ಪ್ರಸನ್ನ ಚೌಡೇಶ್ವರಿ ರಥೋತ್ಸವ
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಪ್ರಸನ್ನ ಚೌಡೇಶ್ವರಿ ದೇವಿಯ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಮಂಡಿಕಲ್ ಗ್ರಾಮದ ಹೊರವಲಯದಲ್ಲಿರುವ ಪ್ರಸನ್ನ ಚೌಡೇಶ್ವರಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ದೇವಾಲಯದ ಸುತ್ತಮುತ್ತಲ ಗ್ರಾಮಗಳಾದ ಕೂಲದೇವಿ, ಹರಪನಾಯಕನಹಳ್ಳಿ, ವಮ್ಮಸಂದ್ರ, ದುಗ್ಗಸಂದ್ರ, ತಾವರೆಕೆರೆ ಗ್ರಾಮಗಳಿಗೆ ಮಿಳಿತವಾಗಿದ್ದು, ಎಲ್ಲಾ ಗ್ರಾಮಸ್ಥರು ಒಂದು ವಾರ ನಡೆಯುವ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಥೋತ್ಸವಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ನಾದಸ್ವರ ವಾದ್ಯಗೋಷ್ಠಿಗಳೊಂದಿಗೆ ಗಾಡಿಗಳಲ್ಲಿ ಅನ್ನ ತಂದು ಸಾಮೂಹಿಕವಾಗಿ ಕುಳಿತು ಪ್ರಸಾದ ಸ್ವೀಕರಿಸಿದರು. ದೇವಿಗೆ ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆಗಳು ನಡೆಯಿತು. ಶಾಸಕ ಕೊತ್ತೂರು ಮಂಜುನಾಥ್, ದೇವಾಲಯದ ಧರ್ಮದರ್ಶಿ ಘಟ್ಟು ನಾಗಭೂಷಣರಾವ್, ದೇವಾಲಯ ಅಭಿವೃದ್ಧಿ ಸಮಿತಿ ಕೂಲದೇವಿ ವೆಂಕಟೇಶಗೌಡ, ಎಚ್.ವಿ. ಶ್ರೀನಿವಾಸಗೌಡ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಎನ್. ಬಿಸೇಗೌಡ, ಕೆ. ಮಾಧವರಾವ್, ಎಂ.ವಿ. ಶ್ರೀನಿವಾಸಗೌಡ, ಜಿ.ಎನ್. ವೆಂಕಟಾಚಲಯ್ಯ, ಎಂ.ವಿ.ಚಂದ್ರಶೇಖರ್ ಇದ್ದರು.
ಅಂಗನವಾಡಿ ಬೀಗ ತೆರವುಗೊಳಿಸಲು ಆಗ್ರಹ
ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಹೋಬಳಿಯ ಎಳೇಸಂದ್ರ ಗ್ರಾಪಂ ವ್ಯಾಪ್ತಿಯ ಕೋಟರಾಮಗುಳ್ಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು 16 ದಿನ ಕಳೆದರೂ ಕೇಳುವವರಿಲ್ಲದಂತಾಗಿದೆ.
