ಎಸ್ಬಿಎಂ ವಿರುದ್ಧ ಗ್ರಾಹಕರ ಪ್ರತಿಭಟನೆ
ಗೌರಿಬಿದನೂರು: ತಾಲೂಕಿನ ಇಡಗೂರು ಗ್ರಾಮದಲ್ಲಿ ಸ್ಟೇಟ್ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ವಿರುದ್ಧ ಸ್ಥಳೀಯ ಗ್ರಾಹಕರು ದಿಡೀರ್ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಮ್ಯಾನೇಜರ್ ವಾಣಿ ಅವರು ರೈತರಿಗೆ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಮಂಜೂರು ಮಾಡುವಲ್ಲಿ ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದ್ದು, ಜೊತೆಗೆ ಗ್ರಾಮಸ್ಥರ ಬಗ್ಗೆ ಅಸಡ್ಡೆ ಮಾತುಗಳನ್ನಾಡುವ ಬಗ್ಗೆ ಗ್ರಾಹಕರು ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ನೇತೃತ್ವ ವಹಿಸಿದ ರೈತ ಮುಖಂಡ ಜಿ.ಸಿ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಗಳು ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಆಶ್ವಾಸನೆ ನೀಡುತ್ತಿದೆ. ಆದರೆ ಬ್ಯಾಂಕುಗಳು ಅದಕ್ಕೆ ತದ್ವಿರುದ್ಧವಾಗಿ ರೈತರೊಡನೆ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು. ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರೊಡನೆ ವಾಗ್ವಾದ ತೀವ್ರಗೊಂಡು ನಂತರ ಸ್ಟೇಟ್ಬ್ಯಾಂಕ್ ಆಫ್ ಮೈಸೂರುನ ಹಿರಿಯ ಮ್ಯಾನೇಜರ್ ರಂಗನಾಥ್ ಮತ್ತು ಪೊಲೀಸರೊಡನೆ ಮಧ್ಯಪ್ರವೇಶದ ನಂತರ ಪರಿಸ್ಥಿತಿ ತಿಳಿಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಸೋಮಶೇಖರಯ್ಯ, ರಾಜ್ ಕುಮಾರ್, ವೆಂಕಟಾಚಲ, ತಿಮ್ಮಮ್ಮ, ಭಾಗ್ಯ ಲಕ್ಷ್ಮಮ್ಮ, ಕೊಟಪಣ್ಣ, ಭೀಮರಾಜ್, ರಾಮಕೃಷ್ಣ ಇದ್ದರು.
ನಗರಸಭೆ ಸದಸ್ಯನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಗೌತಮ್ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ನಗರಸಭಾ ಸದಸ್ಯ ಜಿಯಾವುಲ್ಲಾ ವರ್ತನೆ ವಿರುದ್ಧ ನಗರಸಭೆ ಕಾರ್ಯಕಲಾಪ ಬಹಿಷ್ಕರಿಸಿದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಮುತ್ತಿಗೆ ಹಾಕಿದರು.
