ಸಂಕುಚಿತ ಮನೋಸ್ಥಿತಿ ಅತಿರೇಕಕ್ಕೆ ದಾರಿ
ದೊಡ್ಡಬಳ್ಳಾಪುರ: ತೀರಾ ಸಂಕುಚಿತಗೊಳ್ಳುತ್ತಿರುವ ಮನುಷ್ಯ ಸಂಬಂಧಗಳು ಸಮಾಜದಲ್ಲಿ ಅತಿರೇಕದ ಸಂದರ್ಭಗಳು ಸೃಷ್ಠಿಯಾಗಲು ಕಾರಣವಾಗಿವೆ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕಿ ಸುಲೋಚನಾ ಡಾ.ವೆಂಕಟರೆಡ್ಡಿ ಹೇಳಿದರು. ಇಲ್ಲಿನ ಸಂವಾದ, ಸಿಜ್ಞಾ, ಅರಿವು ಮತ್ತು ಸಖಿ ಯುವ ಸಂವಾದ ಕೇಂದ್ರಗಳ ಒಡನಾಡಿ ಯುವಜನರ ವೇದಿಕೆಯ ಯುವಮುನ್ನಡೆ- ಸ್ನೇಹ ಶಿಕ್ಷಣ ಅಭಿಯಾನದ ಅಂಗವಾಗಿ ಶನಿವಾರ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾಜಿಕವಾಗಿ ನಡೆಯುತ್ತಿರುವ ಎಲ್ಲ ಬಗೆಯ ದೌರ್ಜನ್ಯ ಮತ್ತು ತಾರತಮ್ಯಗಳ ಮೂಲ ನಮ್ಮಲ್ಲೇ ಇದೆ. ಮೂಲಭೂತವಾಗಿ ಮನಸ್ಸುಗಳು ಬದಲಾಗಬೇಕು. ಆ ಬದಲಾವಣೆಗೆ ಪೂರಕವಾಗಿ ಶಿಕ್ಷಣ ದೊರೆಯಬೇಕು. ಹೆಣ್ಣು-ಗಂಡು ಎಂಬುದರ ಭೇದಭಾವ ಹೆಚ್ಚಾದಂತೆ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ನಿರ್ಮಲವಾದ ಪ್ರೀತಿ ಮತ್ತು ಭಾವಶುದ್ಧವಾದ ಆಲೋಚನೆಗಳು ಇಂದಿನ ಅಗತ್ಯ. ಹಿಂಸೆಯನ್ನು ನಿಗ್ರಹಿಸಿ ಪರಿಪೂರ್ಣ ಸ್ನೇಹಪರ ಚಿಂತನೆಗಳನ್ನು ಬೆಳೆಸಬೇಕಾದರೆ ಎಂದರು. ಆಂಗ್ಲ ವಿಭಾಗದ ಕೆ.ಆರ್.ರವಿಕಿರಣ್ ಮಾತನಾಡಿ, ಕಾಲೇಜುಗಳು ಕಲಿತವರನ್ನು ತಯಾರು ಮಾಡಿ ಮನುಷ್ಯತ್ವವನ್ನು ಕೊಡದಿದ್ದರೆ ಶಿಕ್ಷಣವೇ ವ್ಯರ್ಥ. ಈ ದೇಶದಲ್ಲಿ ಜನಾಂಗ, ಲಿಂಗ, ಭಾಷೆ, ಅಂತಸ್ತುಗಳ ಆಧಾರದಲ್ಲಿ ನಡೆಯುತ್ತಿರುವ ಶೋಷಣೆ ಅಸಮಾನತೆಗೆ ಮೂಲ ಎಂದು ಹೇಳಿದರು.
50 ನೇ ಕವಿ ಕಾವ್ಯ ಕಾರ್ಯಕ್ರಮ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಫೆ.12 ರ ಮಧ್ಯಾಹ್ನ 1.30 ಗಂಟೆಗೆ ನಗರದ ಅಂಜನಿ ಬಡಾವಣೆಯ ರಾಯಲ್ ಶಾಲೆಯಲ್ಲಿ 50 ನೇ ಕವಿ ಕಾವ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಚು.ಸಾ.ಪ ಪ್ರಧಾನ ಕಾರ್ಯದರ್ಶಿ ಶಿ.ಮ. ಮಂಜುನಾಥ್ ತಿಳಿಸಿದ್ದಾರೆ.
