ಕೋಲಾರ

ಅನವಶ್ಯಕ ಚರ್ಚೆಗೆ ಸಮಯ ವ್ಯರ್ಥ

Published On :

ಚಿಕ್ಕಬಳ್ಳಾಪುರ: ಶಾಲೆಗಳಿಗೆ ಕಲಿಕೋಪಕರಣ ಮತ್ತು ಪೀಠೋಪಕರಣಗಳ ವಿತರಣೆಗೆ ಸಂಬಂಧಿಸಿ ಅನವಶ್ಯಕವಾಗಿ ನಡೆದ ಚರ್ಚೆ ಜಿಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಪರಸ್ಪರ ವಾಗ್ವಾದವನ್ನುಂಟು ಮಾಡಿತು.
ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕಾಣಿಸಿಕೊಳ್ಳಲಿರುವ ನೀರಿನ ಸಮಸ್ಯೆ ಸೇರಿದಂತೆ ಪ್ರಮುಖ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಆದ್ಯತೆ ಸಿಗದೇ ಹಲವರ ಬೇಸರಕ್ಕೆ ಕಾರಣವಾಯಿತು.
ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯೆ ಮಂಜುಳಾ ವೆಂಕಟೇಶ್, ತಮ್ಮ ಗಮನಕ್ಕೆ ಬಾರದೇ ತಮ್ಮ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗೆ ಪೀಠೋಪಕರಣ ಮತ್ತು ಕಲಿಕೋಪಕರಣಗಳನ್ನು ವಿತರಿಸಿದ್ದು ಕಳಪೆ ಗುಣಮಟ್ಟದಿಂದ ಕೂಡಿದೆ. ಇದರಲ್ಲಿ ಅವ್ಯವಹಾರ ನಡೆದಿರುವುದರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಜನರು ಜಿಪಂನ್ನು ನಿಂದಿಸುತ್ತಿದ್ದು ಅವ್ಯವಹಾರದ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಗೆ ಯಾವ ರೀತಿ ಪರಿಕರಗಳನ್ನು ವಿತರಿಸಲಾಗಿದೆ ಎನ್ನುವುದರ ಬಗ್ಗೆ ಮೊದಲು ಉತ್ತರ ನೀಡಿ ತಪ್ಪನ್ನು ಒಪ್ಪಿಕೊಳ್ಳಬೇಕೆಂದು ಪಟ್ಟು ಹಿಡಿದರು.
ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಾತನಾಡಿ, ನಂದಿ ಕ್ಷೇತ್ರದ ಸರ್ಕಾರಿ ಪ್ರೌಢಶಾಲೆಗೆ ಜಿಪಂನಿಂದ ಯಾವುದೇ ಕಲಿಕೋಪಕರಣ ವಿತರಿಸಿಲ್ಲ. ಖರೀದಿಸಲು ಅನುದಾನವನ್ನು ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಸಮಜಾಯಿಷಿ ನೀಡಲಾಗಿದೆ ಎಂದರೂ ಸದಸ್ಯೆ ಮಂಜುಳಾ ಸಮಾಧಾನಗೊಳ್ಳಲಿಲ್ಲ. ಜಿಪಂ ನಿಂದ ಸರಬರಾಜು ಮಾಡಿಲ್ಲ ಎಂದೇಳುವಾಗ ಶಾಲೆಗೆ ಹೇಗೆ ಕಳಪೆ ಗುಣಮಟ್ಟದ ಪೀಠೋಪಕರಣಗಳು ಬಂದವು ಎನ್ನುವುದನ್ನು ತಿಳಿಸಬೇಕೆಂದು ಆಗ್ರಹಿಸಿ, ಇದರಲ್ಲಿ ಹಣವನ್ನು ಲಪಟಾಯಿಸಲಾಗಿದೆ ಎಂದರು.
ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮಾತನಾಡಿ, ಜಿಪಂನಿಂದ ಅನುದಾನವೇ ಬಿಡುಗಡೆಯಾಗಿಲ್ಲ, ಪೀಠೋಪಕರಣಗಳನ್ನು ಖರೀದಿಸಿಯೇ ಇಲ್ಲ. ಹೀಗಿರುವಾಗ ಏನಂತಾ ತನಿಖೆ ಮಾಡಬೇಕು. ಇನ್ನೂ ಯಾವ ರೀತಿ ಹಗರಣ ನಡೆದಿದೆ ಎಂದೇಳುವುದು, ಸರ್ಕಾರದ ಹಣ ಖರ್ಚಾಗಿಲ್ಲ ಎಂದ ಪಕ್ಷದಲ್ಲಿ ದಾನಿಗಳು ನೀಡಿರಬಹುದು. ಅದನ್ನು ನಾವು ಪ್ರಶ್ನಿಸುವುದು ಎಷ್ಟು ಸಮಂಜಸ. ಸುಮ್ಮನೆ ಮಾತಿಗೆ ಬಂದಂತೆ ಮಾತನಾಡುವುದಲ್ಲ. ಸ್ವಲ್ಪ ತಿಳಿದುಕೊಂಡು ಮಾತನಾಡಬೇಕೆಂದು ಪ್ರತ್ಯುತ್ತರ ನೀಡಿದರು.
ಎಸ್.ಎನ್. ಚಿನ್ನಪ್ಪ ಮಾತನಾಡಿ, 13 ನೇ ಹಣಕಾಸಿನಲ್ಲಿ ಹೊಸದಾಗಿ ಶಾಲೆಗಳಿಗೆ ಪೀಠೋಪರಣಗಳನ್ನು ವಿತರಿಸಬೇಕಾಗಿದೆ. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಬೇಕೆಂದು ಕೋರಿದರು.
ಶೇ.80 ರಷ್ಟು ವಂಚನೆ: ಜಿಪಂ ಸದಸ್ಯ ಶ್ರೀರಾಮರೆಡ್ಡಿ ಮಾತನಾಡಿ, ಶಾಲೆಗಳಿಗೆ ಹೊಸದಾಗಿ ಪೀಠೋಪಕರಣಗಳನ್ನು ವಿತರಿಸುವುದರ ಬದಲು ಜನರ ಸಮಸ್ಯೆಯನ್ನು ಬಗೆಹರಿಸಲು ಅನುಕೂಲವಾಗುವಂತೆ ರಸ್ತೆ ದುರಸ್ತಿ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮೀಸಲಿಡಬೇಕು. ಈಗಾಗಲೇ ಸರ್ಕಾರದಿಂದ ಪೀಠೋಪಕರಣಗಳ ಖರೀದಿಗಾಗಿ ಸಾಕಷ್ಟು ಅನುದಾನ ಕೊಡಲಾಗುತ್ತಿದೆ. ಆದರೆ, ಶೇ.60 ರಷ್ಟು ಹಣವನ್ನು ಲೂಟಿ ಮಾಡುತ್ತಿದ್ದು ಅಕ್ರಮ ವ್ಯವಹಾರದಲ್ಲಿ ಬಹಳಷ್ಟು ಮಂದಿ ಅಮಾನತ್ ಆಗಿದ್ದಾರೆ. ಇನ್ನೂ ಪ್ರಾಮಾಣಿಕವಾಗಿ ತನಿಖೆ ಕೈಗೊಂಡರೆ ಶೇ.80 ರಷ್ಟು ಶಾಲೆಗಳಲ್ಲಿ ವಂಚನೆಯಾಗುತ್ತಿರುವುದು ತಿಳಿದು ಬರುತ್ತದೆ ಎಂದು ಆರೋಪಿಸಿದರು.
ಮಾತ್ರೆ ನಾಶ; ಆಕ್ರೋಶ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಲಕ್ಷ್ಯದಿಂದ ಉಪಯುಕ್ತ ಮಾತ್ರೆಗಳನ್ನು ವ್ಯರ್ಥವಾಗಿ ಬಿಸಾಡಿರುವ ವಿಷಯವನ್ನು ಪ್ರಸ್ತಾಪಿಸಿದ ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಬಡವರಿಗಾಗಿ ಉಪಯೋಗಿಸಬೇಕಾದ ಮಾತ್ರೆಗಳನ್ನು ಬಿಸಾಡಿರುವ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಡ. ಅವರನ್ನು ಅಮಾನತ್ ಮಾಡಿ ಕಳುಹಿಸಬೇಕೆಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಸ್ವಾಮಿ, ಈಗಾಗಲೇ ತಾವು ಸೇರಿದಂತೆ ಅಧಿಕಾರಿಗಳು ವಿಚಾರಣೆಗೆ ಗುರಿಯಾಗಿದ್ದು ತಪ್ಪಿಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.