ಕೋಲಾರ

ಸುದ್ದಿ ಸಂಕ್ಷೇಪ

Published On :

ಇಂದು ಚಿಂತನಾ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಜ.4 ರಂದು ಬೆಳಿಗ್ಗೆ 10.30 ಕ್ಕೆ ಅಂಬೇಡ್ಕರ್ 57 ನೇ ಪರಿ ನಿಬ್ಬಾಣ ದಿನದ ಅಂಗವಾಗಿ ಅಂಬೇಡ್ಕರ್ ಜೀವನ ಮತ್ತು ಹೋರಾಟ ಕುರಿತ ಒಂದು ಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ಧಲಿಂಗಯ್ಯ ಸೇರಿದಂತೆ ದಲಿತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕದಸಂಸ ಮುಖಂಡ ಸು.ದಾ. ವೆಂಕಟೇಶ್ ತಿಳಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಲು ಕರೆ
ಚಿಕ್ಕಬಳ್ಳಾಪುರ: ಮಡಿವಾಳ ಜನಾಂಗದ ಸಂಘಟನೆಗಾಗಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜ.5 ರಂದು ರಾಜ್ಯ ಮಡಿವಾಳರ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಜಿಲ್ಲೆಯಿಂದ ಜನಾಂಗದವರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಾಬು ಮನವಿ ಮಾಡಿದ್ದಾರೆ. ಮಡಿವಾಳ ಜನಾಂಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಈ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.  ಸಮಾವೇಶದ ಮೂಲಕ ಮಡಿವಾಳ ಜನಾಂಗವನ್ನು ರಾಷ್ಟ್ರದ ಇತರೆ 17 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿರುವಂತೆ ನಮ್ಮ ರಾಜ್ಯದಲ್ಲಿಯೂ ಸಹ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಬೇಕು. ಕುಲಗುರುಗಳಾದ ಮಡಿವಾಳ ಮಾಚಿದೇವರ ಜನ್ಮ ದಿನವನ್ನು ಸಂವಿಧಾನಾತ್ಮಕವಾಗಿ ಮಾಚಿದೇವ ಜಯಂತಿ ಎಂದು ಘೋಷಿಸಬೇಕು. ಮಡಿವಾಳ ಮಾಚಿ ದೇವರ ಜನ್ಮ ಸ್ಥಳವಾದ ಬಿಜಾಪುರ ಜಿಲ್ಲೆ ಸಿಂಧಗಿ ತಾಲೂಕು ದೇವರ ಹಿಪ್ಪರಿಗೆಯನ್ನು ಅಭಿವೃದ್ಧಿಪಡಿಸಿ, ಜನ್ಮ ಸ್ಥಳ ನಿರ್ವಹಣೆಗೆ ಮಾಚಿದೇವ ಪ್ರಾಧಿಕಾರವನ್ನು ರಚಿಸಬೇಕು. ಮಾಚಿದೇವ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.  ಎ.ಎನ್. ನಾಗರಾಜ್, ಪ್ರಭಾಕರ್, ರಂಗನಾಥ್, ವೆಂಕಟರಾಮಯ್ಯ, ರಾಮಕೃಷ್ಣಪ್ಪ, ಬಾಲಾಜಿ, ಮುರಳಿ, ಸಂಜೀವಪ್ಪ ಮುಂತಾದವರು ಉಪಸ್ಥಿತರಿದ್ದರು.
ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನಲ್ಲಿ ಖಾಲಿ ಇರುವ ಒಂದು ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸ್ವಲಿಖಿತ ಅರ್ಜಿಯನ್ನು ಜ.15 ರೊಳಗೆ ಮೊಹರು ಮಾಡಿದ ಲಕೋಟೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದೆಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಪಂ ಅಧ್ಯಕ್ಷರ ಪದಚ್ಯುತಿ
ಟೇಕಲ್: ಮಾಲೂರು ತಾಲೂಕಿನಲ್ಲಿ ಕುತೂಹಲ ಮೂಡಿಸಿದ್ದ ಕೊಂಡಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ನಡೆದ ಅವಿಶ್ವಾಸ ಗೊತ್ತುವಳಿ ಸಭೆ ಜಿಲ್ಲಾ ಉಪವಿಭಾಗಾಧಿಕಾರಿ ಸಿ.ಎನ್. ಮಂಜುನಾಥರವರ ಅಧ್ಯಕ್ಷತೆಯಲ್ಲಿ ನಡೆದು ಅಧ್ಯಕ್ಷೆ ಮಸೂದಾ ಪರ್ವಿನ್ ವಿರುದ್ಧ 12 ಮಂದಿ ಸದಸ್ಯರು ಮತ ಚಲಾಯಿಸಿದರು. ಒಟ್ಟು 16 ಸದಸ್ಯರಲ್ಲಿ 12 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಅಧ್ಯಕ್ಷ ಸ್ಥಾನ ಪದಚ್ಯುತಿಯಾಗಿದೆ. ತಹಸೀಲ್ದಾರ್ ಡಾ. ಸುಧಾಪಾಯಸ್, ಉಪತಹಸೀಲ್ದಾರ್ ಗಂಗಯ್ಯ, ಎಚ್.ವಿ. ವಸಂತಕುಮಾರ್, ಬಿ.ಕೆ.ಶ್ರೀನಿವಾಸ್ ಮೂರ್ತಿ, ಚಿನ್ನಪ್ಪ ಇದ್ದರು.
ಆರ್ಟಿಇ ಹಣ ಬಿಡುಗಡೆಗೆ ಒತ್ತಾಯ
ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 2013-14ನೇ ಸಾಲಿನ ಆರ್ಟಿಇ ಹಣ ಬಿಡುಗಡೆಗೆ ಒತ್ತಾಯಿಸಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 2013-14 ನೇ ಸಾಲಿನ ಆರ್ಟಿಇ ಹಣ ಬಿಡುಗಡೆ ಮಾಡದೆಯೇ ಪ್ರಸಕ್ತ 2014-14 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿರುವುದರ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಉತ್ತರ ಬಂದಿಲ್ಲವೆಂದು ಸಂಘದ ಪದಾಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಂಡರು. ಆರ್ಟಿಇ ಬಾಕಿ ಹಣ ಬಿಡುಗಡೆ ಮಾಡಿ ಪ್ರಸಕ್ತ ಸಾಲಿಗೆ ಪ್ರವೇಶ ಪ್ರಾರಂಭಿಸಬೇಕು ಮತ್ತು ಸಭೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.