ಕೋಲಾರ

ವಿಳಂಬಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ

Published On :

ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಆರೋಪಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗೆ ಒತ್ತಾಯಿಸಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಗೆದ್ದ ನಂತರ ಮರೆಯುತ್ತಿದ್ದಾರೆಂದು ಕಿಡಿಕಾರಿದರು. ವಿಭಾಗೀಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ ಮಾತನಾಡಿ, ರಾಜಕಾರಣಿಗಳ ಸುಳ್ಳು ಭರವಸೆಗಳಿಗೆ ಮರುಳಾಗದೆ ಮತದಾನವನ್ನು ಬಹಿಷ್ಕರಿಸುವ ಮೂಲಕ ಜನ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಸಾವಿರಾರು ರೈತರು ಪ್ರಮುಖ ರಸ್ತೆಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಉಪಾಧ್ಯಕ್ಷ ಬಂಗವಾದಿ ನಾಗರಾಜಗೌಡ, ರಾಜ್ಯ ಕಾರ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ, ಕೋಲಾರ ಜಿಲ್ಲಾಧ್ಯಕ್ಷ ನಾರಾಯಣಗೌಡ ಮತ್ತು ಆಂಜನೇಯರೆಡ್ಡಿ ಮಾತನಾಡಿದರು. ಲಕ್ಷ್ಮಿನಾರಾಯಣರೆಡ್ಡಿ, ಜೆ.ವಿ. ರಘುನಾಥರೆಡ್ಡಿ, ಗಂಗುಲಪ್ಪ ಇದ್ದರು.
ಬಂದ್: ಪರೀಕ್ಷೆಗೆ ತೊಂದರೆ ಆಗದಂತೆ ಕ್ರಮ
ಕೆಜಿಎಫ್: ಕೆಜಿಎಫ್‌ನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಫೆ.7 ರಂದು ಕೆಜಿಎಫ್ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಈಗಾಗಲೇ ಫೆ.2 ರಿಂದ ಫೆ.10ರ ವರೆಗೆ ನಡೆಯುತ್ತಿರುವ ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಅವರು ತಿಳಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಗಳ ಸೂಚನೆ ಹಾಗೂ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರ ಮನವಿಯಂತೆ ಕೆಜಿಎಫ್ ಬಂದ್‌ಗೆ ಕರೆ ನೀಡಿರುವ ನವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟಕರನ್ನು ಈಗಾಗಲೇ ಕರೆಯಿಸಿ ಪರೀಕ್ಷೆಯ ಹಾಗೂ ವಿದ್ಯಾರ್ಥಗಳ ಭವಿಷ್ಯತ್ತಿನ ಬಗ್ಗೆ ಮನವರಿಕೆ ಮಾಡಲಾಗಿದೆ. ಇದರಿಂದಾಗಿ ಪಿಯುಸಿ ಪರೀಕ್ಷೆಗಳಿಗೆ ಪರೀಕ್ಷಾರ್ಥಿಗಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.
ಈಗಾಗಿ ಪಿಯುಸಿ ಪರೀಕ್ಷಾರ್ಥಿಗಳು ಯಾವುದೇ ಆಂತರಿಕಕ್ಕೆ ಒಳಗಾಗಿದೆ ನಿರ್ಭಿತಿಯಿಂದ ಪರೀಕ್ಷೆಗೆ ಹಾಜರಾಗುವಂತೆ ಎಸ್ಪಿ ಡಾ. ರೋಹಿಣಿಕಟೋಚ್ ಸೆಫಟ್ ಅವರು ಕರೆ ನೀಡಿದರು. ಡಿವೈಎಸ್ಪಿ ಎ.ಕೆ. ವಿವೇಕಾನಂದ ಸೇರಿದಂತೆ ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್ ಇದ್ದರು.
ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ
ಕೋಲಾರ: ರಥಸಪ್ತಮಿ ಅಂಗವಾಗಿ ನಗರದ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಶ್ರೀ ಪತಂಜಲಿ ಯೋಗ ಸಮಿತಿಯ ವತಿಯಿಂದ 109 ಸೂರ್ಯ ನಮಸ್ಕಾರ ಮಾಡಲಾಯಿತು.