ಶಾಲೆಯಲ್ಲಿ 15 ಮಕ್ಕಳಿದ್ದು ಇದೇ ಗ್ರಾಮದ ರಾಮಚಂದ್ರಪ್ಪ ಶಾಲೆಗೆ ಬೀಗ ಜಡಿದಿದ್ದಾರೆ. ಇದರಿಂದ ಮಕ್ಕಳ ಆಟ ಪಾಠಗಳಿಗೆ ಅಡ್ಡಿಯಾಗಿ ಬಯಲಲ್ಲೆ ಕುಳಿತು ಪಾಠ ಕೇಳುವಂತಾಗಿದೆ. ಕೆಲ ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡದ ಜಾಗವನ್ನು ರಾಮಚಂದ್ರಪ್ಪ ಸಂಬಂಧಿಕರು ಶಾಲೆಗೆ ಕೊಡುಗೆಯಾಗಿ ನೀಡಿದ್ದರು. ಇಲ್ಲಿ ಸರ್ಕಾರದಿಂದ ಶಾಲಾ ಕಟ್ಟಡವನ್ನು ಕಟ್ಟಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆ. ಆದರೆ ರಾಮಚಂದ್ರಪ್ಪ ಅಂಗನವಾಡಿ ಕಟ್ಟಡಕ್ಕೆ ನೀಡಿದ್ದ ಜಾಗ ದಾನವಾಗಿ ನೀಡಿಲ್ಲ ಎಂದು ತಕರಾರು ತೆಗೆದು ಶಾಲೆಗೆ ಬೀಗ ಜಡಿದಿರುವುದರಿಂದ ಮಕ್ಕಳ ಆಹಾರ ಸಾಮಾಗ್ರಿಗಳು ಶಾಲೆಯ ಒಳಗೆ ಇದ್ದು ಕಳೆದ 16 ದಿನಗಳಿಂದ ಮಕ್ಕಳಿಗೆ ಊಟ ಇಲ್ಲದೆ ಅಂಗನವಾಡಿ ಕಾರ್ಯಕರ್ತೆ ಬಿಸ್ಕೆಟ್ ತಂದು ನೀಡುತ್ತಿದ್ದಾರೆ.
ಎರಡು ದಿನಗಳ ಹಿಂದೆ ಆಹಾರ ಪದಾರ್ಥಗಳು ಬಂದಿದ್ದು ಅದನ್ನು ಸರ್ಕಾರಿ ಶಾಲೆಯಲ್ಲಿ ಇಟ್ಟು ಬಯಲಲ್ಲೆ ಮಕ್ಕಳಿಗೆ ಆಹಾರ ನೀಡುತ್ತಿದ್ದಾರೆ. ಈ ಬಗ್ಗೆ ಶಿಶು ಅಭಿವೃದ್ಧಿ ಅಧಿಕಾರಿಗೆ ಗಮನಕ್ಕೆ ತಂದಿದ್ದು, ಅವರು ಸ್ಥಳಕ್ಕೆ ಬಂದು ಪರಿಶಿಲಿಸಿದ್ದಾರೆ. ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಸಿಡಿಪಿಒ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವ ರಾಮಚಂದ್ರಪ್ಪ ವಿರುದ್ಧ ಪೊಲೀಸರಿಗೆ ದೂರು ನೀಡಿ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ಶಾಸಕರಿಂದ ಅಭಿನಂದನೆ
ಗೌರಿಬಿದನೂರು: ತಾಲೂಕಿಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲು 3 ಕೋಟಿ, ಡಾ.ಎಚ್.ನರಸಿಂಹಯ್ಯನವರ ಸಮಾಧಿ ಹಾಗೂ ಶಾಲೆಯಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಲು 1ಕೋಟಿ, ವಿದುರಾಶ್ವತ್ಥ ಯೋಧರ ಸ್ಮಾರಕ ಭವನ ಅಭಿವೃದ್ಧಿಗೆ 1 ಕೋಟಿ ರು.ಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅಭಿನಂದಿಸಿದ್ದಾರೆ.
