ಹೆದ್ದಾರಿ ಟೋಲ್ ಸಂಗ್ರಹಕ್ಕೆ ಖಂಡನೆ
ಕ.ಪ್ರ.ವಾರ್ತೆ ಕೋಲಾರ ಜ.4
ಜನರ ತೆರಿಗೆ ಹಣದಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿಯವರು ಟೋಲ್ ಶುಲ್ಕ ಸಂಗ್ರಹಣೆ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದಕ್ಕೆ ಹೈಕೋರ್ಟ್ ವಕೀಲ ಹಾಗೂ ಹೆದ್ದಾರಿ ಶುಲ್ಕ ವಸೂಲಿ ವಿರೋಧಿ ಒಕ್ಕೂಟದ ಮುಖಂಡ ಎಂ. ಶಿವಪ್ರಕಾಶ್ ಖಂಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಹಾಗೂ ದೇವನಹಳ್ಳಿಯಲ್ಲಿ ಈಗಾಗಲೇ ದಿನಕ್ಕೆ ಲಕ್ಷಾಂತರ ರುಪಾಯಿ ಟೋಲ್ ಶುಲ್ಕ ಸಂಗ್ರಹಣೆ ಮಾಡುವ ಮೂಲಕ ಜನರನ್ನು ಶೋಷಿಸಲಾಗುತ್ತಿದೆ ಎಂದರು.
ಕೋಲಾರ- ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲೂ ಖಾಸಗಿ ಕಂಪನಿಯಿಂದ ಟೋಲ್ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯ ಸಂಬಂಧ ಗುತ್ತಿಗೆದಾರರಿಗೆ ಸರ್ಕಾರ ವಿಧಿಸಿರುವ ಶರತ್ತುಗಳಲ್ಲಿ ಶೇ.15 ರಷ್ಟು ಮಾತ್ರ ಪಾಲಿಸಲಾಗಿದೆ. ಹೀಗಿದ್ದರೂ ಶುಲ್ಕ ವಸೂಲಿ ಮಾಡುವುದು ಯಾವ ನ್ಯಾಯ ಎಂದು ಎಂ. ಶಿವಪ್ರಕಾಶ್ ಪ್ರಶ್ನಿಸಿದರು.
ಹಗಲು ದರೋಡೆ: ಹೆದ್ದಾರಿ ನಿರ್ಮಾಣಕ್ಕೆ ಜನತೆಯ ತೆರಿಗೆ ಹಣ ಖರ್ಚು ಮಾಡಲಾಗಿದೆ, ಹಾಗಾಗಿ ಖಾಸಗಿಯವರಿಗೆ ಟೋಲ್ ಶುಲ್ಕ ಸಂಗ್ರಹಣೆಗೆ ಅನುಮತಿ ನೀಡುವ ಅವಶ್ಯಕತೆ ಇಲ್ಲ. ಟೋಲ್ ಶುಲ್ಕ ವಸೂಲಾತಿಯಿಂದ ಸರ್ಕಾರಕ್ಕೆ ಬಂದಿರುವ ಆದಾಯ ಮತ್ತು ಈ ಹಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಹಾಗೂ ಮೂಲ ಸೌಕರ್ಯಗಳಿಗೆ ಬಳಕೆಯಾಗಿರುವ ಹಣ ಎಷ್ಟು ಎಂಬುದನ್ನು ಸಹ ಜನರಿಗೆ ತಿಳಿಸದೆ ಹಗಲು ದರೋಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ಕ್ಕಿಂತ ಹೆಚ್ಚಾಗಿ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ವಿಧಿಸಿ ಪ್ರತಿನಿತ್ಯ ಕೋಟಿಗಟ್ಟಲೆ ಹಣ ಸಂಗ್ರಹಣೆ ಮಾಡುತ್ತಿದೆ, ಜೊತೆಗೆ ವಾಹನಗಳ ತೆರಿಗೆ ಅಂದರೆ ಜೀವಾವಧಿ ತೆರಿಗೆ, ವಿಮೆ, ನೇರ ತೆರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವಾಗ ಖಾಸಗಿಯವರ ಮೂಲಕ ಟೋಲ್ ವಸೂಲಿ ಅಗತ್ಯವಿದೆಯೇ ಎಂದರು.
ಹೆದ್ದಾರಿಯಲ್ಲಿ ಓಡಾಡುವ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವರಿಗೆ, ರಾಜ್ಯ ಸಚಿವರಿಗೆ ಹಾಗೂ ಗಣ್ಯರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ, ಸಾಮಾನ್ಯವಾಗಿ ಅತಿ ಗಣ್ಯರು ಹೆದ್ದಾರಿಯಲ್ಲಿ ಓಡಾಡುವುದು ಅತ್ಯಂತ ಕಡಿಮೆ. ಇಂತಹ ಸಾಮಾನ್ಯರಿಗೇಕೆ ಟೋಲ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹಣೆಗೆ ಸ್ಥಳೀಯ ಸಂಸದರು ಆಗಿರುವ ಕೇಂದ್ರ ಸಚಿವರು ಹಸಿರು ನಿಶಾನೆ ತೋರಿರುವುದು ದುರ್ದೈವ. ಇದರಿಂದ ಬಡವರಿಗೆ ಅನನುಕೂಲವಾಗುತ್ತಿದೆ. ಟೋಲ್ಗಳಲ್ಲಿ ಖಾಸಗಿಯವರು ಶುಲ್ಕ ನೀಡಲು ವಿರೋಧಿಸುವವರ ಮೇಲೆ ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ, ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಕ್ರಿಮಿನಲ್ ಪ್ರಕರಣಗಳನ್ನು ಹಾಕುತ್ತಿದ್ದಾರೆಂದು ಹೇಳಿದರು.
ಟೋಲ್ ಶುಲ್ಕ ವಿರುದ್ಧ ಸಾರ್ವಜನಿಕರು ಜಾಗೃತರಾಗಿ ಪ್ರತಿಭಟಿಸಬೇಕು, ಸರ್ಕಾರ ವಿವಿಧ ವಾಹನಗಳಿಗೆ ಟೋಲ್ ಶುಲ್ಕ ವಸೂಲಾತಿ ಸಂಬಂಧ ನಿಗದಿಪಡಿಸಿರುವ ದರವನ್ನು ಪ್ರತಿಯೊಂದು ಟೋಲ್ಗಳ ಬಳಿ ಪ್ರಕಟಿಸಬೇಕು. ಕೋಲಾರ ಜಿಲ್ಲೆಯಲ್ಲಿ ಕ್ರಮಬದ್ಧವಾಗಿ ಸರ್ಕಾರದ ನಿಯಮಗಳ ಪ್ರಕಾರ ಹೆದ್ದಾರಿ ನಿರ್ಮಾಣ ಮಾಡುವ ತನಕ ಟೋಲ್ ಶುಲ್ಕ ವಸೂಲಿ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಶುಲ್ಕ ವಸೂಲಾತಿ ವಿರೋಧಿ ಒಕ್ಕೂಟದ ಮುಖಂಡರಾದ ಹುಲ್ನಾಚೇಗೌಡ, ಹೆಬ್ಬಾಳ ವೆಂಕಟೇಶ್, ಪ್ರಭಾಕರ್, ಶಂಕರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