ಮಂಗಳವಾರ ಬೆಳಿಗ್ಗೆ ನಗರಸಭೆ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಗೌತಮ್ ಕೊಠಡಿಗೆ ಆಗಮಿಸಿದ ನಗರಸಭಾ ಸದಸ್ಯ ಜಿಯಾವುಲ್ಲಾ ವಾರ್ಡ್ ನೀರಿನ ಸಮಸ್ಯೆ ಬಗ್ಗೆ ಮಾತಿನ ಚಕಮುಕಿ ನಡೆದು ಹಲ್ಲೆಗೆ ಯತ್ನಿಸಿದ ಎನ್ನಲಾಗಿದೆ. ಜಿಯಾವುಲ್ಲಾ ವಿರುದ್ಧ ಘೋಷಣೆ ಕೂಗಿ ಆತನ ವಿರುದ್ಧ ಪ್ರಕರಣ ದಾಖಲಾಗಬೇಕೆಂದು ಹಾಗೂ ನಗರಸಭಾ ಅಧಿಕಾರಿ ಪೌರ ಕಾರ್ಮಿಕರಿಗೆ ರಕ್ಷಣೆ ಕಲ್ಪಿಸಿಕೊಡಬೇಕೆಂದು ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಸಣ್ಣತಿಮ್ಮಪ್ಪ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ದೂರನ್ನು ಸ್ವೀಕರಿಸಿದ ಪೊಲೀಸರು ಹಲ್ಲೆಗೆ ಯತ್ನಿಸಿದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಪ್ರತಿಭಟನೆ ಹಿಂಪಡೆದರು. ನಂತರ ಪೌರ ಸೇವಾ ನೌಕರರ ಅಧ್ಯಕ್ಷ ಸಿ.ಕೆ. ಬಾಬು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ನೀಡಿದರು. ನಗರಸಭೆ ಅಧಿಕಾರಿಗಳಾದ ಚಕ್ರಪಾಣಿ, ಗಂಗಣ್ಣ, ಪ್ರದೀಪ್ ಕುಮಾರ್, ಪೌರ ಕಾರ್ಮಿಕರಾದ ಶಬೀರ್ ಪಾಷ, ಗೋಪಾಲಕೃಷ್ಣ, ಅಣ್ಣಾಯಪ್ಪ, ಮುನಿನಾರಾಯಣಪ್ಪ, ವೆಂಕಟೇಶ್ ಇದ್ದರು.
ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಕೆಜಿಎಫ್: ಕಳೆದ 10 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದ್ದರೂ ಗ್ರಾಪಂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಉದಯನಗರ ಹಾಗೂ ಮಲ್ಲಂಪಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
ಪಾರಂಡಹಳ್ಳಿ ಗ್ರಾಪಂ ವತಿಯಿಂದ ಮಲ್ಲಂಪಲ್ಲಿ ಹಾಗೂ ಉದಯನಗರ ಗ್ರಾಮಕ್ಕೆ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ ಅದರಲ್ಲಿ ಎರಡು ಕೊಳವೆ ಬಾವಿಗಳಿಗೆ ಮೋಟರ್ ಅಳವಡಿಸಿಲ್ಲ ಇರುವ ಒಂದು ಕೊಳವೆ ಬಾವಿಯಿಂದ ಸರಬರಾಜು ಮಾಡುತ್ತಿರುವ ನೀರನ್ನು ಪಾರಂಡಹಳ್ಳಿ ಗ್ರಾಪಂಗೆ ಸೇರಿದ ಡಾ. ವಾಟರ್ಗೆ ಪೂರೈಕೆ ಮಾಡಲಾಗುತ್ತಿದ್ದು ಒಂದು ಕ್ಯಾನ್ ನೀರಿಗೆ 8 ರಿಂದ 20 ರು.ಗಳಿಗೆ ಮಾರಾಟ ಮಾಡುತ್ತಿರುವ ಕಾರಣ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಈ ಸಂಬಂಧ ಗ್ರಾಪಂ ಅಧ್ಯಕ್ಷ, ಪಿಡಿಒಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಬೇಕು, ಕೆಟ್ಟು ಹೋಗಿರುವ ಕೊಳವೆ ಬಾವಿಯ ಮೋಟಾರನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಉದಯನಗರ ಹಾಗೂ ಮಲ್ಲಂಪಲ್ಲಿ ಗ್ರಾಮಸ್ಥರಾದ ಸುರೇಶ್, ಮುನಿಯಮ್ಮ, ಮಂಜುಳಾ, ಕುಮಾರಿ, ಗಂಗಮ್ಮ, ಲಕ್ಷ್ಮಮ್ಮ, ವೆಂಕಟಮ್ಮ, ರಾಮಪ್ಪ, ಕೃಷ್ಣಪ್ಪ, ತಿಮ್ಮಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