ಸಚಿವರಿಗೆ ಅಭಿನಂದನೆ
ಗೌರಿಬಿದನೂರು: ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ರಿಂದ 60 ಕೋಟಿ ಹಣ ನೀಡಬೇಕು ಹಾಗೂ ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರಾಷ್ಟ್ರೀಯ ಹಬ್ಬಗಳ ಪಟ್ಚಿಯಲ್ಲಿ ಸೇರಿಸುವಂತೆ ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ರಾಧಾಕೃಷ್ಣ ಸಲ್ಲಿಸಿರುವ ಮನವಿ ಪರಿಶೀಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದು ಸಚಿವರಿಗೆ ಎಂ.ಎನ್. ರಾಧಾಕೃಷ್ಣ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಂದಾಯ ಅಧಿಕಾರಿ ಲೋಕಾ ಬಲೆಗೆ
ಚಿಂತಾಮಣಿ: ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ ಕಂದಾಯ ಅಧಿಕಾರಿ ಮಂಜುನಾಥ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಾಲೂಕಿನ ಕೈವಾರ ಹೋಬಳಿ ಅಟ್ಟೂರು ಗ್ರಾಮದ ರೈತ ದೇವರಾಜ್ ಎಂಬವರ ಜಮೀನು ಖಾತೆ ಬದಲಾವಣೆಗಾಗಿ ಕಂದಾಯ ಅಧಿಕಾರಿ ಮಂಜುನಾಥ 20 ಸಾವಿರ ರುಪಾಯಿ ಲಂಚಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಸಂಜೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶೇಖರ್ ನೇತೃತ್ವದಲ್ಲಿ ತಂಡ ರಚಿಸಿ ನಗರದ ಗೀತಾ ಮಂದಿರ ಬಳಿ ಇರುವ ಅಗರಂ ಪ್ಯಾಲೇಸ್ ಕೊಠಡಿಯೊಂದರಲ್ಲಿ ರೈತನಿಂದ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಅಧಿಕಾರಿ ಮಂಜುನಾಥ ಬಳಿ ಇರುವ ಹಲವು ದಾಖಲೆಗಳನ್ನು ಪರಿಶೀಲಿಸಿ ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.
ದೇವಸ್ಥಾನ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು
ಕೆಜಿಎಫ್: ದೇವಸ್ಥಾನ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರಿಕುಪ್ಪಂನ ರಾಜೇಶ್ ಕ್ಯಾಂಪ್ ನಿವಾಸಿ ಗಜೇಂದ್ರನ್ ಎಂಬುವರು ತಮ್ಮ ಸಂಬಂಧಿಕರ ಮದುವೆಗೆ ಹೋಗಲು ಶ್ರೀರಾಮ ದೇವಸ್ಥಾನದ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮದುವೆ ನೋಡಿಕೊಂಡು ಹಿಂತಿರುಗಿ ಬಂದು ನೋಡಿದಾಗ ದ್ವಿಚಕ್ರ ನಾಪತ್ತೆಯಾಗಿತ್ತು. ಯಾರಾದರು ಪರಿಚಯಸ್ಥರು ತೆಗೆದು ಕೊಂಡು ಹೋಗಿರಬಹುದು ಎಂದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಕಾರಣ ಜಗೇಂದ್ರನ್ ತಮ್ಮ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲೆ ಬೀಗ ಹೊಡೆದು ಗ್ರಂಥಾಲಯದ ಪುಸ್ತಕ ಕಳವು
ಚಿಂತಾಮಣಿ: ಹಳೆ ಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಬೀಗ ಹೊಡೆದು ಒಳ ನುಗ್ಗಿದ ಕಳ್ಳರು ಸಾವಿರಾರು ರು. ಮೌಲ್ಯದ ಗ್ರಂಥಾಲಯದ ಪುಸ್ತಕಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ ಆಜಾದ್ ಚೌಕ ಹತ್ತಿರ ಇರುವ ಹಳೇ ಪೇಟೆ ರಸ್ತೆಯ ಬಳಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಬೀಗ ಹೊಡೆದು ಒಳ ನುಗ್ಗಿದ ಕಳ್ಳರು ವಿವಿಧ ಸಾಹಿತಿಗಳ ಹಾಗೂ ಮಕ್ಕಳ ಜ್ಞಾನ ಭಂಢಾರ ಪುಸ್ತಕಗಳನ್ನು ರಾತ್ರೋರಾತ್ರಿ ಮೂಟೆಗಳ ಸಮೇತ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆಕಸ್ಮಿಕ ಬೆಂಕಿ; ರಾಗಿ ಬೆಳೆ ಭಸ್ಮ
ಬಂಗಾರಪೇಟೆ: ರಾಗಿ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿದ ಪರಿಣಾಮ ಸುಮಾರು ಒಂದು ಲಕ್ಷ ರು. ಬೆಳೆ ಬಾಳುವ ರಾಗಿ ಬೆಳೆಗೆ ಬೆಂಕಿಗೆ ಆಹುತಿಯಾಗಿದೆ.
