲೂಕು ಅಧ್ಯಕ್ಷ ವೈ.ಆರ್. ವೆಂಕಟೇಶ್ ಬಾಬು, ಉಪಾಧ್ಯಕ್ಷ ಬಿ. ಆಂಜನೇಯರೆಡ್ಡಿ, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚನ್ನರಾಯಪ್ಪ, ಅಂಗನವಾಡಿಯ ಸಿಐಟಿಯುನ ತಾ.ಅಧ್ಯಕ್ಷೆ ವಿಜಯ ಭಾರತಿ, ಕಾರ್ಯದರ್ಶಿ ರತ್ನಮ್ಮ, ರಾಧಮ್ಮ, ವೆಂಕಟಲಕ್ಷಮ್ಮ, ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.