ತಾಲೂಕು ವೈದ್ಯಾಧಿಕಾರಿಗೆ ದಂಡ
ಮುಳಬಾಗಿಲು ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್. ಪ್ರಕಾಶ್ ಅವರು ಅನುಮತಿ ಇಲ್ಲದೆ ಉನ್ನತ ವ್ಯಾಸಂಗಕ್ಕಾಗಿ ಹೋಗಿರುವುದು ಹಾಗೂ ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿಗಳು ನೀಡಿದ ವರದಿ ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತರು ಆರೋಪಿಗೆ ದಂಡ ವಿಧಿಸಿದ್ದಾರೆ.
ಡಾ.ಕೆ.ಎಸ್.ಪ್ರಕಾಶ್ ಅವರಿಗೆ 2010ರ ಆಗಸ್ಟ್ 5 ರಲ್ಲಿ ಇಲಾಖೆಯು ಸ್ವಂತ ಖರ್ಚಿನಲ್ಲಿ ಎಂ.ಪಿ.ಹೆಚ್ ಸ್ನಾತಕೋತ್ತರ ವ್ಯಾಸಂಗ ನಡೆಸಲು ಅನುಮತಿ ನೀಡಿತ್ತು. ಆದರೆ ಸದರಿ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ಹೋಗಲು ಇಚ್ಚಿಸದ ಕಾರಣ 2010ರ ಡಿಸೆಂಬರ್ 3ರಂದು ಸರ್ಕಾರ ಬಂಗಾರಪೇಟೆ ತಾಲೂಕಿನ ಕಾಮಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೇಮಕ ಮಾಡಿತ್ತು.
ಡಾ. ಪ್ರಕಾಶ್ ನೇಮಿಸಿದ ಸ್ಥಳಕ್ಕೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ ಅನಧಿಕೃತ ಗೈರು ಹಾಜರಾಗಿದ್ದರು ಹಾಗೂ ಪುನಃ ಸ್ನಾತಕೋತ್ತರ ವ್ಯಾಸಂಗಕ್ಕೆ ತೆರಳಲು ಇಲಾಖೆಯಿಂದ ಅನುಮತಿ ಪಡೆಯದೆ ಹೋಗಿದ್ದರಿಂದ ಇವರ ವಿರುದ್ಧ ಆರೋಗ್ಯ ಇಲಾಖೆಗೆ ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ದೂರು ಹೋಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದಾಗ, ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಡಾ. ಪ್ರಕಾಶ್ ಉತ್ತರಿಸಿದ್ದರಿಂದ ಪ್ರಕರಣದ ಸಮಗ್ರ ತನಿಖೆಗಾಗಿ ಆರೋಗ್ಯ ಇಲಾಖೆ ಜಾಗೃತ ಕೋಶದ ಮುಖ್ಯ ಜಾಗೃತಾಧಿಕಾರಿಯನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. 2013ರ ಜ.8 ರಂದು ದೋಷಾರೋಪಣಾ ಪಟ್ಟಿ ಜಾರಿ ಮಾಡಲಾಗಿತ್ತು, ಜ.18 ರಂದು ವೈದ್ಯರ ಹೇಳಿಕೆಯನ್ನು ಪಡೆದು ಜುಲೈ 20 ರಂದು ವಿಚಾರಣಾಧಿಕಾರಿಗಳು ತನಿಖೆ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ವೈದ್ಯರು ಸ್ನಾತಕೋತ್ತರ ವ್ಯಾಸಂಗಕ್ಕೆ 2010ರ ಸೆಪ್ಟೆಂಬರ್ 4 ರಂದು ಹಾಜರಾದ ಮೂರು ತಿಂಗಳ ನಂತರ ಉನ್ನತ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಇರುವುದಾಗಿ ತಿಳಿಸಿದ್ದರಿಂದ ಕಾಮಸಮುದ್ರಕ್ಕೆ ನೇಮಕ ಮಾಡಲಾಗಿತ್ತು. ಅಲ್ಲೂ ಸಹ ಸರಿಯಾಗಿ ಕೆಲಸಕ್ಕೆ ಹಾಜರಾಗಿಲ್ಲ, ಜೊತೆಗೆ ಇಲಾಖೆಯ ಅನುಮತಿ ಇಲ್ಲದೆ ಉನ್ನತ ವ್ಯಾಸಂಗಕ್ಕೆ ತೆರಳಿರುವುದು ಸಾಬೀತು ಆಗಿರುವುದರಿಂದ ಮುಂದೆ ಲಭ್ಯವಾಗುವ ಒಂದು ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿದು ದಂಡ ವಿಧಿಸಿ ಹಾಗೂ ಅನಧಿತೃತ ಗೈರು ಹಾಜರಾತಿ ಅವಧಿಯಲ್ಲಿ ಪಡೆದಿರುವ ವೇತನವನ್ನು ಹಿಂದಿರುಗಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತ ವಿ.ಬಿ. ಪಾಟೀಲ್ ಅವರು 2014ರ ಜನವರಿ 1 ರಂದು ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಗೆ ಒತ್ತಾಯ
ಡಾ.ಕೆ.ಎಸ್.ಪ್ರಕಾಶ್ ಅವರು ಅನಧಿತೃತ ಗೈರು ಮತ್ತು ಅನುಮತಿ ಇಲ್ಲದೆ ಎಂ.ಪಿ.ಹೆಚ್ ಸ್ನಾತಕೋತ್ತರ ಪದವಿಯನ್ನು ಪಡೆಯಲು ಕಾಂಚಿಪುರಂ ಜಿಲ್ಲೆಯ ಕಟನ್ಕಲ್ಲತೂರ್ಗೆ ಹೋಗಿ ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ಇಲ್ಲದ ಸಂಸ್ಥೆಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಂ.ಪಿ.ಹೆಚ್ ಪದವಿಯನ್ನು ಪಡೆದಿರುವ ಆರೋಪ ಸಾಬೀತು ಆಗಿರುವುದರಿಂದ ಕೂಡಲೇ ವೈದ್ಯರನ್ನು ಜಿಲ್ಲೆಯಿಂದ ವರ್ಗಾಯಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಜಿಲ್ಲಾ ಸಂಚಾಲಕ ಮುನಿವೆಂಕಟಪ್ಪ ಒತ್ತಾಯಿಸಿದ್ದಾರೆ.
ಸರ್ಕಾರ ಆದೇಶ ನೋಡಿಲ್ಲ
ತಾವಿಂದು ಜಿಲ್ಲಾ ಪ್ರವಾಸದಲ್ಲಿ ಇದ್ದುದರಿಂದ ಸರ್ಕಾರದಿಂದ ಏನೇನು ಆದೇಶಗಳು ಬಂದಿದೆಯೋ ಗಮನಿಸಲಾಗಿಲ್ಲ. ಡಾ.ಕೆ.ಎಸ್. ಪ್ರಕಾಶ್ ವಿರುದ್ಧ ಆರೋಗ್ಯ ಇಲಾಖೆಯ ಆಯುಕ್ತ ವಿ.ಬಿ. ಪಾಟೀಲ್ ಏನು ಕ್ರಮ ಕೈಗೊಂಡಿದ್ದಾರೋ ಗೊತ್ತಿಲ್ಲ. ಶನಿವಾರ ಕಚೇರಿಗೆ ಹೋಗಿ ಪರಿಶೀಲಿಸುತ್ತೇನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸೇವೆಗಳ ಅಧಿಕಾರಿ ಡಾ.ಪೈಯಾಜ್ ಖಾನ್ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

