ಕೋಲಾರ

ಜಿಪಂ ಸದಸ್ಯರ ಅಧಿಕಾರ ಮೊಟಕು ಬೇಡ

Published On :

ಕೋಲಾರ: ಜಿಲ್ಲೆಯ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ಕೋಲಾರಕ್ಕೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಅನೇಕರು ತಮ್ಮ ಸಮಸ್ಯೆಗಳನ್ನು ಈಡೇರಿಸಲು ಕೋರಿ ಮನವಿ ಸಲ್ಲಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಕುಡಿಯುವ ನೀರಿಗೆ ಹೆಚ್ಚಿನ ಅನುದಾನದ ಜೊತೆಗೆ 1973ರ ಪಂಚಾಯತ್‌ರಾಜ್ ಕಾಯಿದೆಗೆ ರಾಜೀವ್‌ಗಾಂಧಿ ತಿದ್ದುಪಡಿ ತಂದು ಆಡಳಿತ ವಿಕೇಂದ್ರಿಕರಣಕ್ಕೆ ಅವಕಾಶ ನೀಡಿದ್ದು ಯಾವುದೇ ಕಾರಣಕ್ಕೂ ಜಿಪಂ ಅಧಿಕಾರವನ್ನು ಮೊಟಕು ಮಾಡದಂತೆ ಮನವಿ ಮಾಡಿದರು. ಪರಿಶಿಷ್ಟರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸಾಲ ಮಂಜೂರಾತಿ, ಸಹಾಯಧನಕ್ಕಾಗಿ ಜಿಪಂಚುನಾಯಿತ ಪ್ರತಿನಿಧಿಗಳಿಗೆ ಶಿಫಾರಸ್ಸು ಮಾಡುವ ಅಧಿಕಾರ ನೀಡುವಂತೆಯೂ ಕೋರಿದರು.
ಪರಿಶಿಷ್ಟರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ವೈಯಕ್ತಿಕ ಕೊಳವೆ ಬಾವಿ ಸಾಲ ಪಡೆಯಲು ಅರ್ಹರ ಆಯ್ಕೆ ಸಮಿತಿಯಲ್ಲಿ ಜಿಪಂ ಸದಸ್ಯರನ್ನು ಸಹಾ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಆದೇಶಿಸಿಬೇಕು, ಜನಪ್ರತಿನಿಧಿಗಳಾದ ನಮಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವಾಟರ್‌ಮೆನ್ ಆಗಿದ್ದ ತಂದೆಗೆ ನಿವೃತ್ತಿ ವೇತನ ನೀಡಿ, ಕಾಲಿಲ್ಲದ ನನಗೆ ಯಂತ್ರ ಚಾಲಿತ ತ್ರಿಚಕ್ರವಾಹನ ನೀಡಿ ಎಂದು ಮುಳಬಾಗಿಲು ತಾಲೂಕಿನ ರಾಜೇಂದ್ರನ ಹಳ್ಳಿಯ ವಿಕಲಾಂಗದ ಶ್ರೀನಿವಾಸಗೌಡ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂಧಿಸಿದ ಸಚಿವರು, ನಾಳೆಯೇ ಈ ವ್ಯಕ್ತಿಗೆ ಬೈಸಿಕಲ್ ಕೊಡಿಸಿ ಎಂದು ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸೂಚಿಸಿದರು.
ಅಸಂಘಟಿತ ಅಕುಶಲ ಕೂಲಿಕಾರ್ಮಿಕರ ಹೋರಾಟ ಸಮಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 2009-20ನೇ ಸಾಲಿನಲ್ಲಿ ಮಾಡಿರುವ ಕಾಮಗಾರಿಗಳ ಅನುದಾನ ಬಿಡುಗಡೆಗೆ ಆಗ್ರಹಿಸಿ ಮನವಿ ಗ್ರಾ.ಪಂ ಸದಸ್ಯರಾದ ಕಾಮಧೇನಹಳ್ಳಿ ಅರುಣ್, ಅಣ್ಣಿಹಳ್ಳಿಯ ವ ವಿಶ್ವನಾಥ್, ಯಲವಾರದ ರಾಜಕುಮಾರ್, ವಾನರಾಸಿ ರಾಮಯ್ಯ ನಿಯೋಗ ಮನವಿ ಸಲ್ಲಿಸಿದರು.
ಕಾಮಧೇನಹಳ್ಳಿ ಗ್ರಾ.ಪಂ.ಸದಸ್ಯ ರಾಮಚಂದ್ರೇಗೌಡ ಸಚಿವರಿಗೆ ಮನವಿ ಸಲ್ಲಿಸಿ ಕಳೆದ 5 ತಿಂಗಳ ಹಿಂದೆ ತಮ್ಮ ಗ್ರಾ.ಪಂ ಪಿಡಿಒ ಸಸ್ಪೆಂಡ್ ಆಗಿದ್ದಾರೆ, ಅಂದಿನಿಂದ ಉದ್ಯೋಗ ಖಾತ್ರಿ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಜನರ ಕಷ್ಟಗಳಿಗೆ ಸ್ಪಂದಿಸುವವರಿಲ್ಲದಾಗಿದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.