ಸಾಂಸ್ಕೃತಿಕ ನೀತಿ ಸಂಹಿತೆ ಸ್ವಾತಂತ್ರ್ಯಕ್ಕೆ ಮಾರಕ
ಕೋಲಾರ (ಡಾ.ಸಿ.ಎನ್.ಆರ್.ರಾವ್ ವೇದಿಕೆ)
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಾಂಸ್ಕೃತಿಕ ನೀತಿ ಸಂಹಿತೆ ಮಾನವನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗಲಿರುವುದರಿಂದ ನಾಡಿನ ಜನತೆ ಸಾಂಸ್ಕೃತಿಕ ನೀತಿಯನ್ನು ಧಿಕ್ಕರಿಸಬೇಕೆಂದು ವಿಚಾರವಾದಿ ಪ್ರೊ.ಜಿ.ಕೆ. ಗೋವಿಂದರಾವ್ ತಿಳಿಸಿದರು.
ಅವರು ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ನೀತಿ ಸಂಹಿತೆ ಯಾವ ಕಾರಣಕ್ಕಾಗಿ ಜಾರಿಗೆ ತರಲಾಗುತ್ತಿದೆ, ಈ ನೀತಿ ಸಂಹಿತೆಯ ಉದ್ದೇಶವೇನು ಎಂಬ ಕುರಿತು ರಾಜ್ಯ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, ಜನತೆಯ ಅಭಿಪ್ರಾಯ ಕೇಳದೆ ನೀತಿ ಸಂಹಿತೆ ಜಾರಿಗೆ ತಂದರೆ ಅದಕ್ಕೆ ಯಾವುದೇ ಕಿಮ್ಮತ್ತು ಇರಲಾರದು ಎಂದರು.
ಅರ್ಥವಿಲ್ಲದ ಸಾಂಸ್ಕೃತಿಕ ನೀತಿ ಸಂಹಿತೆ ಜಾರಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ, ಯಾರನ್ನೊ ನಿಯಂತ್ರಿಸಲು ಏಕಾಏಕಿ ರಿಮೋಟ್‌ನಿಂದ ನಿಯಂತ್ರಣ ಮಾಡುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಉಲ್ಲಂಘಿಸಿದಂತಾಗುವುದರಿಂದ ನೀತಿ ಸಂಹಿತೆಯನ್ನು ಜನರು ಕಿತ್ತೊಗೆಯಬೇಕೆಂದು ಕರೆ ನೀಡಿದರು.
ಜಾತ್ಯತೀತರು ಎಂದು ಹೇಳಿಕೊಳ್ಳುವವರು ಮನುಷ್ಯನ ವಿಚಾರಗಳಿಗೆ ಮಾರಕವಾಗುವ ವಿಚಾರಗಳ ಬಗ್ಗೆ ಗಮನ ನೀಡಿದಲ್ಲಿ ಮುಂದೊಂದು ದಿನ ಜಾತಿವಾದಿಗಳು ತಮಗೆ ಇಷ್ಟವಾದ ನೀತಿಗಳನ್ನು ಜಾರಿಗೆ ತರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿ ಅವ್ಯವಸ್ಥೆಗಳು ಇದ್ದಲ್ಲಿ ಮಾತ್ರ ವ್ಯವಸ್ಥೆ ಸಾಧ್ಯ, ಎಲ್ಲವೂ ಸರಿಯಿದ್ದರೆ ಪ್ರಶ್ನಿಗಳಿಗೆ ಉತ್ತರ ಸಿಗುವುದಿಲ್ಲ, ಸಾಹಿತಿಗಳಿಗೆ ರಾಜಕಾರಣಿಯ ಬಗ್ಗೆ ಮಾತನಾಡಲು ಹಕ್ಕಿಲ್ಲವೆಂದು ಇತ್ತೀಚೆಗೆ ರಾಜಕಾರಣಿಯೊಬ್ಬರು ಹೇಳಿದ್ದು ಈ ಬಗ್ಗೆ ಸಾಕಷ್ಟು ಚರ್ಚೆ, ವಿವಾದ ಎದುರಾಗಿತ್ತು. ಸಾಹಿತ್ಯದ ಬಗ್ಗೆ ಅರಿಯದ ವ್ಯಕ್ತಿಗಳು ಬಾಯಿಗೆ ಬಂದಂತೆ ಮಾತನಾಡಬಾರದು, ವಿಚಾರವಂತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿ ಇಲ್ಲವೇ ಪ್ರಕಟವಾಗಿರುವ ಸಾಹಿತ್ಯವನ್ನು ಜನರಿಗೆ ತಲುಪಿಸಲಾಗದ ರಾಜಕಾರಣಿಗಳು ಸಾಹಿತಿಗಳ ಬಗ್ಗೆ ಮಾತನಾಡುವುದು ಎಷ್ಟು ಸರಿ, ಈ ರೀತಿಯ ಹೇಳಿಕೆಗಳು ತಮ್ಮ ಕರ್ತವ್ಯಗಳಿಂದ ನುಣುಚಿಕೊಂಡಂತಾಗುವುದಿಲ್ಲವೇ ಎಂದು ರಾಜಕಾರಣಿಗಳನ್ನು ಪ್ರಶ್ನಿಸಿದರು.