ರಾಯಲ್ ಶಾಲೆಯ ಪ್ರಾಂಶುಪಾಲ ಕೆ.ಆರ್.ಪ್ರೇಮಲತಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಯಲ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ.ಎನ್. ಮಾಲತಮ್ಮ ಅಧ್ಯಕ್ಷತೆ ವಹಿಸುವರು, ಜಿಲ್ಲಾ ಚು.ಸಾ.ಪ ಅಧ್ಯಕ್ಷ ಪಿ.ಎ.ಚಲಪತಿಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್. ನಾಗರಾಜ್, ಸಾಹಿತಿ ಕೋಟಗಲ್ ನಾಗಸುಬ್ರಮಣ್ಯಂ, ಚಿಕ್ಕಬಳ್ಳಾಪುರ ಲಕ್ಷ್ಮಿನರಸಿಂಹಯ್ಯ, ಸೀಕಲ್ ನರಸಿಂಹಪ್ಪ, ಎಂ.ವಿ. ಅಶ್ವತ್ಥನಾರಾಯಣ, ಮಹೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾಲೇಜು ವಾರ್ಷಿಕೋತ್ಸವ
ಚಿಂತಾಮಣಿ: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 2013-14 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು 10 ರ ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ವಿ.ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ. ನಾರಾಯಣಸ್ವಾಮಿ ವಹಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ಪುಟ್ಟಮಾದಯ್ಯ, ವೃತ್ತ ನಿರೀಕ್ಷಕ ನಂಜಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನೀರು ಕೊಡಿಸುವ ಕೆಲಸ ನೆನೆಗುದಿಗೆ
ಚನ್ನಪಟ್ಟಣ: ತಾಲೂಕಿನ ಎಸ್.ಎಂ.ಹಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ ಗೊಂಡಿದ್ದು, ಕೊಳವೆ ಬಾವಿ ಕೊರೆಯಲು ಹೊಂಗನೂರು ಗ್ರಾಮಸ್ಥರು ಅವಕಾಶ ನೀಡದ ಹಿನ್ನೆಲೆಯಲ್ಲಿ ನೀರು ಕೊಡಿಸುವ ಕೆಲಸ ನೆನೆಗುದಿಗೆ ಬಿದ್ದಿದೆ.
ಅಧಿಕಾರಿಗಳ ಸಮ್ಮುಖದಲ್ಲಿ ಕುಡಿಯುವ ನೀರಿನ ಕೊಳವೆ ಅಳವಡಿಕೆ ಕಾರ್ಯಕ್ಕೆ ಮುಂದಾದಾಗ ಗ್ರಾ.ಪಂ ಸದಸ್ಯ ಅನಂತಕೃಷ್ಣರಾಜೇ ಅರಸು ಮತ್ತು ಬೆಂಬಲಿಗರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಯನಿರ್ವಹಣಾಧಿಕಾರಿ ಮತ್ತು ತಹಸೀಲ್ದಾರರು ಮೌನಕ್ಕೆ ಶರಣಾದ ಕಾರಣ ಕಾಮಗಾರಿ ನಡೆಸಲು ಅವಕಾಶ ದೊರೆಯಲಿಲ್ಲ. ತೀವ್ರ ವಿವಾದಕ್ಕೆ ಕಾರಣವಾಗಿರುವ ಎಸ್.ಎಂ.ಹಳ್ಳಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರು ಸಭೆ ನಡೆಸಿದ ಹಿನ್ನೆಲೆಯಲ್ಲಿ ಇನ್ನೂ ಪರಿಹಾರ ಸಿಗಲಿದೆ ಎಂದು ಗ್ರಾಮಸ್ಥರು ಭಾವಿಸಿದ್ದರಾದರೂ ಹೊಂಗನೂರು ಗ್ರಾಮಸ್ಥರು ಅಡ್ಡಿಪಡಿಸಿದ್ದರಿಂದ ಸಮಸ್ಯೆ ಹಾಗೇ ಉಳಿದಿದೆ.
