ಉದ್ಘಾಟನೆ ಮುನ್ನವೇ ಮೇಲ್ಸೇತುವೆಯಲ್ಲಿ ಸಂಚಾರ
ಕನ್ನಡಪ್ರಭ ವಾರ್ತೆ, ಕೋಲಾರ,ಜ.1
ಕಳೆದ ಎರಡೂವರೆ ವರ್ಷಗಳ ಹಿಂದೆ ನಗರದ ಟವರ್ ಕ್ಲಬ್ ಬಳಿ ಆರಂಭಗೊಂಡ ಮೇಲ್ಸೇತುವೆ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಉದ್ಘಾಟನೆಗೆ ಮುಂಚೆಯೇ ವಾಹನಗಳ ಓಡಾಟ ಆರಂಭಗೊಂಡಿದೆ.
ಜನವರಿ ಮೊದಲ ವಾರವೇ ಸೇತುವೆ ಉದ್ಘಾಟನೆಗೆ ಚಿಂತನೆ ನಡೆದಿತ್ತಾದರೂ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಉಳಿದಿರುವುದರಿಂದ ಜ.26ರಂದು ಗಣ ರಾಜ್ಯೋತ್ಸವ ದಿನದಂದು ಉದ್ಘಾಟನೆ ನೆರವೇರಿಸಲು ರೇಲ್ವೆ ಅಧಿಕಾರಿಗಳು ಮತ್ತು ಜಿಲ್ಲಾ ಆಡಳಿತ ಸಿದ್ಧತೆ ನಡೆಸುತ್ತಿದೆ.
ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗದ ಕಾಮಗಾರಿ ಸಂದರ್ಭದಲ್ಲಿ ಟವರ್ ಕ್ಲಕ್ ಬಳಿ ಮೇಲು ಸೇತುವೆ ನಿರ್ಮಾಣ ಅಗತ್ಯವೆಂದು ಭಾವಿಸಿ 2011ರ ಜೂನ್ 26 ರಂದು ಟವರ್ ಕ್ಲಕ್ ಮೂಲಕ ಬೆಂಗಳೂರು, ಮಾಲೂರಿಗೆ ಹೋಗುವ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.
8 ತಿಂಗಳಲ್ಲಿ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿತ್ತಾದರೂ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿತ್ತು. ಸಾರ್ವಜನಿಕರ ಅಸಮಾಧಾನ, ಟೀಕೆಗಳಿಂದ ಎಚ್ಚೆತ್ತುಕೊಂಡ ಕೇಂದ್ರ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಚಿವ ಕೆ.ಹೆಚ್. ಮುನಿಯಪ್ಪ ಆಗಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೇಗ ಹೆಚ್ಚಿಸಿದ ಪರಿಣಾಮ ಈದೀಗ ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿದ್ದು ಉದ್ಘಾಟನೆಗೆ ಮುಂಚೆಯೇ ಕೆಲ ಸರ್ಕಾರಿ ಬಸ್ಸುಗಳು, ಆಟೋರಿಕ್ಷಾ, ದ್ವಿಚಕ್ರ ವಾಹನಗಳ ಓಡಾಟ ಶೂರುವಾಗಿದ್ದು ಇದರಿಂದ ಆಗುವ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ಗಳು ಅರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸೇತುವೆ ಉದ್ಘಾಟನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಈ ಮೇಲು ಸೇತುವೆ ಅದಷ್ಟು ಬೇಗನೆ ಉದ್ಘಾಟನೆಗೊಂಡಲ್ಲಿ ಬೆಂಗಳೂರು, ಮಾಲೂರು, ಹೊಸಕೋಟೆಗೆ ಹೋಗುವ ಪ್ರಯಾಣಿಕರು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವುದು ತಪ್ಪುತ್ತದೆ. ಜೊತೆಗೆ ಸಮಯ ವ್ಯರ್ಥವಾಗುವುದು ನಿಲ್ಲುತ್ತದೆ.
ಸೇತುವೆ ನಿರ್ಮಾಣಕ್ಕೆ ನಿಗದಿಯಾಗಿದ್ದ 5 ಕೋಟಿ ರು. ಕಾಮಗಾರಿ ವಿಳಂಬದಿಂದಾಗಿ ಪರಿಷ್ಕೃತ ಕಾಮಗಾರಿಯಡಿ ಈಗಾಗಲೇ 9 ಕೋಟಿ ರು.ವರೆಗೆ ಖರ್ಚು ಮಾಡಲಾಗಿದೆ. ಜ.26ರಂದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಸೇತುವೆ ಉದ್ಘಾಟನೆ ನೆರವೇರಿಸುವವರಿದ್ದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಸ್ಥಳೀಯ ಶಾಸಕ ವರ್ತೂರ್ ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸುವ ಸಾಧ್ಯತೆಗಳಿವೆ.
ಸೇತುವೆ ಉದ್ಘಾಟನೆ ಮತ್ತಷ್ಟು ವಿಳಂಬವಾದಲ್ಲಿ ಸಮಸ್ಯೆ ಆಗುತ್ತದೆ. ಜೊತೆಗೆ ಲೋಕಸಭಾ ಚುನಾವಣೆಗೆ ಒಂದು ವೇಳೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದಲ್ಲಿ ಉದ್ಘಾಟನೆ ಭಾಗ್ಯಕ್ಕೆ ಅಡ್ಡಿಯಾಗಬಹುದೆಂಬ ಕಾರಣದಿಂದ ಜ. 26ಕ್ಕೆ ಕಾರ್ಯಕ್ರಮ ನಿಗದಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

