'ನಾಯಕತ್ವ ಗುಣ ಬೆಳೆಸಿಕೊಳ್ಳಿ'
ಚಿಕ್ಕಬಳ್ಳಾಪುರ: ನಿರಂತರವಾಗಿ ಸಮಾಜದಲ್ಲಿನ ಅಭಿವೃದ್ಧಿ ಮತ್ತು ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತ ಸ್ವಯಂ ನಾಯಕತ್ವ ಗುಣ ಬೆಳೆಸಿಕೊಂಡು ಆರದ ದೀಪಗಳಾಗಿ ಸಮಾಜಕ್ಕಾಗಿ ದುಡಿಯಬೇಕೆಂದು ಸಂಪನ್ಮೂಲ ವ್ಯಕ್ತಿ ಪ್ರೊ. ಕೋಡಿರಂಗಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಎಸ್ಎಫ್ಐ ಆಯೋಜಿಸಿದ್ದ ಶಿಕ್ಷಣ ಖಾಸಗೀಕರಣ, ವ್ಯಾಪರೀಕರಣ ನೀತಿಗಳ ಖಂಡನೆ ಮತ್ತು ಶಾಶ್ವತ ನೀರಾವರಿ ಆಗ್ರಹದ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ಸರ್ಕಾರಗಳು ಹೆಚ್ಚಿಗೆ ಗುಣಮಟ್ಟ ಶಿಕ್ಷಣವನ್ನು ಒದಗಿಸುವುದಕ್ಕೆ ಒತ್ತು ಕೊಡುವ ಮೂಲಕ ವಿದ್ಯಾವಂತ ಪ್ರಜೆಗಳನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ವಿಶೇಷವಾಗಿ ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಬೇಕು. ಜನರ ಹಿತಾಸಕ್ತಿಗೆ ಅನುಗುಣವಾಗಿ ದಿಟ್ಟ ಕ್ರಮಗಳನ್ನು ಕೈಗೊಂಡು ಬದಲಾವಣೆ ತರಬೇಕೆಂದು ಒತ್ತಾಯಿಸಿದರು.
ಇಂದು ಶೈಕ್ಷಣಿಕ ಕ್ಷೇತ್ರ ವ್ಯಾಪಾರ ಉದ್ಯಮವಾಗಿ ಬದಲಾಗುತ್ತಿರುವುದು ದುರದೃಷ್ಟಕರ. ದೇಶದ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಬೇಕಾದ ಅನೇಕ ಶೈಕ್ಷಣಿಕ ಸಂಸ್ಥೆಗಳು ಪೋಷಕರನ್ನು ನಾನಾ ಆಮಿಷಗಳ ಮೂಲಕ ಗಮನ ಸೆಳೆದು ಶಿಕ್ಷಣ ಮಾರಾಟ ವಸ್ತುವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಉತ್ತಮ ಶಿಕ್ಷಣದ ಮೂಲಕ ಆಕರ್ಷಿಸಬೇಕಾಗಿರುವುದರ ಗಮನಕೊಟ್ಟು ಹೈಟೆಕ್ ಮಾದರಿಯಲ್ಲಿ ಬಿಂಬಿಸಿಕೊಳ್ಳುತ್ತಿವೆ. ಇಂದು ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ತೆಗೆದುಕೊಂಡು ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ಆಯೋಜಿಸಲಾಗುತ್ತಿರುವುದನ್ನೂ ಕಾಣಬಹುದು. ಇಷ್ಟೆಲ್ಲಾ ಅಲ್ಲಾ, ಬಡ ಮಕ್ಕಳಗಿಂತ ಉಳ್ಳವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವುದನ್ನೇ ಪ್ರಮುಖ ಗುರಿಯನ್ನಾಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲ ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ನೀತಿಗಳು ಬದಲಾಗುತ್ತರುವಂತಹುದು ಸಹಜ. ಇವುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ತಮ್ಮ ಶಿಕ್ಷಣಕ್ಕೆ ಮಾರಕ ಎನ್ನುವುದನ್ನು ಸ್ವತಃ ಅರಿತು ಹೋರಾಟಗಳ ಮೂಲಕ ಗಮನ ಸೆಳೆಯಬೇಕು. ಪ್ರಮುಖವಾಗಿ ಹೋರಾಟಗಳು ಸುಮ್ಮನೆ ನಡೆದು ನಿಂತು ಹೋಗಬಾರದು. ವಿದ್ಯಾರ್ಥಿಗಳು ತಮ್ಮ ಚಿಂತನೆಗಳ ಮೂಲಕ ನಾಯಕರಾಗಿ ಹೊರ ಹೊಮ್ಮಬೇಕೆಂದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗುರುದೇಸಾಯಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಮಕ್ಕಳ ಶಿಕ್ಷಣದ ಪರವಾಗಿ ಶೈಕ್ಷಣಿಕ ನೀತಿಗಳನ್ನು ರೂಪಿಸುವಲ್ಲಿ ವಿಫಲವಾಗಿವೆ. ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ ಎಂದೇಳುತ್ತಿರುವ ಇಂದಿನ ದಿನಗಳಲ್ಲೂ ಲಕ್ಷಾಂತರ ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಹಲವೆಡೆ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇನ್ನೂ ಆರ್ಟಿಇ ಜಾರಿಗೆ ತರಲಾಗುತ್ತಿದೆ ಎಂದೇಳುತ್ತಿರುವ ಕೇಂದ್ರ ಸರ್ಕಾರದ ಗೊಂದಲ ನೀತಿಯಿಂದ ಯೋಜನೆ ಯಶಸ್ವಿಯಾಗುತ್ತಿಲ್ಲ. ಖಾಸಗೀ ಶಿಕ್ಷಣ ಸಂಸ್ಥೆಗಳು ಮರುಳು ಮಾಡಿ ಬಡ ಮತ್ತು ಪೋಷಕರನ್ನು ವಂಚಿಸುತ್ತಿದ್ದರೂ ಸಹ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದರು.
ಕೇಂದ್ರ ಯುಪಿಎ ಸರ್ಕಾರ ಮತ್ತು ಬಿಜೆಪಿ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ. ಕೇವಲ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿಯೇ ಆದ್ಯತೆ ನೀಡುತ್ತಿದ್ದು ಜನಪರ ಶೈಕ್ಷಣಿಕ ನೀತಿಗಳಿಗೆ, ಸಮಸ್ಯೆಗಳ ನಿವಾರಣೆಗೆ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಪಿಎಂ ಮುಖಂಡರಾದ ಮುನಿವೆಂಕಟಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಚನ್ನರಾಯಪ್ಪ, ಜನವಾದಿ ಮಹಿಳಾ ಸಂಘಟನೆಯ ಮಧುಲತಾ, ಎಸ್ಎಫ್ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

