ಪೆದ್ದಪಲ್ಲಿ ಗಂಗಮ್ಮ ದೇವಿ ಬ್ರಹ್ಮರಥೋತ್ಸವ
ಕೆಜುಎಫ್: ಪೆದ್ದಪಲ್ಲಿ ಗಂಗಮ್ಮ ದೇವಿಯ 121ನೇ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಂಗಾರುಪೇಟೆ ತಾಲೂಕಿನ ರಾಬರ್ಟ್ಸನ್ ಪೇಟೆ ಹೋಬಳಿ ಪೆದ್ದಪಲ್ಲಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಉದ್ಬವಮೂರ್ತಿಯಾಗಿ ನೆಲೆಸಿ ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸುತ್ತಿರುವ ಶ್ರೀ ಪೆದ್ದಪಲ್ಲಿ ಗಂಗಮ್ಮ ದೇವಿಯ ಬ್ರಹ್ಮರಥೋತ್ಸವ ಜಾತ್ರೆ ಉತ್ಸವಗಳು ನಡೆಸಲಾಗುತ್ತಿದೆ. ಜಾತ್ರೆಯ ಪ್ರಯುಕ್ತ ವಿವಿಧ ನಾಟಕಗಳು, ಹರಿಕಥೆ, ಸಂಗೀತ ಕಾರ್ಯಕ್ರಮಗಳು, ರಸಮಂಜರಿ, ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಸಲಾಯಿತು. ಪೆದ್ದಪಲ್ಲಿ ಶ್ರೀ ಗಂಗಮ್ಮ ದೇವಿಯ ರಥೋತ್ಸವಕ್ಕೆ ಬಂಗಾರಪೇಟೆ ತಹಸೀಲ್ದಾರ್ ಉಷಾ, ವಿಶೇಷ ತಹಸೀಲ್ದಾರ್ ವೆಂಕಟರಾಮಯ್ಯ, ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ಕಂದಾಯ ಇಲಾಖೆಯ ಅಧಿಕಾರಿ ರಘುರಾಮ್ಸಿಂಗ್, ಪೇಷ್ಕರ್ ವೇಣುಗೋಪಾಲ ಮತ್ತಿತರ ಗಣ್ಯರಿಂದ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಲಾಯಿತು. ಜಾತ್ರಾ ಮಪೋತ್ಯವದಲ್ಲಿ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ 25 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಅವಣೆ ಜಾನುವಾರು ಜಾತ್ರೆ ಇಲ್ಲ
ಮುಳಬಾಗಲು: ತಾಲೂಕಿನ ಅವಣಿ ಗ್ರಾಮದ ರಾಮಲಿಂಗೇಶ್ವರಸ್ವಾಮಿ ರಥೋತ್ಸವ ರಾಜ್ಯ ಮತ್ತು ನೆರೆ ರಾಜ್ಯದಲ್ಲಿಯೇ ಪ್ರಸಿದ್ಧ ಜಾನುವಾರು ಜಾತ್ರೆಯಾಗಿ ನೂರಾರು ವರ್ಷಗಳಿಂದ ನಡೆದು ಬರುತ್ತಿದೆ. ಕೋಟ್ಯಂತರ ರು.ಗಳ ವ್ಯವಹಾರದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದಲೂ ನೂರಾರು ವ್ಯಾಪಾರಿಗಳು ಭಾಗವಹಿಸುತ್ತಾರೆ.
ಇಂತಹ ಜಾನುವಾರುಗಳ ಜಾತ್ರೆಗೆ ಈ ಬಾರಿ ನಿರಾಶೆ, ಕಳೆದ ಕೆಲ ತಿಂಗಳುಗಳಿಂದ ಜಿಲ್ಲೆಯಲ್ಲಿ ಹರಡಿದ ಕಾಲುಬಾಯಿ ಜ್ವರದ ಕಾರಣವಾಗಿ ಫೆಬ್ರವರಿ 23ರಿಂದ ಪ್ರಾರಂಭವಾಗಬೇಕಿದ್ದ ಜಾನುವಾರುಗಳ ಸಂತೆ ನಡೆಸುವಂತಿಲ್ಲವೆಂದು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಆರ್. ಸೋಮಶೇಖರ್ ಪ್ರಕಟಿಸಿದರು.
