ಕನ್ನಡ ಸಂಸ್ಕೃತಿ ಅಭ್ಯುದಯಕ್ಕೆ 200 ಕೋಟಿ ಖರ್ಚು
ಕ.ಪ್ರ. ವಾರ್ತೆ ಕೋಲಾರ ಜ.5
ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿಯ ಉಳಿವಿಗಾಗಿ 200 ಕೋಟಿಗಳನ್ನು ಖರ್ಚು ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಬಿ.ಟಿ. ಮುನಿರಾಜು ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಭಾನುವಾರ ಜಯನಾಟ್ಯ ಕಲಾ ಅಕಾಡೆಮಿಯ 28ನೇ ರಂಗಪ್ರವೇಶವಾಗಿ ಸಿ. ಭುವನ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಲಹೆ ನೀಡಿ: ನಮ್ಮ ದೇಶದ ಬೇರೆ ಯಾವುದೇ ರಾಜ್ಯಕ್ಕಿಂತ ಅತ್ಯಂತ ಹೆಚ್ಚು ಹಣವನ್ನು ಕನ್ನಡ ಮತ್ತು ಸಂಸ್ಕೃತಿಗೆ ವಿನಿಯೋಗ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಕಲೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಸಾರ್ವಜನಿಕರೂ ಇಲಾಖೆಗೆ ಅಗತ್ಯ ಸಲಹೆ ನೀಡಿದರೆ ಅದನ್ನು ಕಾರ್ಯಗತಗೊಳಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ರಂಗಪ್ರವೇಶಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಭರತನಾಟ್ಯದ ಉಳಿವಿಗೆ ಶ್ರಮಿಸುತ್ತಿರುವ ಜಯನಾಟ್ಯ ಕಲಾ ಅಕಾಡೆಮಿಯು ಈ ವರೆಗೆ 28 ರಂಗಪ್ರವೇಶ ಕಾರ್ಯಕ್ರಮಗಳನ್ನು ನಡೆಸಿರುವುದು ಅಭಿನಂದನಾರ್ಹ ಎಂದರು.
ಕಲೆ- ಸಂಗೀತ ಉಳಿಸಿ: ಭಾರತೀಯ ಸಂಸ್ಕೃತಿಯಿಂದ ವಿಮುಖವಾಗುತ್ತಿರುವ ಪೋಷಕರು ಪಾಶ್ಚಾತ್ಯ ಸಂಸ್ಕೃತಿಯ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳ್ಳಲು ಅವಕಾಶ ನೀಡದೇ ದೇಶೀಯ ಕಲೆ- ಸಂಗೀತ ಉಳಿಸಲು ಗಮನ ನೀಡಬೇಕೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ನುಡಿದರು.
ಭಾರತೀಯ ಕಲೆ-ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸುವ ಮೂಲಕ ಇಲಾಖೆಯ ನಿಜವಾದ ಆಶಯಗಳನ್ನು ಸಕಾರಗೊಳಿಸಬೇಕು ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ಡಾ. ಬಿ.ಎನ್. ಪ್ರಭುಲಿಂಗದೇವರು, ಡಾ. ರತ್ನಮ್ಮ, ಕೇಂದ್ರ ನಾರು ಮಂಡಳಿ ನಿರ್ದೇಶಕ ಹೊಳಲಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ, ಮಾಲೂರು ತಬಲ ನಾರಾಯಣಪ್ಪ, ಬೇತಮಂಗಲದ ರಮೇಶ್, ನಂಜಾಮರಿ, ಆರ್. ಜ್ಞಾನಮೂರ್ತಿ ಇದ್ದರು.
ಬೆಂಗಳೂರು ಕಲಾ ದೇಗುಲ ಶ್ರೀನಿವಾಸ್ರಿಂದ ನಿರೂಪಣೆ, ಅಕಾಡೆಮಿ ಅಧ್ಯಕ್ಷ ಕೆ.ವಿ. ಶಂಕರಪ್ಪರಿಂದ ಸ್ವಾಗತ, ಉಪಾಧ್ಯಕ್ಷ ಬಿಸಪ್ಪಗೌಡರಿಂದ ವಂದನೆಗಳಾದವು.
ಸಿ. ಭುವನ ಜಯನಾಟ್ಯ ಕಲಾ ಅಕಾಡೆಮಿಯ ವಿದ್ವಾನ್ ಕೋಲಾರ ರಮೇಶ್ ಅವರ ಬಳಿ 5 ವರ್ಷದಿಂದ ಭರತನಾಟ್ಯ ಕಲಿಯುತ್ತಿದ್ದಾರೆ.
ಪ್ರೌಢ ಕಲಾ ಪ್ರದರ್ಶನಕ್ಕೆ ಸಾಕ್ಷಿ ಎಂಬಂತೆ ನಡೆದ ರಂಗಪ್ರವೇಶದಲ್ಲಿ ನಟವಾಂಗವನ್ನು ತಮ್ಮ ಪುಟಾಣಿ ಮಗಳು ಪುಷ್ಪಾಂಜಲಿ ಜತೆಗೆ ಕೋಲಾರ ರಮೇಶ್, ಹಾಡುಗಾರಿಕೆಯನ್ನು ವಸುಧ ಬಾಲಕೃಷ್ಣ, ಮೃದಂಗ- ಜನಾರ್ದನ್, ಪಿಟೀಲು- ಮಧುಸೂಧನ್, ಕೊಳಲು- ಕಾರ್ತಿಕ್ ಸಾಥ್ ನೀಡಿದರು.
ಬೇತಮಂಗಲ ಹೋಬಳಿಯ ಕಳ್ಳಿಕುಪ್ಪದ ವಿದ್ವಾನ್ ರಮೇಶ್ 1998ರಿಂದ ಇದುವರೆಗೆ 20ಕ್ಕೂ ಹೆಚ್ಚು ದೇಶಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದು, ನೂರಾರು ಮಕ್ಕಳನ್ನು ಭರತನಾಟ್ಯಕ್ಕೆ ಸಜ್ಜುಗೊಳಿಸುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

