ಮಂಚೇನಹಳ್ಳಿ ಹೋಬಳಿ ಬಂದ್ ಪೂರ್ಣ
ಗೌರಿಬಿದನೂರು: ತಾಲೂಕಿನ ದಂಡಿಗಾನಹಳ್ಳಿಯ ಹೊಸಕೆರೆಯಿಂದ ಗೌರಿಬಿದನೂರು ಪಟ್ಟಣ ಮತ್ತು ಇತರೆ 11 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಸ್ತಾರ ಯೋಜನಾ ವರದಿ ಸಿದ್ಧಪಡಿಸಿರುವ ಯೋಜನೆಯ ವಿರುದ್ಧ ಮಂಚೇನಹಳ್ಳಿ ಹೋಬಳಿ ಜನತೆ ಹಮ್ಮಿಕೊಂಡಿದ್ದ ಬಂದ್ ಬಹುತೇಕ ಯಶಸ್ವಿಯಾಯಿತು.
ಶಾಲಾ- ಕಾಲೇಜುಗಳು, ಅಂಗಡಿ- ಮುಂಗಟ್ಟುಗಳು, ಚಿತ್ರಮಂದಿರಗಳು, ವಾಹನ ಸಂಚಾರ ಬಹುತೇಕ ಮುಚ್ಚಲ್ಪಟ್ಟಿದ್ದು ರಸ್ತೆಗಳು ಬಿಕೋ ಎನ್ನುತ್ತಿದ್ದವು. ಹೋಬಳಿಯ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಜನಪ್ರತಿನಿಧಿಗಳು, ರೈತ ಮುಖಂಡರು, ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲಿಸಿದರು.
ಜನತೆಗೆ ಅನ್ಯಾಯ: ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಹಾಗೂ ಪರಿಸರವಾದಿ ಎಂ.ಆರ್. ಲಕ್ಷ್ಮೀನಾರಾಯಣ್ ಮಾತನಾಡಿ, ಶಾಸಕ ಎನ್.ಎಚ್. ಶಿವಶಂಕರ್ ದ್ವೇಷದ ರಾಜಕಾರಣವನ್ನು ಬಿಟ್ಟು ಪರಿಸರವನ್ನು ಉಳಿಸುವಂತಹ ಹಾಗೂ ದೂರದೃಷ್ಟಿಯ ಯೋಜನೆಗಳನ್ನು ಮಾಡಬೇಕು. ಆದರೆ ಇಂತಹ ಶಾಶ್ವತವಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಂಚೇನಹಳ್ಳಿಯ ಜನತೆಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ದಂಡಿಗಾನಹಳ್ಳಿಯ ಹೊಸಕೆರೆಯಲ್ಲಿರುವ ನೀರು ಜಲಚರ ಪ್ರಾಣಿಗಳಿಗೆ ಪಕ್ಷಿಗಳಿಗೇ ಸಾಲುತ್ತಿಲ್ಲ. ಇಂತಹ ಕೆರೆಯಿಂದ ಗೌರಿಬಿದನೂರು ಮತ್ತು 11 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ರೂಪಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಎತ್ತಿನ ಹೊಳೆ ಜಾರಿಯಾಗಲಿ: ತಾಲೂಕಿನಲ್ಲಿ ನಿರಂತರ ಮರಳು ಗಾಣಿಗಾರಿಕೆ ಲೂಟಿ ನಡೆಯುತ್ತಿದೆ, ಮರಳುಲೂಟಿಯಿಂದ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರಿಗೆ ತತ್ವಾರವಾಗಿದೆ. ಮೊದಲು ಮರಳು ಸಾಗಾಣಿಕೆಯನ್ನು ನಿಲ್ಲಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಶಾಶ್ವತ ನೀರಾವಾರಿ ಯೋಜನೆಯಾದ ಪರಮಶಿವಯ್ಯ ವರದಿಯ ನೇತ್ರಾವತಿ ಯೋಜನೆ ಮತ್ತು ಎತ್ತಿನ ಹೊಳೆಯೋಜನೆಗಳನ್ನು ಜಾರಿಗೆ ತರುವಲ್ಲಿ ತಮ್ಮ ಕಳಕಳಿಯನ್ನು ತೋರಿಸಲಿ ಎಂದು ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಮಂಚೇನಹಳ್ಳಿ ಹೋಬಳಿ ಸುತ್ತಮುತ್ತಲು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಇರುವುದರಿಂದ ಕೆರೆಯಿಂದ ಕೃಷಿ ಚಟುವಟಿಕೆಗಾಗಿ ರೈತರಿಗೆ ನೀರು ಬಿಡಬಾರದೆಂದು ಆದೇಶಿಸಿದ್ದಾರೆ. ಕಳೆದ 12 ವರ್ಷದಿಂದ ವ್ಯವಸಾಯಕ್ಕೆ ನೀರು ಬಳಸಲು ಸಾಧ್ಯವಾಗಿಲ್ಲ. ಈ ಕೆರೆಯ ಅಂತರ್ಜಲದಿಂದ ಸುಮಾರು 20ರಿಂದ 30 ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಿದ್ದು, ಕೊಳವೆ ಬಾವಿಗಳಲ್ಲಿ ನೀರಿದೆ. ಆದರೆ ಇದನ್ನು ಕುಡಿಯುವ ನೀರಿನ ಯೋಜನೆಗೆ ಉಪಯೋಗಿಸಿದರೆ ಅಂತರ್ಜಲ ನಾಶದ ಜೊತೆಗೆ ಡ್ಯಾಂನ ಸುತ್ತಮುತ್ತಲ ಬೆಟ್ಟದಲ್ಲಿರುವ ಕಾಡು ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ರೂಪಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಜಕ್ಕಲ ಮಡುಗು ಜಲಾಶಯದ ಕಟ್ಟೆಯನ್ನು ಎತ್ತರಗೊಳಿಸಿರುವುದರಿಂದ ಮಂಚೇನಹಳ್ಳಿ ಹೋಬಳಿಯ ಜೀವನದಿಯಾಗಿದ್ದ ಉತ್ತರ ಪಿನಾಕಿನಿ ನದಿಯು ಸಂಪೂರ್ಣವಾಗಿ ಬತ್ತಿಹೋಗಿದೆ. ಶ್ರೀನಿವಾಸ ಸಾಗರ ಕೆರೆಯಿಂದ ಗೌರಿಬಿದನೂರಿನವರೆಗೆ ನದಿಯ ಅಕ್ಕಪಕ್ಕದ ರೈತರ ಬಾವಿಗಳಲ್ಲಿ ನೀರು ತುಂಬಿ ತುಳುಕುತ್ತಿತ್ತು. ಈಗ 500ರಿಂದ 1000 ಅಡಿಗಳ ವರೆಗೂ ಕೊರೆದರೂ ಬೋರ್ವೆಲ್ನಲ್ಲಿ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ಕೆರೆಯ ಅಣೆಕಟ್ಟೆ ಹೆಚ್ಚಿಸಿರುವುದು ಎಂದರು.
ಮುಖಂಡ ಜೆ.ವಿ. ಹನುಮೇಗೌಡ ಮಾತನಾಡಿ, ಈ ಯೋಜನೆ ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೆ ಇದನ್ನು ಪೂರೈಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.
ಮುಖಂಡ ಪಿಡಿಚಲಹಳ್ಳಿ ಪ್ರಕಾಶ್, ಪುರಜಗನ್ನಾಥ್, ರಾಯಮಾಕಲಹಳ್ಳಿ ವೆಂಕಟೇಶ್, ತಾಪಂ ಸದಸ್ಯ ನಾರಾಯಣಸ್ವಾಮಿ, ರಾಜಶೇಖರ್, ಗ್ರಾ.ಪಂ. ಅಧ್ಯಕ್ಷ ಶ್ರೀರಂಗಪ್ಪ, ರಿಯಾಜ್, ನಾರಾಯಣರೆಡ್ಡಿ, ವಕೀಲಸುದರ್ಶನ್ ರೆಡ್ಡಿ, ಸಮಾಜ ಸೇವಕರಾದ ಆನಂದ ತೀರ್ಥ, ಮುರಳೀಧರ್, ನಿವೃತ್ತ ಶಿಕ್ಷಕರಾದ ವೆಂಕಟೇಶ್, ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

