ಕೋಲಾರ

ಸುದ್ದಿ ಸಂಕ್ಷೇಪ

Published On :

'ಬ್ರಾಹ್ಮಣ ಸಮಾಜ ಮಾರ್ಗದರ್ಶನ ಅಗತ್ಯ'
ಕೆಜಿಎಫ್: ಬ್ರಾಹ್ಮಣ ಸಮಾಜದ ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಶಾಸಕ ಕೆ.ಎಂ. ನಾರಾಯಣಸ್ವಾಮಿ ಹೇಳಿದರು.  ಬೆಮೆಲ್ ನಗರದ ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಗಣಹೋಮ, ನವಗ್ರಹ ಹೋಮ, ಸುದರ್ಶನ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಯ ಸಂಖ್ಯೆಯಲ್ಲಿ ಬ್ರಾಹ್ಮಣರು ಕಡಿಮೆ ಇದ್ದರೂ ಸಮಾಜಕ್ಕೆ ಮಾರ್ಗದರ್ಶನವನ್ನು ಅವರು ನೀಡುತ್ತಿದ್ದಾರೆ ಎಂದ ಅವರು, ಸಂಸ್ಕಾರ ಮತ್ತು ವಿದ್ಯೆಯನ್ನು ನೀಡುವವರನ್ನು ಸಮಾಜ ಕೂಡ ಗೌರವಿಸಬೇಕು ಎಂದರು. ಅದೇ ರೀತಿ ಬೆಮೆಲ್ ನಗರದ ಎಂ.ವಿ. ನಗರದಲ್ಲಿ ನಿರ್ಮಿಸಲಾಗುವ ಗಾಯತ್ರಿ ಮಂದಿರದ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ಬೆಮೆಲ್ ನಗರದಲ್ಲಿ ನಿರ್ಮಾಣವಾಗುವ ಗಾಯತ್ರಿ ದೇವಾಲಯಕ್ಕೆ ಅಗತ್ಯ ರಸ್ತೆ ಕಲ್ಪಿಸಲು ಪಯತ್ನ ಮಾಡಲಾಗುವುದು ಎಂದು ಜಿಪಂ ಸದಸ್ಯೆ ನಾರಾಯಣಮ್ಮ ತಿಳಿಸಿದರು. ಬೆಮೆಲ್‌ನ ಮುಖ್ಯ ವ್ಯವಸ್ಥಾಪಕ ಕೆ.ವಿ. ಕೃಷ್ಣಮೂರ್ತಿ, ಬೆಮೆಲ್ ಕಾರ್ಮಿಕ ಸಂಘದ ಪದಾಧಿಕಾರಿ ಪ್ರಕಾಶ್, ಸಹಕಾರ ಸಂಘದ ನಿರ್ದೇಶಕ ಪಿ. ಶ್ರೀಧರ್, ಶಿವಸುಬ್ರಮಣ್ಯಂ, ಶಿವಪ್ರಸಾದ್‌ನಾಯ್ಡು ಮತ್ತಿತರರು ಹಾಜರಿದ್ದರು.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ
ಚಿಂತಾಮಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಟ್ಟಣದ ರಾಯಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಜಿ.ಬಿ. ಸಾಯಿಚಿತ್ರ ಯೋಗಾಸನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್. ಪ್ರೇಮಲತಾ ತಿಳಿಸಿದ್ದಾರೆ.
ಈ ವಿದ್ಯಾರ್ಥಿನಿಯು ಬಿಜಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾಳೆ. ಪ್ರತಿಭಾನ್ವಿತ ಯೋಗಪಟು ಸಾಯಿಚಿತ್ರಾಳನ್ನು ಹಾಗೂ ತರಬೇತುದಾರ ಗೋವಿಂದ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಕೃಷ್ಣ ಅವರು ಅಭಿನಂದನೆ ಸಲ್ಸಿಸಿದ್ದಾರೆ.

19 ರಂದು ಮೊದಲನೇ ಸುತ್ತಿನ ಪಲ್ಸ್ ಪೊಲಿಯೋ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜ.19 ರಂದು ಮೊದಲನೇ ಸುತ್ತಿನ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಂಗಸ್ವಾಮಿ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ವರ್ಷದೊಳಗಿನ 147930 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 631 ಲಸಿಕಾ ಕೇಂದ್ರಗಳು, 2602 ವ್ಯಾಕ್ಸಿನೇಟರ್‌ಗಳು,131 ಮೇಲ್ವಿಚಾರಕರನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಟ್ಟು 2665447 ಮನೆಗಳಿಗೆ ತೆರಳಿ ಈ ಲಸಿಕೆಯನ್ನು ಹಾಕಲಾಗುತ್ತಿದೆ ಎಂದವರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಒಟ್ಟು 131 ವಾಹನಗಳ ಅವಶ್ಯಕತೆ ಇದೆ ಎಂದರು.
ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಮಾತನಾಡಿ, ಎಲ್ಲಾ ಇಲಾಖೆಗಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು.ಅಂದು ವಿದ್ಯುತ್ ಸರಬರಾಜು, ವಾಹನ ವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು ಎಂದರು.

