ಕೋಲಾರ

ಚುನಾವಣೆಗಾಗಿ ಎತ್ತಿನಹೊಳೆ ಜಪ

Published On :

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಎತ್ತಿನಹೊಳೆ ಯೋಜನೆ ಜಾರಿಯ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುತ್ತ ಈ ಬಾರಿಯು ಜನರ ದಿಕ್ಕು ತಪ್ಪಿಸುವ ಹುನ್ನಾರದಲ್ಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಯಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವ ಭರವಸೆಯನ್ನು ನೀಡಿ ಗೆಲುವನ್ನು ಸಾಧಿಸಿದಾಗಿನಿಂದಲೂ ವೀರಪ್ಪ ಮೊಯ್ಲಿ ಸುಮ್ಮನಿದ್ದರು.ಇದೀಗ ದಿಢೀರನೇ ಎಚ್ಚೆತ್ತುಕೊಂಡಿದ್ದಾರೆ. ಪದೇ ಪದೇ ದಿನಾಂಕವನ್ನು ಹೇಳಿಕೊಂಡು ಹಾಗೆಯೇ ಮುಂದೂಡುತ್ತ ಬಂದಿದ್ದ ಅವರು ಜ.31 ರಂದು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರುತ್ತದೆ ಎಂಬ ಮಾತನ್ನು ಹೇಳಿದ್ದಾರೆ.ಇನ್ನೂ ಟೆಂಡರ್ ಕರೆದಿಲ್ಲ, ಟೆಂಡರ್‌ಪಡೆದುಕೊಂಡಿರುವ ಏಜೆನ್ಸಿಯನ್ನೇ ಗುರುತಿಸಿಲ್ಲ. ಅಲ್ಲದೇ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು,ಪರಿಸರ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯವಿರುವ ಪ್ರಮಾಣ ಪತ್ರವನ್ನು ಪಡೆದುಕೊಂಡಿಲ್ಲ. ಆದರೂ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಶಂಕುಸ್ಥಾಪನೆಯ ಪ್ರಚಾರದಲ್ಲಿ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸುಮಾರು 8 ಸಾವಿರ ಕೋಟಿ ರು. ವೆಚ್ಚದ ಎತ್ತಿನಹೊಳೆ ಯೋಜನೆಗೆ 350 ಹೆಕ್ಟೇರ್ ಅರಣ್ಯ ಭೂಮಿ ಬೇಕಾಗಿದೆ. ಅಲ್ಲಿ ಕಾಮಗಾರಿ ನಡೆಸಲು ಮೊದಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಇದರ ಅರಿವು ಕೇಂದ್ರ ಸಚಿವರಿಗಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯರ್ರಗೋಳ್ ಯೋಜನೆಗೆ ಮೊದಲು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳದೇ ಪೈಪ್ ಲೈನ್ ಅಳವಡಿಸಲಾಯಿತು. ಆದರೆ, ಡ್ಯಾಮ್ ಕಟ್ಟಲಾಗಲಿಲ್ಲ. ಈ ನಡುವೆ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ದೊಡ್ಡ ವಿವಾದ ಸೃಷ್ಟಿಯಾಯಿತು.ಕೊನೆಗೆ ಅರಣ್ಯ ಇಲಾಖೆಯಿಂದ ಭೂಮಿಯನ್ನು ಪಡೆದುಕೊಳ್ಳಲು 6 ವರ್ಷ ಬೇಕಾಯಿತು.ಹೀಗೆ,ಎತ್ತಿನಹೊಳೆ ಯೋಜನೆಯನ್ನು ಕೇವಲ ಶಂಕುಸ್ಥಾಪನೆಯಲ್ಲಿ ಮುಗಿಸಿ ಕೈ ತೊಳೆದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಟೀಕಿಸಿದರು.
ಮೊದಲಿನಿಂದಲೂ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಜನರ ದಿಕ್ಕುವ ತಪ್ಪಿಸುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಈ ಮೂಲಕ ಸುಳ್ಳು ಭರವಸೆಗಳನ್ನು ನೀಡುವ ತಮ್ಮ ಚಾಳಿಯನ್ನು ಮುಂದುವರೆಸಿ ಎದುರಾಳಿಗಳು ತಮ್ಮನ್ನು ಟೀಕಿಸುವುದು ಸರಿಯಾಗಿದೆ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಮೊಯ್ಲಿಗೆ ಈ ಭಾಗದ ಜನರ ಸಮಸ್ಯೆಯ ಬಗ್ಗೆ ಕಾಳಜಿಯೇ ಇಲ್ಲ. ಇದ್ದಿದ್ದರೆ ಕೇಂದ್ರ ಸರ್ಕಾರದಿಂದ ನೀರಾವರಿ ಯೋಜನೆಗೆ ಅನುದಾನವನ್ನು ತರುತ್ತಿದ್ದರು. ಆದರೆ, ಈ ಕೆಲಸವನ್ನು ಇದುವರೆಗೂ ಅವರು ಪ್ರಾಮಾಣಿಕವಾಗಿ ಮಾಡಿಲ್ಲ. ಬದಲಿಗೆ ಈಗಲೂ ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆಲಸ ಮಾಡಿಸಿ ಕೊಡಿ:  ಪ್ರಸ್ತುತ ಎಂ. ವೀರಪ್ಪ ಮೊಯ್ಲಿರವರು ಅರಣ್ಯ ಮತ್ತು ಪರಿಸರ ಖಾತೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದರಿಂದ ಕೂಡಲೇ ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಕಾರ್ಯ ರೂಪಕ್ಕೆ ತರಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರವನ್ನು ಕೊಡಿಸಿ ಅವರು ಅಡ್ಡಿ ಆತಂಕಗಳನ್ನು ದೂರ ಮಾಡಲಿ, ಅಲ್ಲದೇ ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಪಕ್ಷವೇ ಅಧಿಕಾರದಲ್ಲಿದೆ. ಸರ್ಕಾರಗಳ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನವನ್ನು ಕೊಡಿಸುವುದರ ಜೊತೆಗೆ ಕೆಲಸ ತ್ವರಿತವಾಗಿ ಮುಗಿಯುವಂತೆ ಮಾಡಲಿ ಎಂದು ಒತ್ತಾಯಿಸಿದರು. ಎತ್ತಿನಹೊಳೆ ಯೋಜನೆಗೆ ವಿರೋಧವನ್ನು ನಾವು ವ್ಯಕ್ತಪಡಿಸುತ್ತಿಲ್ಲ. ಆದರೆ, ಮೊಯ್ಲಿರವರು ನೀರಾವರಿ ವಿಷಯದಲ್ಲೂ ಜನರನ್ನು ವಂಚಿಸುವಂತಹ ಹೇಳಿಕೆಗಳನ್ನು ಕೊಡುತ್ತಿರುವುದನ್ನು ವಿರೋಧಿಸುತ್ತೇವೆ. ಕೇವಲ ಹೆಸರಿಗೆ ಮಾತ್ರ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಮುಂದಾದರೆ ನಾವು ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ಶ್ರೀಕಾಂತ್ ಭಟ್, ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.