ಕೋಲಾರ

ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Published On :

ಕೋಲಾರ: ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಲಂಚ ಸ್ವೀಚಾರ ತಪ್ಪಿಸಬೇಕು, ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬುರವರಿಗೆ  ಗುರುವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಬಡವರು ಆಸ್ಪತ್ರೆಗೆ ಬರುವುದಕ್ಕೆ ಭಯಪಡುತ್ತಿದ್ದಾರೆ, ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಬಡ ರೋಗಿಗಳಿಂದ ಹಣ ಕೇಳುತ್ತಾರೆ, ಯಾವುದೇ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸಿದರು. ವೈದ್ಯರು ಮತ್ತು ಸಿಬ್ಬಂದಿ ಬಡರೋಗಿಗಳಿಗೆ ಚಿಕಿತ್ಸೆ ನೀಡಲು ಮಧ್ಯವರ್ತಿಗಳನ್ನು ನೇಮಕ ಮಾಡಿಕೊಂಡಿರುವುದನ್ನು ಕೂಡಲೇ ನಿಲ್ಲಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ತಿಳಿಸಿದರು.
ಆಸ್ಪತ್ರೆಗೆ ನೀಡುವ ಊಟ, ಬ್ರೆಡ್, ಮೊಟ್ಟೆ ವಿತರಣೆಯಲ್ಲಿ ಗುತ್ತಿಗೆದಾರರು ರೋಗಿಗಳಿಗೆ ನೀಡುವುದರಲ್ಲಿ ವ್ಯಾಪಕವಾಗಿ  ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು. ಪಂಚಕರ್ಮ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗೈರು ಹಾಜರಾಗಿದ್ದರೂ ಹಾಜರಾತಿ ಪುಸ್ತಕದಲ್ಲಿ ದಾಖಲಾತಿ ತಿದ್ದುಪಡಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಪಘಾತ  ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ರೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುವುದನ್ನು ಬಿಡಬೇಕು, ಆಸ್ಪತ್ರೆಗೆ ಸರ್ಕಾರದಿಂದ ಕೋಟ್ಯಂತರ ರುಪಾಯಿಗಳ ಔಷಧಿಗಳು ಸರಬರಾಜಾದಾರೂ ಅವುಗಳನ್ನು ಸಮರ್ಪಕವಾಗಿ ರೋಗಿಗಳಿಗೆ ನೀಡದೇ ಔಷಧಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ನೀಡುವಾಗ ಪ್ರಧಾನ ಕಾರ್ಯದರ್ಶಿ ಮೂರಾಂಡಹಳ್ಳಿ ಶಿವಾರೆಡ್ಡಿ, ಬಂಗವಾದಿ ನಾಗರಾಜಗೌಡ, ತೆರ್ನಹಳ್ಳಿ ಆಂಜಿನಪ್ಪ, ರಾಜೇಶ್, ವೈ.ಎನ್. ವಿಷ್ಣು, ರಂಜಿತ್ ಕುಮಾರ್, ಪುರುಷೋತ್ತಮ್, ಮರಗಲ್ ಶ್ರೀನಿವಾಸ್, ಪಾರೂಕಪಾಷ, ಗೊಟ್ಟುಕುಂಟೆ ಕೃಷ್ಣ, ಸಾಗರ್, ಹರೀಶ್, ಬಂಗಾರಿ ಮಂಜು, ಹೆಬ್ಬಣಿ ಆನಂದ್, ರಂಜಿತ್, ರಾಮು, ಸುನೀಲ್, ಈಕಂಬಳ್ಳಿ ಮಂಜು, ನೀಲಕಂಠಪುರ ಮುನೇಗೌಡ, ಶಿರಿಡಿ ಸಾಯಿಬಾಬಾ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವಿಶ್ವನಾಥ್, ಶಾಮನಾಯಕ್, ಕಿಟ್ಟಿ, ಮಹೇಶ್, ಮುನಿರಾಜು, ಮಂಜು ಇದ್ದರು.


ಆರ್ಟಿಇ ಹಂಚಿಕೆಯಲ್ಲಿ ಪಕ್ಷಪಾತ
ಶಿಡ್ಲಘಟ್ಟ: ಸರ್ಕಾರದ ಆರ್ಟಿಇ ಕಾಯ್ದೆ ಸೀಟುಗಳ ಹಂಚಿಕೆಯಲ್ಲಿ ಪಕ್ಷಪಾತ ತೋರಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪಟ್ಟಣದ ಯಾವ ಶಾಲೆಯಲ್ಲಿಯೂ ಸೀಟುಗಳು ಲಭ್ಯವಾಗದೆ, ಪೋಷಕರು ಹಿಡಿ ಶಾಪ ಹಾಕುತ್ತಿದ್ದಾರೆ. ಪಟ್ಟಣದ ಡಾಲ್ಪಿನ್ ಶಾಲೆಯಲ್ಲಿ ಆರ್ಟಿಇ ಕಾಯ್ದೆಯಡಿ ಸೀಟುಗಳ ಹಂಚಿಕೆ ಪ್ರಕ್ರಿಯೆ ನಡೆದಿದ್ದು, ಅರ್ಜಿ ಸಲ್ಲಿಸಿದ್ದ ಪೋಷಕರಿಗೆ ನಿರಾಸೆ ಎದುರಾಗಿದೆ. ಸೀಟು ಹಂಚಿಕೆ ಮಾಡಲು ಬಂದಿದ್ದ ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥ ರೆಡ್ಡಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಲು ಸಾಧ್ಯವಿಲ್ಲವೆಂದು ಹೇಳಿ ತಪ್ಪಿಸಿಕೊಂಡರೂ ಪ್ರಯೋಜನವಿಲ್ಲದಂತಾಗಿದೆ. ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಗಲಾಟೆಗೆ ಕಾರಣವಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.