ಐವರು ಅಂತಾರಾಜ್ಯ ದರೋಡೆಕೋರರ ಸೆರೆ
ಕೆಜಿಎಫ್: ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ವಿವಿಧ ದರೋಡೆ, ಸುಲಿಗೆ, ಅತ್ಯಾಚಾರ, ಕೊಲೆ, ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿ ಅವರಿಂದ 120 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಕೆಜಿಎಫ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ತಮಿಳುನಾಡು ರಾಜ್ಯದ ಸೇಲಂ, ಧರ್ಮಪುರಿ ಮತ್ತು ನಾಮಕ್ಕಲ್ ಜಿಲ್ಲೆಗಳಿಗೆ ಸೇರಿದ ಐವರು ಆರೋಪಿಗಳಾದ ವೇಲ್ಮುರುಗನ್(49), ಗೋಪಾಲ್(25), ಈಶ್ವರನ್(22), ಕೇಶವನ್(26) ಹಾಗೂ ಮಣಿ(24) ಇವರು ಇತರೆ 5 ಮಂದಿ ಸಹಚರರೊಡನೆ ಜೊತೆಗೂಡಿ ಈಗ್ಗೆ ಸುಮಾರು 5 ತಿಂಗಳ ಹಿಂದೆ ಕೋಲಾರ ಗ್ರಾಮಾಂತರ ನೆರ್ನಹಳ್ಳಿ ಗ್ರಾಮದ ಒಂಟಿ ಮನೆಯಲ್ಲಿ ಡಕಾಯಿತಿ, ಆಂಧ್ರಪ್ರದೇಶದ ವಿ.ಕೋಟಾ, ಪಲಮನೇರ್ ಅರಣ್ಯ ಪ್ರದೇಶಗಳಲ್ಲಿ, ಬಾಯಿಕೊಂಡ ಅರಣ್ಯದಲ್ಲಿ ಒಂಟಿ ಮಹಿಳೆಯರ ಅತ್ಯಾಚಾರ, ಸುಲಿಗೆ, ಸತೀಶ್ ಎಂಬಾತನನ್ನು ಕೊಲೆ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ನವೆಂಬರ್ 29ರಂದು ರಾತ್ರಿ 2 ಗಂಟೆಯಲ್ಲಿ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದ ನಿವಾಸಿ ಗಂಟ್ಲರೆಡ್ಡಿ ಎಂಬುವರ ಮನೆಯಲ್ಲಿ ಸುಮಾರು 6-7 ಮಂದಿ ದರೋಡೆಕೋರರ ಗುಂಪೊಂದು ಮನೆಯಲ್ಲಿ ಮಲಗಿದ್ದವರನ್ನು ಬೆದರಿಸಿ 23 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೆಜಿಎಫ್ ಎಸ್ಪಿ ಡಾ. ರೋಹಿಣಿಕಟೋಚ್ ಸೆಫಟ್ ಅವರು ಆರೋಪಿಗಳ ಪತ್ತೆಗಾಗಿ ಬಂಗಾರಪೇಟೆ ಸಿಪಿಐ ವಂಕಟಾಚಲಪತಿ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ರಚಿಸಿದ್ದರು. ಈ ಪ್ರಕರಣದ ಆರೋಪಿಗಳ ಪತ್ತೆಯ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಐವರು ಅಂತರರಾಜ್ಯ ದರೋಡೆಕೋರರು ಪೊಲೀಸರ ಬಲೆಗೆ ಬಿದ್ದಿರುವುದಾಗಿ ತಿಳಿಸಿದ ಡಾ. ರೋಹಿಣಿಕಟೋಚ್ಸೆಫಟ್ ಅವರು ಇದೇ ವೇಳೆ ಬೇತಮಂಗಲ ಗ್ರಾಮದಲ್ಲಿ ನಡೆದ ದರೋಡೆಕೋರರನ್ನು ಅತಿ ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದರು.
ಐವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಲು ಯಶಸ್ವಿಯಾದ ಬಂಗಾರಪೇಟೆ ಸಿಪಿಐ ವಂಕಟಾಚಲಪತಿ ನೇತೃತ್ವದ ಪೊಲೀಸ್ ತಂಡದ ಅಧಿಕಾರಿಗಳಾದ ಮಾರಿಕುಪ್ಪಂ ಪಿಎಸ್ಐ ಸೂರ್ಯಪ್ರಕಾಶ್, ಆಂಡ್ರಸನ್ಪೇಟೆ ಪಿಎಸ್ಐ ಎಲ್.ಆಂಜಪ್ಪ, ಉರಿಗಾಂ ಅಪರಾಧ ಪಿಎಸ್ಐ ನಾರಾಯಣಸ್ವಾಮಿ, ಸಿಬ್ಬಂಧಿಗಳಾದ ಗೋಪಾಲ್ಸಿಂಗ್, ಮಹೇಂದ್ರ, ಚಂದ್ರಶೇಖರ್, ಮಂಜುನಾಥ್, ಸೋಮಶೇಖರ್ರೆಡ್ಡಿ ಹಾಗೂ ಬಾಲಕೃಷ್ಣ ತಂಡಕ್ಕೆ 10 ಸಾವಿರ ನಗದು ಬಹುಮಾನವನ್ನು ನೀಡುವುದಾಗಿ ಡಾ.ರೋಹಿಣಿಕಟೋಚ್ಸೆಫಟ್ ಅವರು ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