ಯೋಗ ಸಮಿತಿಯ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯದೇವನಿಗೆ ನಮಸ್ಕಾರ ಸಲ್ಲಿಸಿದರು. ಇದಾದ ನಂತರ ದೇವಾಲಯದಿಂದ ಶೋಭಾಯಾತ್ರೆ ನಡೆಯಿತು. ಕಡೆಯಲ್ಲಿ ಪತಂಜಲಿ ಯೋಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸೂರ್ಯ ಹೋಮ, ಹವನ, ಪೂಜಾ ಕಾರ್ಯಕ್ರಮದಲ್ಲಿ ಯೋಗಪಟುಗಳು ಪಾಲ್ಗೊಂಡು ರಥ ಸಪ್ತಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಸಮಿತಿ ಗೌರವಾಧ್ಯಕ್ಷ ನಂಜುಂಡಯ್ಯಶ್ರೇಷ್ಟಿ, ಅಧ್ಯಕ್ಷ ಬಿಸಪ್ಪಗೌಡ, ಉಪಾಧ್ಯಕ್ಷ ಜನಾರ್ದನ್, ಪ್ರಧಾನ ಕಾರ್ಯದರ್ಶಿ ಎಸ್.ವಿ. ವೇಣುಗೋಪಾಲ್, ಖಜಾಂಚಿ ಎ.ವಿ. ಗೋವಿಂದರಾಜು, ಯೋಗ ಶಿಕ್ಷಕರಾದ ಚಂದ್ರಣ್ಣ ವಹಿಸಿದ್ದರು.
ನಗರದ ಪಿಸಿ ಬಡಾವಣೆಯಲ್ಲಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್‌ವತಿಯಿಂದ ಪಿಸಿ ಬಡಾವಣೆಯ ಶ್ರೀಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಸಾಮೂಹಿಕ 109 ಸೂರ್ಯ ನಮಸ್ಕಾರ ಯಜ್ಞ ಏರ್ಪಡಿಸಲಾಗಿತ್ತು. ಯೋಗ ಗುರು ಸೋಮೇಶ್ವರಯ್ಯನವರ ಮಾರ್ಗದರ್ಶನಲ್ಲಿ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಆಸ್ಪತ್ರೆಗೆ ಆಗಬೇಕಿದೆ ಚಿಕಿತ್ಸೆ
ಶಿಡ್ಲಘಟ್ಟ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರೋತ್ತಾನ ಭಾಗ-2 ಯೋಜನೆ ಉದ್ಘಾಟಿಸಲು ಬಂದ ಅಹಾರ ಮತ್ತು ನಾಗರಿಕ ಸರಬರಾಜು ಸಚಿವರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಪಡಿತರ ಆಹಾರ ಗೋಡೌನ್‌ಗೆ ಭೇಟಿ ನೀಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದಾಗ ಸಾರ್ವಜನಿಕರು ಸಚಿವರಿಗೆ ಸಮಸ್ಯೆಗಳ ಮಹಾಪೂರವೇ ಹರಿಸಿದರು. ಅಸ್ಪತ್ರೆಯಲ್ಲಿ ಔಷಧಗಳನ್ನು ಹೊರಗೆ ತೆಗೆದುಕೊಳ್ಳಬೇಕು, ರೋಗಿಗಗಳಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ, ಪ್ರಯೋಗಾಲಯದ ಕೊರತೆ ಹೀಗೆ ದೂರುಗಳನ್ನು ಹೇಳಿದರು. ಸಚಿವ ದಿನೇಶ್ ಗುಂಡೂರಾವ್ ವೈದ್ಯಾಧಿಕಾರಿ ಅಂಬರೀಶ್ ಗದ್ದಿಯವರ ಜೊತೆ ಮಾತನಾಡಿದಾಗ, ಸಿಬ್ಬಂದಿ ಕೊರತೆ ಇದ್ದು, ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಔಷಧಗಳು ಸರಿಯಾಗಿ ಲಬ್ಯವಿಲ್ಲದ ಕಾರಣ ಔಷಧ ಅಂಗಡಿಗಳಿಗೆ ಬರೆದುಕೊಡುತ್ತಿರುವುದಾಗಿ ತಿಳಿಸಿದರು. ಸಮಸ್ಯೆಗಳನ್ನು ಆಲಿಸಿದ ಸಚಿವರು ಆದಷ್ಟು ಬೇಗ ಸಿಬ್ಬಂದಿ ನೇಮಕ ಮಾಡುವುದಾಗಿ ಹೇಳಿದರು.