ಸಾರ್ವಜನಿಕ ಸ್ಥಳದಲ್ಲಿ  ಧೂಮಪಾನ: ದಂಡ
ಮಾಲೂರು: ಜಿಲ್ಲಾ ಆರೋಗ್ಯಧಿಕಾರಿಗಳ ತಂಡ ಸೋಮವಾರ ಪಟ್ಟಣನಾದ್ಯಂತ ಸಂಚಾರ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದ ಘಟನೆ ನಡೆಯಿತು. ಪಟ್ಟಣದ ಬಸ್ ನಿಲ್ಧಾಣ, ಪುರಸಭೆ ವಾಣಿಜ್ಯ ಸಂಕೀರ್ಣ, ಪುರಸಭೆ ಸೇರಿದಂತೆ ಪ್ರಮುಖ ಸ್ಥಳದಲ್ಲಿ ದಾಳಿ ನಡೆಸಿದ ಆರೋಗ್ಯ ಇಲಾಖೆ ತಂಡ ಸಾರ್ವನಿಕರಿಂದ ಒಂದು ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಜಿಲ್ಲಾ ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿ ಜಯಣ್ಣ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಲಕ್ಕೂರು ಘಟಕದ ಗೀತಾ, ಆರೋಗ್ಯ ನಿರೀಕ್ಷಕ ಪ್ರೀತೇಶ್, ಮಾಲಾ ದಾಳಿಯ ನೇತೃತ್ವ ವಹಿಸಿದ್ದರು.

ಕಾರಾಗೃಹದಲ್ಲಿ ವಿಶೇಷ ಪ್ರಾರ್ಥನೆ
ಕೆಜಿಎಫ್: ಹೊಸ ವರ್ಷದ ಪ್ರಯುಕ್ತ ಪಟ್ಟಣದ ಕಾರಾಗೃಹದಲ್ಲಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಕೆಜಿಎಫ್‌ನ ಸಂತ ತೆರೇಸಾ ಚರ್ಚ್‌ನ ಫಾದರ್ ಜಾನ್ ಅಂಥೋಣಿ, ದೇವರ ಸ್ಮರಣೆಯಿಂದ ನೆಮ್ಮದಿ, ಶಾಂತಿಯ ಜೀವನ ಸಾಗಿಸಲು ಪ್ರತಿಯೊಬ್ಬರೂ ಶುದ್ಧ ಮನಸ್ಸಿನಿಂದ ಹಿಂದಿನ ಕಹಿ ಘಟನೆಗಳನ್ನು ಮರೆಯಬೇಕು. ಎಲ್ಲರಂತೆ ಜೀವನ ನಡೆಸಲು ದೇವರನ್ನು ಸ್ಮರಿಸಿ ಇತರರಿಗೆ ಒಳ್ಳೆಯದನ್ನು ಬಯಸುವ ಸ್ವಭಾವದಿಂದ ಜೀವನ ಸಾಗಿಸಿದರೆ ಸಂಕಷ್ಟಗಳನ್ನು ಮರೆಯಲು ಸಾಧ್ಯವಾಗುತ್ತದೆ ಎಂದರು.  ಕ್ರೈಸ್ತ ಸಮುದಾಯದ ಮುಖಂಡ ಹಾಗೂ ಸಮಾಜ ಸೇವಕರಾದ ಬರ್ನಾಡ್, ನಗರಸಭಾ ಸದಸ್ಯ ಎನ್. ಅಶೋಕ್, ಕೆಜಿಎಫ್‌ನ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಗಣರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾಡಳಿತದ ವತಿಯಿಂದ ಜ.26 ರಂದು ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿವಿಧ ಇಲಾಖೆಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ನಂತರ ಜಿಲ್ಲಾಧಿಕಾರಿ ವಿಶಾಲ್ ಮಾತನಾಡಿ, ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮ ಕುರಿತಂತೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ತೋಟಗಾರಿಕೆ  ಇಲಾಖೆ ವತಿಯಿಂದ ಜ.26 ರಿಂದ ಜ.28 ವರೆಗೆ ಮೂರು ದಿನಗಳ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುವುದೆಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು ಸಭೆಗೆ ತಿಳಿಸಿದರು.  ಫಲಪುಷ್ಪ ಪ್ರದರ್ಶನದ ರೂಪುರೇಷೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಬೇಕಾಗಿರುವ ಪಥಸಂಚಲನ ಹಾಗೂ ಶಾಲಾ ಮಕ್ಕಳಿಂದ ಏರ್ಪಡಿಸಬೇಕಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.