ಪ್ರಭಾವ ಬೀರಿದ ವಿಜ್ಞಾನ ಗೋಷ್ಠಿ
ಕೋಲಾರ: ವಿದ್ಯಾರ್ಥಿಗಳ ಭೌತಿಕ ಸಾಮರ್ಥ್ಯ ಹೆಚ್ಚಿಸುವ ಹಾಗೂ ಗುಣಾತ್ಮಕ ವಿಚಾರಗಳ ಕಡೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ಆಯೋಜಿಸಿದಲ್ಲಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತದೆ ಎಂಬುದಕ್ಕೆ ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ನಡೆದ ವಿಜ್ಞಾನ ಮತ್ತು ಪ್ರಸ್ತುತತೆ ಕುರಿತ ವಿಚಾರಗೋಷ್ಠಿ ಉತ್ತಮ ನಿದರ್ಶನವಾಗಿತ್ತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ನೂರಾರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಲ್ಲಿ ಸಫಲತೆ ಕಂಡಿತು. ವಿಜ್ಞಾನದ ಸಾಮಾಜೀಕರಣ ಕುರಿತು ಪ್ರೊ.ಎಂ.ಆರ್. ನಾಗರಾಜ ರಾವ್, ಕನ್ನಡದಲ್ಲಿ ಖಗೋಳ ಸಾಹಿತ್ಯಾವಲೋಕನದ ಬಗ್ಗೆ ನೆಹರು ತಾರಾಲಯದ ಖಗೋಳ ವಿಜ್ಞಾನಿ ಡಾ.ಬಿ.ಎಸ್. ಶೈಲಜ ಹಾಗೂ ಕಾದಭೂಮಿ ಮತ್ತು ಕೋಲಾರ ವಿಷಯವಾಗಿ ಪರಿಸರ ತಜ್ಞ ಡಾ.ನಾಗೇಶ್ ಹೆಗಡೆ ಅವರು ಮಂಡಿಸಿದ ವಿಚಾರಗಳು, ಮಾಹಿತಿಗಳು ವಿದ್ಯಾರ್ಥಿಗಳಲ್ಲಿ ಅಲೋಚನೆಗಳ ಸ್ಪೋಟಕ್ಕೆ ಅನುವು ಮಾಡಿಕೊಟ್ಟಿತು.
ಕೋಲಾರ ಜಿಲ್ಲೆಯು ಭೂಮಿನಾಶದಿಂದ ಎದುರಿಸುತ್ತಿರುವ ಅಪಾಯ, ದುಷ್ಪರಿಣಾಮಗಳ ಬಗ್ಗೆ ನಾಗೇಶ್ ಹೆಗಡೆ ಹತ್ತು ಹಲವು ದೃಷ್ಟಾಂತಗಳೊಂದಿಗೆ ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರು.
450 ಕೋಟಿ ವರ್ಷಗಳ ಹಿಂದೆ ಇದ್ದ ಭೂಮಿಯ ವಿನ್ಯಾಸ, ಜನಸಂಖ್ಯೆ, ನೈಸರ್ಗಿಕ ಸಂಪತ್ತು, ಸಕಲ ಜೀವರಾಶಿಗಳ ಸುಂದರವಾದ ಬದುಕು, ಹೀಗೇ ಹತ್ತಾರು ವಿಚಾರಗಳ ಮೇಲೆ ಬೆಳಕು ಚಲ್ಲಿದ ಅವರು, ಮನುಷ್ಯನಲ್ಲಿನ ವ್ಯತ್ಯಾಸ, ದುರಾಸೆ, ದುರ್ಬುದ್ಧಿಗಳಿಂದಾಗಿ ಆಗುತ್ತಿರುವ ಕೆಟ್ಟ ಬದಲಾವಣೆಗಳನ್ನು ವಿವರಿಸಿ, ವಿನಾಶದಿಂದ ಪಾರಾಗಲು ಏನು ಮಾಡಬೇಕಾಗಿದೆ ಎಂಬುದನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಲು ಅನುಸಂಧಾನ ನಡೆಸಿದರು.