ಆಹಾರ ಇಲಾಖೆ ಗೋಡೌನ್‌ಗೆ ಸಚಿವರು ಭೇಟಿ ನೀಡಿದಾಗ ಸಾರ್ವಜನಿಕರು ಸಚಿವರಿಗೆ ಪಡಿತರ ಚೀಟಿ ಸಮಸ್ಯೆಗಳನ್ನು ವಿವರಿಸಿದರು. ಇದಕ್ಕೆ ಸಚಿವರು ಮರು ಪರಿಶೀಲನೆ ಮಾಡಿ ಪಡಿತರ ಚೀಟಿ ವಿತರಿಸಲಾಗವುದೆಂದು ತಿಳಿಸಿದರು.
ಕೇಂದ್ರ ಸಚಿವರಿಂದ ವೋಟ್‌ಬ್ಯಾಂಕ್ ರಾಜಕಾರಣ
ಚಿಂತಾಮಣಿ: ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ವೋಟ್‌ಬ್ಯಾಂಕ್‌ಗಾಗಿ ಜನರಿಗೆ ಸಾಲದ ವಿತರಣೆ ನಾಟಕವಾಡುತ್ತಿದ್ದಾರೆಂದು ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಂತ್ರಗಾರಿಕೆ ಪ್ರಾರಂಭಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕಳೆದ 5 ವರ್ಷಗಳ ಹಿಂದೆ ಗೆದ್ದು ಹೋಗಿ ಸೌಜನ್ಯಕ್ಕಾದರೂ ಕ್ಷೇತ್ರದ ಜನತೆಯ ಕಷ್ಟ-ಸುಖ ವಿಚಾರಣೆ ಮಾಡಲಿಲ್ಲ. ಕೇಂದ್ರದಲ್ಲಿ ತನ್ನ ಪ್ರಭಾವವಿದ್ದರೂ ಈ ಭಾಗದ ಜನರಿಗೆ ಯೋಜನೆಗಳನ್ನು ತರುವಲ್ಲಿ ವಿಫಲಗೊಂಡಿದ್ದಾರೆ ಎಂದು ಆರೋಪಿಸಿದರು.
9.30 ಲಕ್ಷ ಮೌಲ್ಯ ರಕ್ತ ಚಂದನ ವಶ
ಬಾಗೇಪಲ್ಲಿ: ಅಕ್ರಮವಾಗಿ ಸಾಗಿಸುತಿದ್ದ ಸುಮಾರು 9 ಲಕ್ಷ 30 ಸಾವಿರ ರು. ಬೆಲೆ ಬಾಳುವ 35 ತುಂಡುಗಳ ರಕ್ತ ಚಂದನ ಸೇರಿದಂತೆ ವಾಹನವನ್ನು ಗುರುವಾರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು ವಾಹನ ಚಾಲಕ ಪರಾರಿಯಾಗಿದ್ದಾನೆ.