ಇತ್ತೀಚೆಗೆ ಧರ್ಮ ಮತ್ತು ಮತಧರ್ಮದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಧರ್ಮ ಎಂದರೆ ನಿರಂತರ ಹುಡುಕಾಟ, ಮತಧರ್ಮವೆಂದರೆ ಸ್ವಯಂ ಘೋಷಿತ ಮೌಢ್ಯಗಳನ್ನು ಬೇರೆಯವರ ಮೇಲೆ ಹೇರುವುದಾಗಿದ್ದು ಇದನ್ನು ತಿರಸ್ಕರಿಸದಿದ್ದರೆ ಧರ್ಮಕ್ಕೆ ಬೆಲೆ ಸಿಗಲಾರದೆಂದರು.
ಧರ್ಮ ಎಂಬುದು ವಿಧಾನಸೌಧದಲ್ಲಿ ಸಿಗುವುದಿಲ್ಲ, ಮತಧರ್ಮ ಮತ್ತು ವಿಧಾನಸೌಧ ಬೇಕಾದರೆ ಒಂದಾಗಬಹುದೆಂದು ಗೋವಿಂದರಾವ್ ಮಾರ್ಮಿಕವಾಗಿ ನುಡಿದರು.
ಧರ್ಮವನ್ನು ಬೇಕಾದರೆ ನಾವು ಸಾಹಿತ್ಯದಲ್ಲಿ ಹುಡುಕಲು ಸಾಧ್ಯವಿದೆ, ಅದಕ್ಕಾಗಿ ಸಾಹಿತ್ಯ ಸಮ್ಮೇಳನಗಳು ರಚನಾತ್ಮಕವಾಗಿ ನಡೆಯಬೇಕಾಗಿದೆ ಎಂದರು. ಕುಂ.ವೀರಭದ್ರಪ್ಪನವರು ವಿಚಾರವಂತ ಸಾಹಿತಿ, ಇತ್ತೀಚೆಗೆ ಕಾರ್ಯಕ್ರಮಮೂಂದರಲ್ಲಿ ಜ್ಞಾನಪೀಠ ಪ್ರಶಸ್ತಿ ಎಂಬುದು ನಾನ್‌ಸೆನ್ಸ್ ಎಂದು ಟೀಕಿಸಿದ್ದಾರೆ. ಈ ರೀತಿ ಪ್ರಶಸ್ತಿ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು. ಒಂದು ವೇಳೆ ಇಂತಹ ಸಾಹಿತಿಗೆ ಜ್ಞಾನಪೀಠ ಪ್ರಶಸ್ತಿ ನೀಡಿರುವುದು ಸರಿಯಿಲ್ಲವೆಂದು ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತು. ಜ್ಞಾನಪೀಠ ಪ್ರಶಸ್ತಿಯ ಬಗ್ಗೆಯೇ ಮಾತನಾಡಿರುವುದು ಅತಿರೇಕದ ಪರಮಾವಧಿ ಎಂದು ಅಭಿಪ್ರಾಯಿಸಿದರು.
ಡಬ್ಬಿಂಗ್ ಸಿನಿಮಾಗಳ ಬಗ್ಗೆಯೂ ಪ್ರಸ್ತಾಪಿಸಿದ ಗೋವಿಂದರಾವ್, ಯಾವುದೋ ಭಾಷೆಯ ಚಿತ್ರವನ್ನು ಎರವಲು ತಂದು ಯಥವತ್ತಾಗಿ ನಕಲು ಮಾಡುವುದು ಸರಿಯಲ್ಲ, ಡಬ್ಬಿಂ್ ಚಿತ್ರಗಳಿಂದಾಗಿ ಕನ್ನಡ ಸಾಹಿತ್ಯವೂ ಡಬ್ಬ ಸಾಹಿತ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಹಿತ್ಯ, ಸಾಹಿತಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಸೃಜನಶೀಲ ಸಾಹಿತ್ಯ ಓದುಗನಿಗೆ ತಲುಪಿಸಬೇಕಾಗಿದ್ದು ಇದರಲ್ಲಿ ವೈಚಾರಿಕತೆಗೂ ಸ್ಥಾನ ಸಿಗದಿದ್ದರೆ ವ್ಯವಸ್ಥೆಯನ್ನು ತಲ್ಲಣಗೊಳಿಸುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