ಕೋಲಾರ ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಆಗಿತ್ತು, ಚಿನ್ನಕ್ಕಾಗಿ ಶೋಧನೆ ನಡೆದದ್ದು ಆಸ್ಟ್ರೇಲಿಯಾದಲ್ಲೇ. ಹಾಗಾಗಿ ಮುಚ್ಚಿರುವ ಚಿನ್ನದ ಗಣಿಯಲ್ಲಿ ಮತ್ತೆ ಚಿನ್ನ ತೆಗೆಯಲು ಆ ದೇಶದವರೇ ಕೋಲಾರಕ್ಕೆ ಬರಲು ಯತ್ನಿಸುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
36 ಸಾವಿರ ಕೆರೆಗಳಿದ್ದವು: ಕಳೆದ 25 ವರ್ಷಗಳ ಹಿಂದೆ ಕೋಲಾರ ಜಿಲ್ಲೆಯಲ್ಲಿ 36 ಸಾವಿರ ಕೆರೆಗಳಿದ್ದವು, ಈಗ 2,600 ಕೆರೆಗಳು ಮಾತ್ರವಿದೆ. ಇದಕ್ಕೆ ಜನಸಂಖ್ಯೆ ಸ್ಪೋಟ, ಪರಿಸರ,ಅರಣ್ಯ ನಾಶ, ಅತಿಯಾದ ನೀರಿನ ಬಳಕೆ, ನೀರು ಬತ್ತಿಸುವ ನೀಲಗಿರಿ ಮರಗಳನ್ನು ಬೆಳೆಯುತ್ತಿರುವುದು ಕಾರಣವಾಗಿದೆ ಎಂದರು.
ದಿನಕ್ಕೆ 28 ಸಾವಿರ ಲೀಟರ್ ಇಂಧನ ಬಳಕೆ ಆಗುತ್ತಿದೆ, ವಿವಿಧ ಉದ್ದೇಶಗಳಿಗೆ ಉಪಯೋಗಿಸುತ್ತಿರುವ ಇಂಧನದಲ್ಲಿ ಬಹುತೇಕ ಹಾವಿಯಾಗಿ ಆಕಾಶದಲ್ಲಿ ಕಪ್ಪು ಮೋಡಗಳು ಸೃಷ್ಟಿಯಾಗುವುದಕ್ಕೆ ನಾವು ಕಾರಣರಾಗಿದ್ದೇವೆ, ಜನಸಂಖ್ಯೆಯ ಸ್ಪೋಟದಿಂದ ಮನುಷ್ಯ ಸರ್ವ ಭಕ್ಷಕ ಪ್ರಿಯನಾಗುತ್ತಿದ್ದೇನೆ, ಅದಕ್ಕೆ ಹಾಲು ಕೊಡುವ ಹಸುಗಳನ್ನು ತಿನ್ನುವಂತಾಗಿದೆ ಎಂದು ವಿಷಾಧಿಸಿದರು.
ಭೂಮಿ ಕಲುಷಿತವಾಗುತ್ತಿದೆ, ಶೇ.75ರಷ್ಟು ಬಿಸಿಯಾಗುತ್ತಿದೆ, ಇದರಿಂದ ಋತುಮಾನಗಳಲ್ಲಿ ವ್ಯತ್ಯಾಸವಾಗುತ್ತಿದೆ, ದೊಡ್ಡವರಿಂದಾಗಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಾದರೆ ಮಕ್ಕಳು ಭೂಮಿಯನ್ನು ಕಾಪಾಡುವ ಹೊಣೆ ಹೊರಬೇಕಾಗಿರುವುದು ಪ್ರಸ್ತುತ ಅತ್ಯವಶ್ಯಕವೆಂದು ಪ್ರತಿಪಾದಿಸಿದರು.