ತಾಲೂಕಿನ ಹುಲಿಬೆಲೆ ಗ್ರಾಮದ ಅತ್ತಿಗಿರಿಕೊಪ್ಪ ಗ್ರಾಮದ ಅರ್ಜುನಪ್ಪ ಎಂಬುವರಿಗೆ ಸೇರಿದ ರಾಗಿ ಮೆದೆಗೆ ಬೆಂಕಿ ಬಿದ್ದಿದ್ದು ಮೊದಲೇ ಸಂಕಷ್ಟದಲ್ಲಿದ್ದ ರೈತ ಈಗ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ.
ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರೂ ಆ ವೇಳೆಗಾಗಲೇ ರಾಗಿ ಬೆಳೆ ಮತ್ತು ಹುಲ್ಲು ಸಂಪೂರ್ಣ ಭಸ್ಮವಾಗಿತ್ತು. ಆರ್ಥಿಕವಾಗಿ ನಷ್ಟವಾಗಿರುವ ರೈತ ಅರ್ಜುನಪ್ಪನವರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿಜೃಂಭಣೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮ ರಥೋತ್ಸವ
ಗೌರಿಬಿದನೂರು: ತಾಲೂಕು ಆಡಳಿತ ಮತ್ತು ಮುಜರಾಯಿ ಇಲಾಖೆ ವತಿಯಿಂದ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ತಹಸೀಲ್ದಾರ್ ಡಾ.ಎನ್. ಭಾಸ್ಕರ್ ಚಾಲನೆ ನೀಡಿದರು.
ಉತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡು ಪಾನಕ ಮತ್ತು ಹೆಸರುಬೇಳೆ ಹಾಗೂ ಮಜ್ಜಿಗೆ ಭಕ್ತಾಧಿಗಳಿಗೆ ವಿತರಿಸಿದರು. ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ರಾಜಸ್ವ ನಿರೀಕ್ಷಕ ಎಂ.ಪಿ. ಶಿವಣ್ಣ, ಮುಖ್ಯ ಅರ್ಚಕ ಎಂ.ಜಿ. ಮುರುಳೀಧರ, ಪಾಲ್ಗೊಂಡಿದ್ದು ನೂರಾರು ಭಕ್ತಾಧಿಗಳು ಬಾಳೆಹಣ್ಣು ಮತ್ತು ಧವನ ದೇವರಿಗೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಮುನ್ನ ದೇವರನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ
ಶಿಡ್ಲಘಟ್ಟ: ತಾಲೂಕಿನ ತಲಕಾಯಲಬೆಟ್ಟದಲ್ಲಿ ಶುಕ್ರವಾರ ಮಾಘ ಮಾಸದ ಹುಣ್ಣಿಮೆ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.
ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸುತ್ತಮುತ್ತಲಿನ ತಾಲೂಕುಗಳಿಂದ ಸಾವಿರಾರು ಜನರು ಆಗಮಿಸಿ ದೇವರ ದರ್ಶನ ಪಡೆದರು. ಡೊಳ್ಳುಕುಣಿತ, ವೀರಗಾಸೆ, ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ಶಾಸಕ ಎಂ. ರಾಜಣ್ಣ, ಡಿವೈಎಸ್ಪಿ ಸಣ್ಣತಿಮ್ಮಯ್ಯ, ತಲಕಾಯಲಬೆಟ್ಟ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಬಾಬು, ಟಿ.ವಿ.ಶ್ರೀನಿವಾಸ್, ಅಮರನಾರಾಯಣ, ಮಂಜುಳಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

