ಕೋಲಾರ

ತಾ.ಸಾಹಿತ್ಯ ಸಮ್ಮೇಳನಕ್ಕೆ ಸಜ್ಜು

Published On :

ಚಿಕ್ಕಬಳ್ಳಾಪುರ: ಸಾಹಿತಿ, ಪತ್ರಕರ್ತ ಟಿ.ಎಸ್. ನಾಗೇಂದ್ರಬಾಬುರವರ ಅಧ್ಯಕ್ಷತೆಯಲ್ಲಿ ಫೆ.22 ರಂದು ನಗರದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಡಗರದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಪಿ. ನವಮೋಹನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೆಳಗೆ ಹಾಕಲಾಗಿದೆ ಎಂದು ಕೆಲವರು ಅಪಸ್ವರ ತೆಗೆಯುತ್ತಿದ್ದಾರೆ ಎಂದು ಕಣ್ಣೀರು ಸುರಿಸಿ ತಮ್ಮ ಅಳಲನ್ನು ತೋಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.22 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮ್ಮೇಳನವನ್ನು ಶಾಸಕ ಡಾ.ಕೆ. ಸುಧಾಕರ್ ಉದ್ಘಾಟಿಸಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಕೋಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಶೇಷವಾಗಿ ಬನವಾಸಿ ಕನ್ನಡದ ಚಾರಿತ್ರ್ಯ ಎಂಬ ವಿಷಯವಾಗಿ ವಕೀಲ ಟಿ.ಎಸ್. ವಿಜಯಶಂಕರ್ ಉಪನ್ಯಾಸ ನೀಡಲಿದ್ದಾರೆ. ಯುವ ಕವಿಗಳನ್ನು ಈ ಸಮ್ಮೇಳನದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಯುವ ಕವಿಗೋಷ್ಠಿ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ನಳಿನಾಕ್ಷಿ ನೇತೃತ್ವದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಚಾರವಾಗಿ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೋಡಿ ರಂಗಪ್ಪ ಮಾತನಾಡಲಿದ್ದು, ಗ.ನ. ಅಶ್ವತ್ಥ್ ಹಾಗೂ ಕರ್ನಾಟಕ ಸಿಂಧೂರ ನೃತ್ಯ ಕಲಾನಿಕೇತನದ ಸಾಂಸ್ಕೃತಿಕ ಕಾರ್ಯಕ್ರಮಗಳು, ಎಂ. ಶಿವರಾಂರವರ ಅಧ್ಯಕ್ಷತೆಯಲ್ಲಿ ಜ್ಞಾನಪೀಠ ಪುರಸ್ಕೃತರ ಬಗ್ಗೆ ಸ್ಮರಣೆ ಕಾರ್ಯಕ್ರಮ, ತಾಪಂ ಸದಸ್ಯ ಮೋಹನ್ ಅಧ್ಯಕ್ಷತೆಯಲ್ಲಿ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡು-ನುಡಿ ಮತ್ತು ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರನ್ನು ಸನ್ಮಾನಿಸಲಾಗುವುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ನಗರದ ನಂದಿರಂಗಮಂದಿರದಲ್ಲಿ ರಾಷ್ಟ್ರಧ್ವಜಾರೋಹಣ ತಹಸೀಲ್ದಾರ್ ನಟೇಶ್, ನಾಡ ಧ್ವಜವನ್ನು ವೃತ್ತನಿರೀಕ್ಷಕ ಬಾಲಾಜಿ ಸಿಂಗ್ ಮತ್ತು ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಪಿ. ನವಮೋಹನ್ ನೇರವೇರಿಸಲಿದ್ದಾರೆ. ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷ ಟಿ.ಎಸ್.ನಾಗೇಂದ್ರಬಾಬುರನ್ನು ವೈಭವೀಕರಿಸಿದ ತೆರೆದ ವಾಹನದಲ್ಲಿ ನಗರದ ನಂದಿ ರಂಗಮಂದಿರದಿಂದ ಮೆರವಣಿಗೆಗೆ ನಡೆಸಲಾಗುವುದು. ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ ನಂದಿ ಧ್ವಜ, ತಮಟೆ ವಾದ್ಯ ಮತ್ತು ವಿದ್ಯಾರ್ಥಿಗಳ ಬ್ಯಾಂಡ್ನೊಂದಿಗೆ ಖ್ಯಾತ ಜಾನಪದ ಕಲಾವಿದರು ಹಾಗೂ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಕಳಸ ನಡಿಗೆ ಮೆರವಣಿಗೆಗೆ ಮೆರಗು ನೀಡಲಿದೆ ಎಂದರು.
ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎನ್. ಅಮೃತ್ ಕುಮಾರ್ ಮಾತನಾಡಿದರು. ಗೋಷ್ಠಿಯಲ್ಲಿ ಕ.ಸಾ.ಪ. ತಾಲೂಕು ಗೌರವ ಕಾರ್ಯದರ್ಶಿ ಎಂ. ಕೃಷ್ಣಪ್ಪ, ಮಹಿಳಾ ಪ್ರತಿನಿಧಿ ನಳಿನಾಕ್ಷಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಎನ್. ಪೃಥ್ವಿರಾಜ್, ಬಿ.ಆರ್. ವರದರಾಜು, ಸಂಘಸಂಸ್ಥೆಗಳ ಪ್ರತಿನಿಧಿ ಭದ್ರಾಚಲಂ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.