ಮನುಷ್ಯನ ವರ್ತನೆ ಸರಿ ಹೋಗದಿದ್ದರೆ ಮುಂದೆ ಮಕ್ಕಳಿಗೆ ದಿನಕ್ಕೆ ಒಂದು ಚಮಚ ನೀರು ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು, ಅದಕ್ಕಾಗಿ ಮಕ್ಕಳು ಹಿರಿಯರಿಗೆ ನೀಲ ಗಿರಿ ಬೆಳೆಯದಂತೆ ಹೇಳಬೇಕು, ವಾಹನಗಳ ಸ್ವಚ್ಛತೆಗೆ ಎರಡು ಬಕೆಟ್ ನೀರು ಬಳಕೆ ಮಾಡುವ ಬದಲು ಒಂದು ಬಕೆಟ್ ನೀರು ಬಳಸುವಂತೆ ಮತ್ತೊಂದು ದಿನ ಅರ್ಧ ಬಕೆಟ್ ನೀರು ಬಳಸುವಂತಾಗಲು ಮನೆಯ ವಾತಾವರಣ ಬದಲಿಸಬೇಕೆಂದು ಸಲಹೆ ನೀಡಿದರು.
ಗಾಳಿ ಮತ್ತು ಸೂರ್ಯನ ಶಕ್ತಿ ಬಳಸಿ ಚೀನಾ ದೇಶದವರು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಜೈವಿಕ ಇಂಧನಕ್ಕೆ ಮೊರೆ ಹೋಗಿದ್ದಾರೆ, ಕೋಲಾರ ಬಿಸಿಲಿನ ನಾಡಗಿರುವುದರಿಂದ ಇಲ್ಲಿಯ ಜನತೆ ಸೂರ್ಯನ ಸಹಕಾರದಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕೋಲಾರ ಮತ್ತೆ ಹಸಿರು ಭೂಮಿಯಾಗಿ ಕಂಗೋಳಿಸಬೇಕಾಗಿದೆ, ಇದಕ್ಕಾಗಿ ಜನರು ನೀಲಿಗಿರಿ ಬದಲು ಹೊಂಗೆ, ಬೇವು, ಹಿಪ್ಪೆಗಿಡಗಳನ್ನು ಬೆಳೆಸುವ ಕಡೆ ಮನಸ್ಸು ಮಾಡಬೇಕು, ಈ ಕೆಲಸ ಯಶಸ್ವಿಯಾಗಬೇಕಾದರೆ ಶಾಸಕರು, ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು, ಇವರಿಗೆ ಜನಹಿತ ಕಾಪಾಡುವ ಕೆಲಸ ಮಾಡುವಂತೆ ಹೇಳುವವರು ಇಲ್ಲದ ಕಾರಣ ಲೋಪಗಳಾಗಿವೆ. ಮಕ್ಕಳಾದರೂ ತಮ್ಮ ಉಳಿವಿಗಾಗಿ ದೊಡ್ಡವರನ್ನು ಜಾಗೃತಿಗೊಳಿಸದಿದ್ದರೆ ಭೂಮಿ ಮತ್ತಷ್ಟು ಹದಗೆಡುತ್ತದೆ ಎಂದು ತಿಳಿಸಿದರು.
ಕೋಲಾರ ಸಮೃದ್ಧಿಗೊಳ್ಳಲು ಜನತೆಯಲ್ಲಿ ಹಠ, ಛಲ ಮುಖ್ಯ, ಬೆಂಗಳೂರಿನ ಮೆಟ್ರೋಗಾಗಿ ಕೋಲಾರದ ಮರಳು ಸಾಗಾಣೆ ಆಗುತ್ತಿದೆ, ಇದಕ್ಕಾಗಿ ಕೆರೆಗಳು ಹಾಳಾಗುತ್ತಿರುವುದರಿಂದ ಜನತೆಯನ್ನು ಎಚ್ಚರಿಸುವ ಕೆಲಸಗಳು ಸಾಹಿತ್ಯ ಸಮ್ಮೇಳನಗಳ ಮೂಲಕವಾಗಬೇಕೆಂದರು.
ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್. ನಾಗರಾಜ್ರಾವ್ ಮಾತನಾಡಿ, ವಿಜ್ಞಾನ ಎಲ್ಲರ ಸ್ವತ್ತು, ವಿಜ್ಞಾನದ ಪ್ರತಿಯೊಂದು ಉತ್ಪಾದನೆ ಜನರಿಗೆ ತಲುಪಿದಾಗ ಮಾತ್ರ ಪ್ರಗತಿ ಸಾಧ್ಯವೆಂದರು. ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡುವ ಪ್ರಣಾಳಿಕೆಗಳಲ್ಲಿ ವಿಜ್ಞಾನ, ಪರಿಸರದ ಬಗ್ಗೆ ಯಾವುದೇ ಪ್ರಸ್ತಾವನೆಗಳು ಇರುವುದಿಲ್ಲ, ಜನತೆ ಈ ಬಗ್ಗೆ ಪ್ರಶ್ನಿಸದಿದ್ದರೆ ಗಳಿಸಿದ್ದನ್ನು ಹಂಚಿಕೆ ಮಾಡಲು ಕಷ್ಟವಾಗುತ್ತದೆ ಎಂದರು.
ಅಕ್ಷರ ಜಾತ್ರೆಗಳಲ್ಲಿ ಆಕ್ರೋಶಕ್ಕಿಂತ ಅಲೋಚನೆಗಳು ಹೆಚ್ಚಾಗಬೇಕೆಂದು ಹೇಳಿದರು. ನೆಹರು ತಾರಾಲಯದ ಖಗೋಳ ವಿಜ್ಞಾನಿ ಡಾ.ಬಿ.ಎಸ್. ಶೈಲಜ ಅವರು ದೇವಾಲಯಗಳಲ್ಲಿ ಕಾಣುವ ಖಗೋಳ ಶಾಸ್ತ್ರಗಳ ಬಗ್ಗೆ ಅದ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸೂರ್ಯನ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ, ಕೆಲವೊಂದು ಸಾರಿ ಪಂಚಾಂಗ, ಸಂಕ್ರಾಂತಿ, ಯುಗಾದಿ, ವೈಕುಂಠ ಏಕಾದಶಿ, ರಥಸಪ್ತಮಿ ಹಬ್ಬಗಳು ಮೂಢ ನಂಬಿಕೆಗಳಾಗಿ ಕಂಡರೂ ಆ ಆಚರಣೆಗಳಿಂದ ಖಗೋಳದ ಬಗ್ಗೆ ತಿಳಿಯಲು ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡಲ್ಲಿ ಕಾಲಮಾನ ಇತ್ಯಾದಿಗಳನ್ನು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ ಎಂದರು.
ವಿಜ್ಞಾನ ಮತ್ತು ಗಣಿತ ಶಾಸ್ತ್ರದ ಸಂವಹನಕಾರ ವಿ.ಎಸ್.ಎಸ್. ಶಾಸ್ತ್ರೀ, ರೋಹಿತ್ ಚಕ್ರವರ್ತಿ ವಿಚಾರಗೋಷ್ಠಿಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ನಂಗಲಿ, ಕಸಾಪ ಖಜಾಂಚಿ ಹಾಗೂ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾಮ್, ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ ಇದ್ದರು.
