ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟ
ಕೋಲಾರ: ದೇಶದ ಆರ್ಥಿಕ ಪರಿಸ್ಥಿತಿ ಹಾಳುಗೆಡವಿರುವ ಕಾಂಗ್ರೆಸ್ಮ ಮತ್ತು ಕೋಮುವಾದಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಯುವಕರು ಪ್ರಮುಖ ಪಾತ್ರ ನಿರ್ವಹಿಸಬೇಕೆಂದು ತ್ರಿಪುರ ರಾಜ್ಯದ ಶಾಲಾ ಶಿಕ್ಷಣ ಸಚಿವ ತಪನ್ ಚಕ್ರವರ್ತಿ ಕರೆ ನೀಡಿದರು.
ಎಸ್ಎಫ್ಐ 13ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಗರದ ಸರ್ಕಾರಿ ಕಿರಿಯ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಶಾಶ್ವತ ನೀರಾವರಿಗಾಗಿ ಸಹಿ ಸಂಗ್ರಹಣೆ ಚಳವಳಿಗೆ ಚಾಲನೆ ನೀಡಿ ಅವರು ಮಾತನಾಡಿ, ನಮ್ಮದು ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗಿಲ್ಲವೆಂದು ಆರೋಪಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ದೇಶದ ಅಭಿವೃದ್ಧಿ ಕುಸಿಯುವಂತಾಗಿದೆ. ನವ ಉದಾರೀಕರಣ ನೀತಿಯಿಂದ ಬಂಡವಾಳಶಾಯಿಗಳಿಗೆ ಅನುಕೂಲವಾಗಿದೆಯೇ ಹೊರತು ಶೋಷಿತ, ದುರ್ಬಲ ವರ್ಗದ ಜನರಿಗೆ ಪ್ರಯೋಜನವಾಗಿಲ್ಲವೆಂದು ಟೀಕಿಸಿದರು.
ಕೇಂದ್ರದಲ್ಲಿ ಭ್ರಷ್ಟಾಚಾರ ತಡೆಗೆ ಕಾಂಗ್ರೆಸ್ ವಿಫಲವಾಗಿದೆ, ಕಳೆದ 5 ವರ್ಷಗಳಲ್ಲಿ ಆರು ಲಕ್ಷ ಕೋಟಿ ಹಣ ಲೂಟಿಯಾಗಿದೆ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರು 1ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ, ದೇಶವನ್ನು ಕಾಡುತ್ತಿರುವ ಹೊಸ ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರ ತಡೆಯಲು ಸಾಧ್ಯವಾಗದಿದ್ದರೆ ಬದಲಾವಣೆ ತರಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ಬಿಜೆಪಿ ತನ್ನ ಕೋಮುವಾದಿ ನೀತಿಗಳಿಂದ ದೇಶಕ್ಕೆ ಅಪಾಯವೊಡ್ಡುತ್ತಿದೆ. ಆರ್ಎಸ್ಎಸ್ ಕಪಿಮುಷ್ಟಿಯಲ್ಲಿ ಸಿಕ್ಕಿರುವ ಬಿಜೆಪಿಯಿಂದ ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬಯಸುವುದು ಸಾಧ್ಯವೇ ಇಲ್ಲ. ಹಿಂದೂರಾಷ್ಟ್ರ ಮಾಡುವುದೇ ನಮ್ಮ ಉದ್ದೇಶವೆಂದು ಆರ್ಎಸ್ಎಸ್ನ ಗೋಲಲ್ಕಾರ್ ಮತ್ತು ಗೋವಿಂದಚಾರ್ಯ ಅವರೇ ಒಪ್ಪಿಕೊಂಡಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಮಾದರಿಯಲ್ಲೇ ಕೆಟ್ಟ ಆರ್ಥಿಕ ನೀತಿಗಳನ್ನು ಜಾರಿಗೆ ಬರುವುದರಲ್ಲಿ ಅನುಮಾನವಿಲ್ಲ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿರುವುದರಿಂದ ಬಡವರ, ಶೋಷಿತರ ಉದ್ಧಾರ ಹೇಗೆ ನಿರೀಕ್ಷೆ ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.
ಈ ಎರಡೂ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಎಡಪಕ್ಷಗಳು ಮತ್ತು ಇನ್ನಿತರ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಹೋರಾಡಲು ನಿರ್ಧರಿಸಿದೆ, ಚುನಾವಣೆ ಫಲಿತಾಂಶದ ಬಳಿಕ ತೃತೀಯ ರಂಗ ರಚನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು, ಈ ಬಾರಿ ಯುವಕರು ಒಳ್ಳೆಯ ನಿರ್ಧಾರ ಕೈಗೊಂಡಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದಾಗಿದೆ ಎಂದು ತಿಳಿಸಿದರು.
ಎಸ್ಎಫ್ಐ 1970ರಲ್ಲಿ ಪ್ರಾರಂಭವಾಯಿತು, ಅಲ್ಲಿಂದ ಈವರೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಹೋರಾಟ ನಡೆಸುತ್ತಾ ಬಂದಿದೆ. ದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸಂಘಟನೆಯ ಕೊಡುಗೆ ಅಪಾರವೆಂದರು. ಸಭೆಯಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಅನಂತ ನಾಯ್ಕ್, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ರಿತಬ್ರತೋ ಬ್ಯಾನರ್ಜಿ, ಚಿತ್ರನಟ ಚೇತನ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ದಲಿತ ಮುಖಂಡರಾದ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ. ಅಂಬರೀಶ್, ಸಂಘಟನಾ ಕಾರ್ಯದರ್ಶಿ ಮಾರ್ಕಂಡಯ್ಯ, ಸಿ. ಅಮರೇಶ್, ಖಜಾಂಚಿ ಹಾಗೂ ಜಿಲ್ಲಾ ಎಸ್ಎಫ್ಐ ಅಧ್ಯಕ್ಷ ಕೆ. ವಾಸುದೇವರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

