ಕೋಲಾರಕ್ಕೆ ಕಹಿ ಬಜೆಟ್
ಕೋಲಾರ: ಮಳೆಯನ್ನು ನಂಬಿ ಬದುಕು ಸಾಗಿಸುತ್ತಿರುವ ಕೋಲಾರ ಜಿಲ್ಲೆಯ ಜನರಿಗೆ ಬಜೆಟ್ನಲ್ಲಿ ಸೂಕ್ತ ಪರಿಹಾರ ಸಿಗುತ್ತದೆ ಎಂದುಕೊಂಡವರು ನಿರಾಸೆಗೊಳಗಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸುಮಾರು 2,600 ಕೆರೆಗಳಿದ್ದು ಬಹುತೇಕ ಕೆರೆಗಳು ಮರಳು ಮಾಫಿಯಾದಿಂದ ತನ್ನ ಅಕಾರ ಕಳೆದುಕೊಂಡಿದೆ, ಮಳೆ ನೀರು ನಿಲ್ಲದಂತಹ ದುಸ್ಥಿಗೆ ತಲುಪಿದೆ. ಆದರೆ, ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಈ ಕೆರೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಬದಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿರುವುದು ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಿದೆ.
ಎತ್ತಿನಹೊಳೆಯ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿರು ಮುಖ್ಯಮಂತ್ರಿಗಳು ಯೋಜನೆಗೆ ಟೆಂಡರ್ ಯಾವಾಗ ಕರೆಯಲಾಗುತ್ತದೆ, ಎಷ್ಟು ದಿನಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂಬುದನ್ನು ತಿಳಿಸದೆ ಜನರ ಮೂಗಿಗೆ ತುಪ್ಪ ಬಳೆದಿದ್ದಾರೆ.
ಈ ಹಿಂದೆ ಕೋಲಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದಾಗಿ ಹೇಳಲಾಗಿತ್ತು. ಈಗ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರ ಒತ್ತಡದ ಮೇರೆಗೆ ಚಿಕ್ಕಬಳ್ಳಾಪುರಕ್ಕೆ ನೀಡಲಾಗಿದೆ. ಆ ಜಿಲ್ಲೆಯಲ್ಲಾದರೂ ವೈದ್ಯಕೀಯ ಕಾಲೇಜು ಬೇಗನೆ ಆರಂಭಕ್ಕೆ ಚಾಲನೆ ಸಿಗುವುದೇ ಕಾದು ನೋಡಬೇಕಾಗಿದೆ.
ಕೋಲಾರದಲ್ಲಿ ಪಶು ಪ್ರಯೋಗಶಾಲೆ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿರುವುದಷ್ಟೇ ಜಿಲ್ಲೆಗೆ ಸಿಕ್ಕ ದೊಡ್ಡ ಕೊಡುಗೆ ಎನ್ನಬಹುದಾಗಿದೆ. ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಕೋಲಾರ ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆ ಮಾರಕ ಕಾಲುಬಾಯಿ ರೋಗದಿಂದಾಗಿ ನೂರಾರು ಹಸುಗಳು ಸತ್ತಿವೆ. ಪ್ರಯೋಗಾಲಯದ ಸಮಸ್ಯೆಯಿಂದ ಜಾನುವಾರುಗಳ ಸಮಸ್ಯೆ ಅರಿತು ತುರ್ತು ಪರಿಹಾರ ಕಲ್ಪಿಸಲು ಆಗಿರಲಿಲ್ಲ.
ಇನ್ನು ರೇಷ್ಮೆ ಬೆಳೆಗಾರರಿಗೆ ಸಾಲ ಮನ್ನ ಯೋಜನೆ ಪ್ರಕಟಿಸಲಾಗಿದೆಯಾದರೂ ಇದರಿಂದ ಕೇವಲ ಕೆಲ ರೈತರಿಗೆ ಮಾತ್ರ ಅನುಕೂಲವಾಗುವುದರಿಂದ ರೇಷ್ಮೆ ಬೆಳೆಗಾರರು ಸಂತೋಷ ಪಡದಂತಾಗಿದೆ. ಹನಿ ನೀರಾವರಿ ಯೋಜನೆಗೆ ಶೇ.90 ರಷ್ಟು ಸಹಾಯಧನ ನೀಡುವ ಘೋಷಣೆ ಕೊಂಚ ಸಮಾಧಾನ ತಂದಿದೆ.
ಒಟ್ಟಾರೆ ಬಜೆಟ್ನಲ್ಲಿ ಕೋಲಾರಕ್ಕೆ ಸಿಕ್ಕಿರುವ ಲಾಭ ಕಡಿಮೆ. ಬರ ಪೀಡಿತ ಪ್ರದೇಶವಾಗಿರುವ ಜಿಲ್ಲೆಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಬೇಕೆಂಬ ರೈತರ ಬೇಡಿಕೆ ಈಡೇರಿಲ್ಲ. ಶುದ್ಧವಾದ ಕುಡಿಯುವ ನೀರಿಗಾಗಿ ತುರ್ತು ಪರಿಹಾರ ಪ್ರಕಟಿಸಿಲ್ಲ. ಈ ಹಿಂದೆ ಜವಳಿ ಪಾರ್ಕ್, ಫುಡ್ ಪಾರ್ಕ್ ಮಾಡುವುದಾಗಿ ಘೋಷಣೆ ಮಾಡಿದ್ದ ಸರ್ಕಾರ ಈ ಪ್ರಸ್ತಾವನೆಗಳನ್ನು ಮರೆತಿದ್ದು ಏಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