ಪೂರ್ವಿಕರ ಅಲೋಚನೆಗಳಿಗೆ ಸಲಾಂ
ವಿಜ್ಞಾನದ ವಿಸ್ಮಯಗಳ ಬಗ್ಗೆ ಜನರು ಸಂಶೋಧನೆ, ಅದ್ಯಯನ ನಡೆಸಲು ನಮ್ಮ ಪೂರ್ವಿಕರ ಚಿಂತನೆ, ಸಾಧನೆಯೇ ಕಾರಣ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೋಲಾರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಉಪಯುಕ್ತವಾದ ವಿಚಾರಗೋಷ್ಠಿ ನಡೆಸಲಾಗಿದೆ. ಈ ಕೆಲಸಕ್ಕೆ ಪ್ರೇರಣೆ ನೀಡಿರುವ ಜಿಲ್ಲಾ ಕಸಾಪಕ್ಕೆ ಅಭಿನಂದನೆಗಳು.ಙ
- ಜಯಸಿಂಹ, ನಾಗರಿಕ
ಖಗೋಳ ಎಷ್ಟು ಸುಂದರ, ಋತುಮಾನಗಳಿಗೆ ಆಧಾರವೆಂಬುದು ತಿಳಿದುಕೊಳ್ಳುವುದಕ್ಕೆ ವಿಚಾರಗೋಷ್ಠಿ ಅನುಕೂಲವಾಯಿತು. ಖಗೋಳ ವಿಜ್ಞಾನಿ ಬಿ.ಎಸ್. ಶೈಲಜ ಅವರು ದೇವಾಲಯಗಳಲ್ಲಿನ ಖಗೋಳ ಶಾಸ್ತ್ರದ ಬಗ್ಗೆ ಸಾಕಷ್ಟು ಮಾಹಿತಿ ನೀಡಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನಾನು ಅನೇಕ ದೇವಾಲಯಗಳಿಗೆ ಹೋಗಿದ್ದೇನೆ. ಆದರೆ, ಅಲ್ಲಿನ ಖಗೋಳ ವಿಸ್ಮಯ ಗಮನಿಸಿರಲಿಲ್ಲ. ಇನ್ನು ಮುಂದೆ ಯಾವುದೇ ದೇವಾಲಯಕ್ಕೆ ಹೋದರೂ ಅಧ್ಯಯನ ಮಾಡುತ್ತೇನೆ.
- ಅನುಷ, ವಿದ್ಯಾರ್ಥಿನಿ
ವಿಜ್ಞಾನಮ್ಮ ಪೂರ್ವಿಕರು ವಿಜ್ಞಾನದ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಜನರಿಗೆ ಮನದಟ್ಟು ಆಗುವ ರೀತಿಯಲ್ಲಿ ತಿಳಿಸಬೇಕಾಗಿದೆ. ಜಿಲ್ಲಾ ಕಸಾಪ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಅರ್ಥಪೂರ್ಣ ವಿಚಾರಗೋಷ್ಠಿ ನಡೆಸಿರುವುದು ಶ್ಲಾಘನೀಯ, ಉಪಯುಕ್ತವಾದ ಗೋಷ್ಠಿಗಳಿಗೆ ಜನತೆ ಸ್ಪಂಧಿಸುತ್ತಾರೆಂಬುದಕ್ಕೆ ಟಿ. ಚನ್ನಯ್ಯರಂಗ ಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳೇ ಸಾಕ್ಷಿ.
- ಎಲ್.ಎ. ವಿಜಯಕುಮಾರ್, ಶಿಕ್ಷಕ
ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಗೋಷ್ಠಿಗಳು ಉತ್ತಮವಾಗಿತ್ತು, ವಿದ್ಯಾರ್ಥಿಗಳಲ್ಲಿ ಅಲೋಚನೆಗಳ ಶಕ್ತಿ ಹೆಚ್ಚಿಸಲು ಹಮ್ಮಿಕೊಂಡ ವಿಜ್ಞಾನಗೋಷ್ಠಿಗೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ಈ ರೀತಿಯ ಬದಲಾವಣೆ ಮತ್ತು ಪರಿವರ್ತನೆ ನಿರಂತರವಾಗಿ ನಡೆಯಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನ ಈ ಬಾರಿ ಅರ್ಥಪೂರ್ಣವಾಗಿ ನಡೆದಿದೆ. ಮುಂದಿನ ವರ್ಷ ಮತ್ತಷ್ಟು ಒಳ್ಳೆಯ ಕಾರ್ಯಕ್ರಮಗಳು ನಡೆಯುವಂತಾಗಲಿ.
- ಉದಯಕುಮಾರ್, ಅಧ್ಯಕ್ಷ, ಸಾಹ್ಯದ್ರಿ ಕಾಲೇಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

