ಕೋಲಾರ

ಸಿದ್ದುಗಾಗಿ ಕಾಂಗ್ರೆಸ್ಗೆ ಬೆಂಬಲ: ಎ.ಕೆ. ಸುಬ್ಬಯ್ಯ

Published On :

ಕೋಲಾರ: ನಾನು ಕಾಂಗ್ರೆಸ್ ಪಕ್ಷದ ಬೆಂಬಲಿಗನಲ್ಲ, ಈ ಪಕ್ಷ ಸಮಯ ಸಾಧಕರ ಕೂಟ. ಆದರೆ, ಸಿದ್ದರಾಮಯ್ಯ ಇರುವುದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲು ಸಮಾನ ಮನಸ್ಕರರು ತೀರ್ಮಾನಿಸಿರುವುದಾಗಿ ಹಿರಿಯ ವಕೀಲ, ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಭಾರತದ ಬಹುಸಂಸ್ಕೃತಿ ಮೇಲೆ ಫ್ಯಾಸಿಸಂನ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಬೇಕು. ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬಾರದು, ಕರ್ನಾಟಕದಲ್ಲಿ ಮೋದಿ ವೇವ್ ಮೋದಿ ಗ್ರೇವ್ ಆಗಿ ಪರಿವರ್ತನೆ ಆಗಲು ಬಹುಸಂಖ್ಯಾತರು ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಸಿದ್ದರಾಮಯ್ಯನವರ ಕಾಲು ಎಳೆಯಲು ಕಾಂಗ್ರೆಸ್ಸಿಗರೇ ಪ್ರಯತ್ನಿಸುತ್ತಿದ್ದಾರೆ, ದೇವರಾಜ ಅರಸು ನಂತರ ಅಹಿಂದ ವರ್ಗಕ್ಕೆ ಹೆಚ್ಚು ಅನುಕೂಲವಾಗುತ್ತಿರುವುದು ಸಿದ್ದರಾಮಯ್ಯನವರಿಂದ, ಹಾಗಾಗಿ ಇವರು ಮುಖ್ಯಮಂತ್ರಿಯಾಗಿ ಇನ್ನಷ್ಟು ವರ್ಷ ಮುಂದುವರೆಯಬೇಕಾಗಿರುವುದು ಅನಿವಾರ್ಯ, ಸರ್ಕಾರದಲ್ಲಿ ಸಿದ್ದರಾಮಯ್ಯನವರ ಚಾಲನೆ ಇನ್ನು ಆರಂಭಗೊಂಡಿಲ್ಲ, ಇದಕ್ಕೆ ಮೂಲ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳುವ ಕೆಲವು ಅವಕಾಶವಾದಿಗಳು ಅಡ್ಡಗಾಲಾಗಿದ್ದಾರೆಂದು ಆರೋಪಿಸಿದರು. ಸಿದ್ದರಾಮಯ್ಯನವರ ಚಲನೆಗೆ ಶಕ್ತಿ ಸಿಗಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ವರ್ಗದ ಬಡವರು ಮುಖ್ಯವಾಗಿ ಬಹುಸಂಸ್ಕೃತಿಯನ್ನು ನಂಬಿರುವವರು ಸಿದ್ದರಾಮಯ್ಯನವರ ಕೈಬಲಪಡಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಸಮಯ ಸಾಧಕರ ಕೂಟವಾದರೂ ಸಿದ್ದರಾಮಯ್ಯನವರು ಅಲ್ಲಿ ಇರುವುದು ಸಮಾಧಾನ. ಮೋದಿ ಟಾಟಾ-ಬಿರ್ಲ ಹಿಂದೆ ಓಡಾಡುತ್ತಿದ್ದರೆ, ಸಿದ್ದರಾಮಯ್ಯ ಜನ ಸಾಮಾನ್ಯರೊಟ್ಟಿಗೆ ಇದ್ದು ರಾಜ್ಯದ ಹಿತ ಕಾಪಾಡಲು ಪ್ರಯತ್ನಿಸುತ್ತಿರುವುದರಿಂದ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮೋದಿಯನ್ನು ಸೋಲಿಸಿ ಫ್ಯಾಸಿಸಂನ ಸಮಾಧಿ ಮಾಡಬೇಕೆಂದು ತಿಳಿಸಿದರು.
ಅಮ್ ಆದ್ಮಿಗೆ ಬೆಂಬಲವಿಲ್ಲ: ಆಮ್ ಆದ್ಮಿ ಪಕ್ಷಕ್ಕೆ ಸಮಾನ ಮನಸ್ಕರು ಬೆಂಬಲ ನೀಡಲು ಚಿಂತನೆ ನಡೆದಿತ್ತು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆ ಗಮನಿಸಿ ನಮ್ಮ ಪ್ರಯತ್ನಗಳನ್ನು ಮುಂದೂಡಲಾಗಿದೆ ಎಂದು ಸುಬ್ಬಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ, ಚಿಂತಕ ದೇವನೂರು ಮಹಾದೇವ್, ಆದಿಮ ಸಂಸ್ಥೆಯ ಅಧ್ಯಕ್ಷ, ಹಿರಿಯ ರಂಗ ಕರ್ಮಿ ಕೋಟಿಗಾನಹಳ್ಳಿ ರಾಮಯ್ಯ, ಚಿಕ್ಕಮಗಳೂರು ಕೋಮು ಸೌಹಾರ್ದ ವೇದಿಕೆ ಮುಖಂಡ ಕೆ.ಎಲ್. ಅಶೋಕ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕರಗೋಡು, ಜಲತಜ್ಞ ಪ್ರೊ.ಕೆ. ನಾರಾಯಣಸ್ವಾಮಿ, ಮುಖಂಡ ಎನ್. ವೆಂಕಟೇಶ್, ಲಕ್ಷ್ಮಮ್ಮ, ಮಂಜುಳ ಇದ್ದರು.
ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಸಿ.ವಿ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ಚಳವಳಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.