ಕೋಲಾರ

ಜಿಪಂ ಅಧಿಕಾರ ಮೊಟಕು ಬೇಡ

Published On :

ಕ.ಪ್ರ.ವಾರ್ತೆ    ಕೋಲಾರ    ಫೆ. 18
ಅಧಿಕಾರ ವಿಕೇಂದ್ರಿಕರಣಕ್ಕಾಗಿ ಜಾರಿಗೆ ತರಲಾದ 1973ನೇ ಕಾಯಿದೆಯ ಪ್ರಕಾರ ಜಿಪಂಗಳು ಕಾರ್ಯನಿರ್ವಹಿಸಲು ಅವಕಾಶ ಸಿಗುತ್ತಿಲ್ಲವೆಂದು ಕೋಲಾರ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ವಿಷಾಧಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಅವರು ಮಂಗಳವಾರ ಕೋಲಾರ ಜಿಪಂ 2014ರ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಡಿ ಜಿಪಂ, ತಾಪಂ ಹಾಗೂ ಗ್ರಾಪಂಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ, ಅಧಿಕಾರ ವಿಕೇಂದ್ರಿಕರಣದ ಸೂತ್ರದಡಿ ರಚನೆಗೊಂಡಿರುವ ಜಿಪಂನ ಅಧಿಕಾರ ಮತ್ತು ಈ ಸಂಸ್ಥೆಗೆ ಸರ್ಕಾರಗಳಿಂದ ಸಿಗುವ ಅನುದಾನವನ್ನು ಮೊಟಕುಗೊಳಿಸುತ್ತಿರುವುದು ನ್ಯಾಯ ಸಮ್ಮತವಲ್ಲವೆಂದು ಹೇಳಿದರು.
ಜಿಪಂ ಅಧಿಕಾರ ಮೊಟಕು ಏಕೆ ಮಾಡಲಾಗುತ್ತಿದೆ ಎಂಬುದಕ್ಕೆ ಸರ್ಕಾರ ಯಾವುದೇ ಕಾರಣ ನೀಡಿಲ್ಲ, ಸರ್ಕಾರಕ್ಕೆ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು, ಜಿಪಂ ಆಡಳತದಲ್ಲಿ ಪಾರದರ್ಶಕತೆ ಇರಬೇಕೆಂಬ ಉದ್ದೇಶವಿದ್ದಲ್ಲಿ ಸುಧಾರಣೆ ತರಲು ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೇ ಹೊರತು ಸಂವಿಧಾನಬದ್ಧವಾಗಿ ಆಯ್ಕೆಯಾಗಿರುವ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಬಾರದೆಂದು ಒತ್ತಾಯಿಸಿದರು. ಜಿಪಂಗೆ ಸದಸ್ಯರು ಆಯ್ಕೆಯಾಗುವುದು ಸಭೆಗೆ ಬಂದು ಹೋಗುವುದಕ್ಕಲ್ಲ, ಅಧಿಕಾರ ಮತ್ತು ಹಣ ಇಲ್ಲದಿದ್ದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ಜನರ ಪರ ಕೆಲಸ ಮಾಡಲು ಅಧಿಕಾರ ನೀಡದೆ ಕೇವಲ ಫೋಸ್ಟ್ ಆಫೀಸ್ ಕೆಲಸ ಮಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ತೂಪಲ್ಲಿ ನಾರಾಯಣಸ್ವಾಮಿ, ಜಿಪಂನಲ್ಲಿ ಪಾರದರ್ಶಕತೆ ಕಾಪಾಡುವುದು ಸರ್ಕಾರದ ಕರ್ತವ್ಯ, ಯಾವುದೇ ಕಾರಣಕ್ಕೂ ಅಧಿಕಾರ ಮೊಟಕುಗೊಳಿಸಬಾರದೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಸ್ಥಾಯಿ ಸಮಿತಿಗಳ ಅಧ್ಯಕ್ಷ ನಾಗರಾಜ್, ಆನಂದ್, ಜಿಪಂ ಎಂಜನಿಯರಿಂಗ್ ವಿಭಾಗದ ಇಇ ದೇವರಾಜ್, ಜಿಪಂ ಸದಸ್ಯರು ಇದ್ದರು. ಯೋಜನಾ ನಿರ್ದೇಶಕ ಆರೋಕ್ಯಸ್ವಾಮಿ ಸ್ವಾಗತಿಸಿದರು.


ಶಾಶ್ವತ ಕುಡಿಯುವ ನೀರಿಗೆ ಒತ್ತಾಯ


ಕೋಲಾರ ಜಿಲ್ಲೆ ಬರಪೀಡಿತ ಪ್ರದೇಶ, ಮಳೆಯನ್ನು ಆಧರಿಸಿ ಜನ-ಜಾನುವಾರುಗಳ ಜೀವನ ಸಾಗುತ್ತಿದೆ, ರೈತರು ಮಳೆಯನ್ನು ನಂಬಿ ಕೃಷಿ ಮಾಡುವ ದುತ್ಸಾಹಸ ಉಂಟಾಗಿದೆ. ಜಿಪಂಗೆ ಸರ್ಕಾರ ನೀಡುವ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಇಂತಹದ್ದೇ ಯೋಜನೆಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ನಾವು ಕೇಳುತ್ತಿಲ್ಲ, ಸೂಕ್ತವಾದ ಯಾವುದೇ ಯೋಜನೆಯ ಮೂಲಕ ಬೇಗನೆ ಯೋಜನೆ ಜಾರಿಗೆ ತರಬೇಕೆಂಬುದು ತಮ್ಮ ಒತ್ತಾಸೆ ಎಂದರು. ಚುನಾವಣೆಗಳ ಸಮಯದಲ್ಲಿ ಡಾ. ಪರಮಶಿವಯ್ಯ, ಎತ್ತಿನಹೊಳೆ, ಎಲೆಮಲ್ಲಪ್ಪ ಕೆರೆ ನೀರು ಯೋಜನೆ ಬಗ್ಗೆ ಪ್ರಸ್ತಾಪಗಳಾಗುತ್ತಿವೆ. ಯಾವುದೇ ಯೋಜನೆ ಜಾರಿಗೆ ತರಲು ಸರ್ಕಾರದಿಂದ ಆಗುತ್ತಿಲ್ಲ, ನಮಗೆ ಯಾವುದೇ ಮೂಲದಿಂದಲಾದರೂ ನೀರು ಒದಗಿಸಲು ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದರು. ಜಿಪಂ ಸಿಇಒ ವಿನೋತ್ ಪ್ರಿಯ ಮಾತನಾಡಿ, ಜಿಪಂನಿಂದ ಮುಂದಿನ ವರ್ಷ ಡೈರಿಯ ಜೊತೆಗೆ ಕ್ಯಾಲೆಂಡರ್ ಹೊರ ತರಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.