ಅಂಗಡಿ ಮುಂಗಟ್ಟುಗಳಿಗೆ ಮಾತ್ರ ಹರಾಜು ನಡೆಸಿ 32 ಸಾವಿರಕ್ಕೆ ಹರಾಜು ಖಾತರಿಗೊಂಡಿತು. ಜಿಪಂ ಮಾಜಿ ಸದಸ್ಯ ಆರ್. ಕೃಷ್ಣಪ್ಪ, ನಾಗಭೂಷಣಂ, ಗೋಪಿ, ಉಪ ತಹಸೀಲ್ದಾರ್ ಹರಿ, ರಾಜಸ್ವನಿರೀಕ್ಷಕ ಬಲರಾಮೇಗೌಡ ಮುಂತಾದವರು ಭಾಗವಹಿಸಿದ್ದರು.
ಅಂಚೆ ಗ್ರಾಮೀಣ ನೌಕರರ ಪ್ರತಿಭಟನೆ
ಕೋಲಾರ: ಅನುಕಂಪದ ಆಧಾರದ ನೌಕರಿ ಸೌಲಭ್ಯವನ್ನು ಶೇ.100 ರಷ್ಟು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಂಚೆ ಗ್ರಾಮೀಣ ನೌಕರರು ನಗರದ ಪಿಸಿ ಬಡಾವಣೆಯಲ್ಲಿನ ಅಂಚೆ ಆಧೀಕ್ಷಕರ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ.
ಅಖಿತ ಭಾರತ ಅಂಚೆ ಗ್ರಾಮೀಣ ನೌಕರರ ಸಂಘದ ಕರೆ ಮೇರೆಗೆ ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಬೇಡಿಕೆ ಈಡೇರುವವರೆಗೆ ಮುಷ್ಕರ ನಿಲ್ಲದು ಎಂದು ಮುಖಂಡರು ತಿಳಿಸಿದ್ದಾರೆ.
ಜಿಡಿಎಸ್ ನೌಕರರನ್ನು ಪೌರನೌಕರ ಎಂದು ಪರಿಗಣಿಸಿ, ಇಲಾಖೆಯ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಗ್ರಾಮೀಣ ಅಂಚೆ ನೌಕರರನ್ನು ಸೇರಿಸಿಕೊಳ್ಳಬೇಕು, ಅನುಕಂಪದ ಆಧಾರದ ನೌಕರರಿಗೆ ಶೇ.100 ರಷ್ಟು ಕೊಡಬೇಕು, ಪೋಸ್ಟ್ಮನ್ ಮತ್ತು ಎಂ.ಟಿ.ಎಸ್.ಗಳ ಶೇ.25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿಯನ್ನು ಕೊಡಬೇಕು, ಹೊರಗುತ್ತಿಗೆ ಆಧಾರದ ಮೇಲೆ ಶೇ.25ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ತುಂಬಬೇಕು, ಶೇ.50ರಷ್ಟು ಡಿಎ ಮರ್ಜರ್ ಮಾಡುವುದು ಹಾಗೂ 2006ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಜೆಂಟಿ, ಪಾರ್ಟ್ಟೈಂ ನೌಕರರಿಗೆ ಡಿಎ ನೀಡಬೇಕೆಂದು ನೌಕರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಎಂ.ಜಿ. ರಮೇಶ್, ಎನ್. ಇರಗಪ್ಪ, ಕೃಷ್ಣಪ್ಪ, ವೀರಭದ್ರಪ್ಪ, ಎಸ್. ಲಕ್ಷ್ಮೀನಾರಾಯಣ್, ಶಿವಕುಮಾರ್, ಎಸ್. ರವಿಕುಮಾರ್, ರಮೇಶ್, ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