ಅಧಿಕಾರಿಗಳ ವೈಫಲ್ಯ: ಎಸ್.ಎಂ.ಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತನ ತೋರುತ್ತಿದ್ದು ಶುಕ್ರವಾರ ಸ್ಥಳದಲ್ಲೇ ಇದ್ದ ತಹಸೀಲ್ದಾರರು ನಿಷೇಧಾಜ್ಞೆ ಜಾರಿಗೆ ತಂದು ಕೆಲಸ ಮಾಡಲು ಅನುವು ಮಾಡಿ ಕೊಡಬಹುದಿತ್ತು. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಆರೋಪಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ ಗೊಂಡಿದ್ದು ನಮ್ಮ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬೇರೆಯದೇ ರೀತಿಯ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
ತಾಪಂ ಸಾಮಾನ್ಯ ಸಭೆ ಮತ್ತೆ ಮುಂದೂಡಿಕೆ
ಚನ್ನಪಟ್ಟಣ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಮತ್ತೆ ಮುಂದೂಡಲ್ಪಟ್ಟಿದ್ದು ಇದರೊಂದಿಗೆ ಸಭೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ಜ.29 ರಂದು ಕರೆಯಲಾಗಿದ್ದ ಸಾಮನ್ಯ ಸಭೆಗೆ ಜೆಡಿಎಸ್ ಸದಸ್ಯರು ಗೈರುಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ ಫೆ.7ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಇಂದು ಕಾರಣಾಂತರಗಳಿಂದ ಮುಂದೂಡಿರು ವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನರೇಗಾ ಯೋಜನೆಯ ಪರಿಶೀಲನೆಗೆ ಸಂಬಂಧಿಸಿದಂತೆ ಕೇಂದ್ರ ತಂಡ ತಾಲೂಕಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂಬುದು ಅಧಿಕಾರಿಗಳ ವಿವರಣೆ ಯಾಗಿದೆ. ಆದರೆ ಎರಡುಬಾರಿ ದಿನಾಂಕ ನಿಗದಿಯಾಗಿ ಸಭೆ ಮುಂದೂಡಲ್ಪಟ್ಟಿದ್ದು, ಅಧ್ಯಕ್ಷೆ ಪವಿತ್ರ ರಾಜಿನಾಮೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಆರಂಭಿಸಿದ ಶೀತಲ ಸಮರದಿಂದಾಗಿ ಸಭೆ ಮುಂದೂಡಬೇಕಾದ ಅನಿವಾರ್ಯತೆ ನಿರ್ಮಾಣ ಗೊಂಡಿದೆ ಎಂಬ ಆತಂಕ ಅಧಿಕಾರಿಗಳದ್ದಾಗಿದೆ.
ಪ್ರೇಮ ಪ್ರಕರಣ: ಘರ್ಷಣೆ
ಚಿಂತಾಮಣಿ: ಪ್ರೇಮ ಪ್ರಕರಣಕಕ್ಕೆ ಸಂಬಂಧಿಸಿ ಹುಡುಗ-ಹುಡುಗಿ ಪರ-ವಿರೋಧ 2 ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆದಿರುವುದರಿಂದ ನಾಯಿಂದ್ರಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ತಾಲೂಕಿನ ನಾಯಿಂದ್ರಹಳ್ಳಿಯಲ್ಲಿ ಕಳೆದ ಹಲವು ದಿನಗಳ ಹಿಂದೆ ಮೇಲ್ವರ್ಗದ ಯುವತಿಯೊಬ್ಬಳು ಹಿಂದುಳಿದ ವರ್ಗಕ್ಕೆ ಸೇರಿದ ಯುವಕನ ಜೊತೆ ನಡೆಸಿದೆ ಎನ್ನಲಾದ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯ್ತಿ ನಡೆಯುತ್ತಿರುವಾಗ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ 2 ಕಡೆಯ ಮುಖಂಡರು ಸಮಾದಾನ ಪಡಿಸಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಾಂತರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ.
ಇಂದು ಉದ್ಯೋಗ ಆಸಕ್ತರ ಸಮಾವೇಶ
ಶ್ರೀನಿವಾಸಪುರ: ಜಿಲ್ಲಾ ಬಲಿಜಿಗ ನೌಕರರ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಶ್ರೀ ಸಾಯಿಯೋಗಿರಾಜ್ ಫೈನಾನ್ಷಿಯಲ್ ಕನ್ಸೆಲ್ಟೆನ್ಸಿ ಸರ್ವಿಸ್ರವರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಲಜಿಗ ಜನಾಂಗದ ವಿದ್ಯಾರ್ಥಿನಿಯರು ಸಮಾವೇಶ ಮತ್ತು ಉದ್ಯೋಗ ಆಸಕ್ತರ ಸಮಾವೇಶವನ್ನು ದಿ. 9 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದು ಎರಡು ಜಿಲ್ಲೆಗಳ ಬಲಿಜಿಗ ಜನಾಂಗದವರೆಲ್ಲರು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಬಲಿಜಿಗ ಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಂಕ್ ರಾಜಶೇಖರ ಹಾಗೂ ಶ್ರಿನಿವಾಸಪುರ ತಾಲೂಕಿನ ಸಂಚಾಲಕ ಎಂ. ಶಂಕರಪ್ಪ ಕೋರಿದ್ದಾರೆ.