ರಾ.ಹೆ.7ರ ಟೋಲ್ ಫ್ಲಾಜಾ ಬಳಿ ಬಾಗೇಪಲ್ಲಿ ಪೊಲೀಸ್ ಉಪನಿರೀಕ್ಷಕ ವಿ. ಮುನಿರೆಡ್ಡಿ ಮತ್ತು ಸಿಬ್ಬಂದಿ ರಾತ್ರಿ ಪಾಳಿಯದಲ್ಲಿ ಗಸ್ತು ತಿರುಗುತ್ತಿದ್ದಾಗ ಗುರುವಾರ ಬೆಳಗಿನ ಜಾವ ಸುಮಾರು 5.30 ರ ಸಮಯದಲ್ಲಿ ಪಟ್ಟಣಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ಟೋಲ್ ಪ್ಲಾಜಾ ಬಳಿ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಸರಕು ಸಾಗಾಣಿಕೆ ವಾಹನದ ಚಾಲಕ ಪೊಲೀಸ್ ವಾಹನವನ್ನು ಕಂಡು ಅತೀ ವೇಗವಾಗಿ ವಾಹನವನ್ನು ಚಾಲನೆ ಮಾಡಿದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಎಸ್‌ಐ ವಿ. ಮುನಿರೆಡ್ಡಿ ತಕ್ಷಣ ವಾಹನವನ್ನು ಹಿಂಬಾಲಿಸಿದ್ದಾರೆ. ಆಗ ಚಾಲಕ ವಾಹನವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದಾನೆ. ಈ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 9 ಲಕ್ಷ 30 ಸಾವಿರ ರು.ಗಳ ಬೆಳೆಬಾಳುವ ರಕ್ತ ಚಂದನದ ಸುಮಾರು 35 ತುಂಡುಗಳ ಸಮೇತ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಪರಾರಿಯಾಗಿರುವ ವಾಹನದ ಚಾಲಕ ಹಾಗೂ ಅಕ್ರಮವಾಗಿ ಬೆಳೆಬಾಳುವ ರಕ್ತ ಚಂದನದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಮಾಲೀಕನಿಗಾಗಿ ಬಲೆ ಬೀಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್‌ಐ ವಿ. ಮುನಿರೆಡ್ಡಿ ಹಾಗೂ ಪೇದೆಗಳಾದ ಶ್ರೀನಿವಾಸರೆಡ್ಡಿ, ಶಫೀ ಮತ್ತು ಜೀಪ್ ಚಾಲಕ ಮೂರ್ತಿ ಭಾಗವಹಿಸಿದ್ದರು.
ನಾಳೆಯಿಂದ ವಾರ್ಷಿಕ ಬ್ರಹ್ಮೋತ್ಸವಗಳು
ಕೆಜಿಎಫ್: ಬೇತಮಂಗಲ ಹೋಬಳಿ, ಬಂಗಾರು ತಿರುಪತಿ(ಗುಟ್ಟಹಳ್ಳಿ)ಯ ಶ್ರೀ ವೆಂಕಟರಮಣ ಸ್ವಾಮಿಯವರ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮೋತ್ಸವಗಳು ಫೆ.8 ರಿಂದ 17ರ ವರೆಗೆ ನಡೆಯಲಿದೆ. ಫೆ.8 ಶನಿವಾರದಂದು ಅಂಕುರಾರ್ಪರ್ಣೆ, ಧ್ವಜಾರೋಹಣೋತ್ಸವ, ಫೆ.12 ಗಜವಾಹನೋತ್ಸ, ಫೆ.13 ಗರುಡವಾಹನೋತ್ಸವ, ವಿಶೇಷ ತೋಪೋತ್ಸವ, ಕಲ್ಯಾಣೋತ್ಸವ, ಫೆ.16 ರಂದು ವಸಂತೋತ್ಸವ, ಶಯನೋತ್ಸವ ಫೆ.17 ರಂದು ಪುಷ್ಪಯಾನೋತ್ಸವ, ಶ್ರೀ ವೆಂಕಟರಮಣಸ್ವಾಮಿ ಉತ್ಸವಗಳು ನಡೆಯಲಿದೆ. ಬ್ರಹ್ಮೋತ್ಸವಗಳ ಸಂದರ್ಭದಲ್ಲಿ ಹಲವಾರು ರೀತಿಯ ಜಾನಪದ ಕಾರ್ಯಕ್ರಮಗಳು, ಸಾಂಸ್ಕೃತಿಕ, ಭಕ್ತರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.