ನಂದಿ ಗಿರಿಧಾಮ ಪ್ರವೇಶಕ್ಕೆ ಅಡ್ಡಿ; ಪೊಲೀಸರ ಮೇಲೆ ಹಲ್ಲೆ
ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ಅಕ್ರಮವಾಗಿ ಪ್ರವೇಶಿಸಲು ಅವಕಾಶ ನೀಡದ ಕಾರಣ ಕುಪಿತಗೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬುಧವಾರ ತಡರಾತ್ರಿ 12 ಗಂಟೆ ಸಮಯದಲ್ಲಿ ನಂದಿ ಗಿರಿಧಾಮದ ಚೆಕ್ ಪೋಸ್ಟ್ ಬಳಿಗೆ ಬಂದು ಗಿರಿಧಾಮದೊಳಗೆ ಪ್ರವೇಶಿಸಲು ಮುಂದಾದ ಬೆಂಗಳೂರಿನ ಶಿವರಾಜ್, ಮನೋಹರ್, ಪ್ರಸನ್ನ, ಚಂದ್ರಶೇಖರ್, ಅಶ್ವತ್ಥ್ರನ್ನು ಪೊಲೀಸರು ತಡೆದಿದ್ದಾರೆ. ಮಧ್ಯರಾತ್ರಿಯಾದ ಹಿನ್ನೆಲೆಯಲ್ಲಿ ಗಿರಿಧಾಮದೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ವಾಪಸ್ ಹೋಗಿ, ಬೆಳಿಗ್ಗೆ ಬನ್ನಿ ಎಂದು ಪೊಲೀಸರು ಆರೋಪಿಗಳಿಗೆ ತಿಳಿಸಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿದ್ದ ಐವರು ತಾವು ಪ್ರಭಾವಿಗಳೆನ್ನುವುದನ್ನು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್ನಲಾದ ಶಿವರಾಜ್ ತಾನು ಚಂದ್ರಲೇಔಟ್ನ ಸಬ್ ಇನ್ಸ್ಪೆಕ್ಟರ್ ಎಂತಲೂ, ಚಂದ್ರಶೇಖರ್ ತಾನು ದೊಡ್ಡಬಳ್ಳಾಪುರ ಶಾಸಕರ ಸಂಬಂಧಿ, ತಾವು ಸಚಿವರ ಪುತ್ರರರೆಂದೆಲ್ಲಾ ಸುಳ್ಳು ಹೇಳಿದ್ದಾರೆ. ಇಷ್ಟು ಹೇಳಿದರೂ ಪೊಲೀಸರು ನಂಬದೇ ವಾಪಸ್ ತೆರಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಐವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಸುದ್ದಿ ತಿಳಿದ ನಂದಿ ಗ್ರಾಮದ ಹೊರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾಸ್ಟೆಲ್ಗಳಿಗೆ ಮೂಲ ಸೌಕರ್ಯಕ್ಕೆ ಆಗ್ರಹ
ಕೋಲಾರ: ಜಿಲ್ಲೆಯಾದ್ಯಂತ ಹಾಸ್ಟೆಲ್ಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಿಂಹ ಸೇನೆ ವತಿಯಿಂದ ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿನೋತ್ ಪ್ರಿಯರವರಿಗೆ ಮನವಿ ನೀಡಿದರು. ಸಂಘಟನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ, ತಾವು ಅಧಿಕಾರ ವಹಿಸಿಕೊಂಡ ನಂತರ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಮುಂದಾಗಿತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಕನಿಷ್ಠ ವಾರಕ್ಕೊಮ್ಮೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.
ಆಹಾರ ಪೂರೈಸಲು ಗುತ್ತಿಗೆ ಪಡೆದವರು ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರಿಯಾದ ಸಮಯಕ್ಕೆ ಆಹಾರ ಪೂರೈಕೆ ಮಾಡದೆ ವಿಧ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಇವನ್ನೆಲ್ಲಾ ನೋಡಿಯೂ ಸುಮ್ಮನಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದಿನಗೂಲಿ ನೌಕರರಿಗೆ ಮೂರ್ನಾನಾಲ್ಕು ತಿಂಗಳಿನಿಂದ ವೇತನ ನೀಡದೆ ವಂಚಿಸಲಾಗುತ್ತಿದೆ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ಕೋರಿದರು. ಜಿಲ್ಲಾಧ್ಯಕ್ಷ ತಂಬಳ್ಳಿ ಗೋಪಿನಾಥ್, ಗೌರವಾಧ್ಯಕ್ಷ ಎ.ಎಲ್.ಎನ್. ಸ್ವಾಮಿ, ಕಾರ್ಯದರ್ಶಿ ನಾರಾಯಣಪುರ ರಾಜೇಶ್, ದೇವಗಾನಹಳ್ಳಿ ರಾಜೇಶ್, ಆಟೋಜಾನ್, ಮಂಜುನಾಥ್, ದೇವರಾಯಸಮುದ್ರ ಕಾರ್ತಿಕ್, ಹುಣಸನಹಳ್ಳಿ ರಾಜೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

