ತಾಪಂ ಅಧ್ಯಕ್ಷೆ- ಶಾಸಕರ ವಾಕ್ಸಮರ
ಕ.ಪ್ರ.ವಾರ್ತೆ ಬಾಗೇಪಲ್ಲಿ ಜ. 6
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ತಾ.ಪಂ.ಅಧ್ಯಕ್ಷೆ ಮುನಿರತ್ನಮ್ಮ ನಡುವೆ ಮಾತಿನ ಚಕಮಕಿ ನಡೆಯಿತು.
ತಾ.ಪಂ. ಅಧ್ಯಕ್ಷರು ಪದೇ ಪದೇ ಇಲಾಖೆಗೆ ಸಂಬಂಧಿಸಿರುವಂತಹ ಮಾಹಿತಿಯನ್ನು ಪಡೆಯಲು ಆ ಇಲಾಖೆಯ ಅಧಿಕಾರಿಯನ್ನು ಪ್ರಶ್ನೆಯನ್ನು ಕೇಳುತ್ತಿದ್ದರಿಂದ ಕುಪಿತಗೊಂಡ ಶಾಸಕರು, ನನ್ನ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ತಾಲೂಕಿನ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿರುವಂತಹ ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ. ತಾ.ಪಂ. ವತಿಯಿಂದ ನೀವು ನಿಮ್ಮ ಅಧ್ಯಕ್ಷತೆಯಲ್ಲಿ ಯಾವಾಗ ಬೇಕಾದರೂ ಸಭೆಕರೆಯಬಹುದು. ಆದರೆ, ನೀವು ತಾ.ಪಂ ಸಾಮಾನ್ಯ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ನಿಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದು ನಿಮಗೆ ಬೇಕಾದಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳಿ, ನನಗೆ ಯಾವುದೇ ರೀತಿಯ ಅಭ್ಯಂತರವಿಲ್ಲ, ಈ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲು ನನಗೆ ಅವಕಾಶವನ್ನು ನೀಡಿ ಎಂದರು.ಇದಕ್ಕೆ ಮುನಿರತ್ನಮ್ಮ, ನಾವು ಈ ಸಭೆಯಲ್ಲಿ ಮಾತನಾಡಬಾರದು, ಪ್ರಶ್ನೆಯನ್ನು ಕೇಳಬಾರದು ಎನ್ನುವುದಾರೆ ನಮ್ಮನ್ನು ಈ ಸಭೆಗೆ ಏಕೆ ಕರೆದಿರೀ ಎಂದು ಪ್ರಶ್ನಿಸಿದರು. ಆಗ ನಾನು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿಗಳಿಂದ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಈ ಸಭೆಗೆ ಕೇವಲ ಅಧಿಕಾರಿಗಳನ್ನು ಮಾತ್ರ ಕರೆಯುವಂತೆ ತಿಳಿಸಿದ್ದೆ ಎಂದು ಶಾಸಕರು ಕುಟುಕಿದರು.
ಇದಕ್ಕೂ ಮುನ್ನ ಸಭೆ ಪ್ರಾರಂಭವಾಗುತ್ತಿದ್ದಂತೆ ಗೈರು ಹಾಜರಾಗಿರುವ ಪೊಲೀಸ್, ಆರ್.ಟಿ.ಓ, ಕೆ.ಎಸ್.ಆರ್.ಟಿ ಬಸ್ ಡಿಪೋ ವ್ಯವಸ್ಥಾಪಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕರು ಗರಂ ಆದರು.ಅನೇಕ ಕೆಲಸಗಳ ಒತ್ತಡದಲ್ಲಿಯೂ ಸಹ ನಾನು ಸಮಯಕ್ಕೆ ಬಂದಿದ್ದೇನೆ, ಆದರೆ ಬಹುತೇಕ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಇನ್ನು ಕೆಲವು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದರೂ ಸಹ ಸಭೆಗೆ ಹಾಜರಾಗದೇ ಇಲಾಖೆಯ ಸಹಾಯಕರನ್ನು ಕಳುಹಿಸುತ್ತಿದ್ದಾರೆ.ಇದು ಸರಿಯಲ್ಲ, ಕೂಡಲೇ ಸಂಬಂಧಪಟ್ಟವರಿಗೆ ನೋಟಿಸ್ ಕೊಡಿ ಎಂದು ಇಒಗೆ ಸೂಚಿಸಿದರು.
ಸರ್ಕಾರಿ ಶಾಲೆಗಳಿಗೆ ಊಟ, ಬಟ್ಟೆ, ಪುಸ್ತಕ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಬರುವಂತಹ ಫಲಿತಾಂಶ ಸರ್ಕಾರಿ ಶಾಲೆಗಳಲ್ಲಿ ಬರುತ್ತಿಲ್ಲ ಏಕೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಬಾಗೇಪಲ್ಲಿ ತಾಲೂಕು ಇಡೀ ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಅದೇ ರೀತಿ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಿಕ್ಷಣದಲ್ಲೂ ಹಿಂದುಳಿದ ಕ್ಷೇತ್ರವಾಗಬಾರದೆಂದರು.
ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಅನಿರಕ್ಷೀತ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ ಅವರು,ಆಗ ಶಾಲೆಯಲ್ಲಿ ಮಕ್ಕಳಿಗೆ ನೀಡುವಂತಹ ಆಹಾರ(ಬಿಸಿಯೂಟ)ದಲ್ಲಿ ವ್ಯತ್ಯಾಸ ಕಂಡುಬಂದರೆ ಅದಕ್ಕೆ ನಿಮ್ಮನೇ ನೇರ ಹೊಣೆಗಾರರನ್ನಾಗಿಸುವುದಾಗಿ ಬಿಸಿಯೂಟ ಯೋಜನಾಧಿಕಾರಿ ಲಕ್ಷ್ಮಣಪ್ಪ ರವರಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಎಂ.ಎ.ಪದ್ಮ, ತಾ.ಪಂ. ಇಓ ಶ್ರೀನಿವಾಸ್, ಜಿ.ಪಂ ತಾಂತ್ರಿಕ ವಿಭಾಗದ ಇ ಇ ಪಿ.ವಿ.ನಾಗಪ್ಪ, ತಾ.ಪಂ ಅಧ್ಯಕ್ಷೆ ಮುನಿರತ್ನಮ್ಮ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