ಕುಡಿವ ನೀರಿಗೆ ಹಾಹಾಕಾರ
ಶ್ರೀನಿವಾಸಪುರ: ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಂಬಂಧಪಟ್ಟವವರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಾಲೂಕಿನಾದ್ಯಂತ ಕೆರೆಗಳು ಬತ್ತಿ ಹೋಗಿ ಅಂತರ್ಜಲಮಟ್ಟ ಪಾತಳಕ್ಕೆ ಕುಸಿದು ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ಸಂಬಂಧಪಟ್ಟವರು ಜಾಣಕುರುಡು ತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗಣೇಶ್ಗೆ ಅಭಿನಂದನೆ
ಮಾಲೂರು: ರಾಜ್ಯ ಪ್ರತಿಕಾ ಅಕಾಡಮಿ ಪ್ರಶಸ್ತಿ ಪಡೆದ ಕೋಲಾರದ ಪತ್ರಕರ್ತ ಕೆ.ಎಸ್. ಗಣೇಶ್ರನ್ನು ತಾಲೂಕು ಪತ್ರಕರ್ತರ ಸಂಘ ಅಭಿನಂಧಿಸಿದೆ. ಸಂಘದ ಅಧ್ಯಕ್ಷ ಎಂ.ವಿ. ರವೀಂದ್ರ ಹೇಳಿಕೆ ನೀಡಿ, ಕ್ರೀಯಾಶೀಲರಾಗಿರುವ ಗಣೇಶರ ಸಾಧನೆಯನ್ನು ಗುರ್ತಿಸಿ ಗೌರವಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ. ಸಂಘದ ಕಾರ್ಯದರ್ಶಿ ರವಿ ಕುಮಾರ್, ಹಿರಿಯ ಪತ್ರಕರ್ತ ಎಂ.ಬಿ. ಸದಾಶಿವಯ್ಯ, ಪವನ್ ರಮೇಶ್, ಎಸ್.ವಿ. ಲೋಕೇಶ್, ರಾಜಗೋಪಾಲ್ ಅಭಿನಂದನೆ ಸಲ್ಲಿಸಿದ್ದಾರೆ.
ತೇಜಸ್ವಿ ಬರಹದ ಮರು ಓದು ಇಂದಿನ ಅಗತ್ಯ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಓಣಿಯಲ್ಲೊಂದು ಸಾಹಿತ್ಯ ಕಾರ್ಯಕ್ರಮ ನೇಯ್ಗೆಬೀದಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬರೆಹಗಾರ ಪೂರ್ಣಚಂದ್ರತೇಜಸ್ವಿ ಅವರ ಸಾಹಿತ್ಯ ಕುರಿತು ಓದುಗ ಕೆ.ಎನ್.ಮೋಹನ್ ಮಾತನಾಡಿದರು. ಸಾಹಿತ್ಯದ ಮೂಲಕ ವಿಜ್ಞಾನದ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ತೇಜಸ್ವಿ ಅವರ ಕೊಡುಗೆ ಮಹತ್ವದ್ದು. ಮಿಲೇನಿಯಂ ಪುಸ್ತಕ ಮಾಲಿಕೆ ಕನ್ನಡ ಮೈಲುಗಲ್ಲು. ವಿಶ್ವ ಸಾಹಿತ್ಯಕ್ಕೆ ಕನ್ನಡದ ಮಹತ್ವದ ಕೊಡುಗೆ ಅದು. ಇತ್ತೀಚಿನ ದಿನಗಳಲ್ಲಿ ತೇಜಸ್ವಿ ಕುರಿತ ಹೊಸ ಓದು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಾಹಿತ್ಯ ಲೋಕ ಚಿಂತಿಸಬೇಕಿದೆ ಎಂದರು.
ಕಸಾಪ ತಾ.ಅಧ್ಯಕ್ಷ ಡಿ.ಶ್ರೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯಾಸಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಓಣಿ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ವಿವರಿಸಿದರು. ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದ ಕೆ.ಸಿ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು. ನೇಯ್ಗೆಬೀದಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರುದ್ರೇಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗಪ್ರಿಯ, ಕಾರ್ಯದರ್ಶಿ ಕೆ.ಮಹಾಲಿಂಗಯ್ಯ, ತಾ.ಕಸಾಪ ಮಾಜಿ ಅಧ್ಯಕ್ಷ ಡಾ.ನರಸಿಂಹಮೂರ್ತಿ, ತಾ.ಕಾರ್ಯದರ್ಶಿ ಎಚ್.ಎನ್.ಪ್ರಕಾಶ್, ಜ್ಯೋತಿಕುಮಾರ್ ಹಾಜರಿದ್ದರು.
ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಗ್ರಾಮದಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೃತಪಟ್ಟವನನ್ನು ತಾಲೂಕಿನ ಇಸ್ತೂರು ಗ್ರಾಮದ ವಿದ್ಯಾರ್ಥಿ ವೆಂಕಟೇಶ್(14) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾಡನೂರು ಗ್ರಾಮದ ಅರ್ಜುನ್(20) ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆಟ್ರೋಲ್ ಟ್ಯಾಂಕರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

