ಅಧಿಕಾರಿಗಳಿಗೆ ಚಾಟಿ ಬೀಸಿದ ಎಚ್ಕೆ ಪಾಟೀಲ
ಚಿಕ್ಕಬಳ್ಳಾಪುರ: ಜಿ.ಪಂ. ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತು ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ರಾಜ್ಯ ಸರ್ಕಾರ ಕಾಲ ಕಾಲಕ್ಕೆ ಅಗತ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡುತ್ತಿದ್ದರೂ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಈ ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿ ಇಷ್ಟೇನಾ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಹೀಗೇನಾ ಎಂದು ಅಧಿಕಾರಿಗಳನ್ನು ಬೆಂಡೆತ್ತಿದ್ದರು.
ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಶೌಚಾಲಯಗಳನ್ನು ಕಟ್ಟಿಸಿಕೊಡಲು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಕಾರ್ಯ ವೈಖರಿಯನ್ನು ಅರ್ಥಮಾಡಿಕೊಂಡ ನಂತರ ಫೆ.15 ರಂದು ಚಿಕ್ಕಬಳ್ಳಾಪುರದಲ್ಲಿ ಮತ್ತೊಮ್ಮೆ ಸಭೆಯನ್ನು ನಡೆಸುವುದಾಗಿ ತಿಳಿಸಿದರಲ್ಲದೇ ಆ ಅವಧಿಯೊಳಗೆ ನಿರೀಕ್ಷಿತ ಸಾಧನೆಯನ್ನು ಸಾಧಿಸದೇ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಖಂಡಿತ ಎಂದು ಎಚ್ಚರಿಕೆ ನೀಡುವುದನ್ನೂ ಅವರು ಮರೆಯಲಿಲ್ಲ.
ಬುಧವಾರ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಸಚಿವ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಂದಿನಂತೆ ಅಧಿಕಾರಿಗಳು ಕೇವಲ ಅಂಕಿ ಅಂಶಗಳನ್ನು ಮುಂದಿಡುವುದರ ಜೊತೆಗೆ ಕೆಲ ಕುಂಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. ಆದರೆ, ಮೊದಲೇ ಜಿಲ್ಲೆಯ ಸಾಧನೆಯ ಅಂಕಿ ಅಂಶಗಳನ್ನು ತಿಳಿದುಕೊಂಡು ಬಂದಿದ್ದ ಸಚಿವರು, ಅಧಿಕಾರಿಗಳು ಹೇಳಿದ ಮಾತನ್ನು ಕೇಳಲಿಲ್ಲ. ಇದಕ್ಕೆ ಪೂರಕವಾಗಿ ಸಭೆಯಲ್ಲಿದ್ದ ಶಾಸಕರು ಸಹ ಅಧಿಕಾರಿಗಳಿಂದಾಗುತ್ತಿರುವ ಲೋಪದೋಷಗಳ ಬಗ್ಗೆ ತಮ್ಮ ಗಮನ ಸೆಳೆಯುತ್ತಿದ್ದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಜಿ.ಪಂ. ಅಧ್ಯಕ್ಷ ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಶಾಸಕ ಡಾ. ಕೆ.ಸುಧಾಕರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮುಂತಾದವರು ಇದ್ದರು.
ಸಭೆಗೆ ತಪ್ಪು ಮಾಹಿತಿಗೆ ಆಕ್ರೋಶ
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ 19 ಕೋಟಿ ರೂ ಬಂದಿದ್ದರಲ್ಲಿ 9.54 ಕೋಟಿ ರು. ಹಣವನ್ನು ಖರ್ಚು ಮಾಡಲಾಗಿದೆ. ನೀರಿನ ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸುವ ಮೂಲಕ ಶುದ್ಧವಾದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆಯನ್ನು ಗುರುತಿಸಲಾಗಿದ್ದು ಮುಂದಿನ ಮಾರ್ಚ್ ಒಳಗೆ ಸಂಪೂರ್ಣವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಸುಂದರಾಜ್, 80 ನೀರು ಶುದ್ದೀಕರಣ ಘಟಕಗಳ ಸ್ಥಾಪನೆಯ ಗುರಿಯಲ್ಲಿ 50 ಘಟಕಗಳ ಕೆಲಸ ಮುಗಿದು,30 ಪ್ರಗತಿಯಲ್ಲಿದೆ. ಚಿಂತಾಮಣಿ ಸೇರಿದಂತೆ ಕೆಲವೆಡೆ ನೀರನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಕ್ಷಣ ಪ್ರತಿಕ್ರಿಯಿಸಿದ ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ತಮ್ಮ ಕ್ಷೇತ್ರದಲ್ಲಿ ಘಟಕಗಳ ಮೂಲಕ ಎಲ್ಲೂ ನೀರು ಪೂರೈಕೆಯಾಗುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿಯನ್ನು ಕೊಡಲಾಗುತ್ತಿದೆ ಎಂದು ಆರೋಪಿಸಿ, ಸ್ಥಳಗಳ ಬಗ್ಗೆ ಮಾಹಿತಿಯನ್ನು ಕೇಳಿದರು. ಆದರೆ, ಮಾಹಿತಿಯನ್ನು ಕೊಡುವ ಬದಲು ಅಧಿಕಾರಿಗಳು ಮೂಕರಾಗಿ ನಿಂತರು. ಕೊನೆಗೆ ಸಚಿವರ ಪ್ರಶ್ನೆಗೆ, ಕೊಳವೆಬಾವಿಗಳು ಒಂದು ತಿಂಗಳಲ್ಲಿಯೇ ಬತ್ತಿ ಹೋಗುತ್ತಿರುವುದರಿಂದ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಮಾತನಾಡಿ, ಅಧಿಕಾರಿಗಳು ಹೇಳುತ್ತಿರುವುದಕ್ಕೂ ಗ್ರಾಮೀಣ ಭಾಗದಲ್ಲಿನ ವಾಸ್ತವಾಂಶಕ್ಕೂ ಭಾರಿ ವ್ಯತ್ಯಾಸಗಳಿವೆ.ಕೊಳವೆ ಬಾವಿಯನ್ನು ಕೊರೆಸಿ ಏಳೆಂಟು ತಿಂಗಳಾದರೂ ಪಂಪ್ ಮೋಟಾರ್ ಅಳವಡಿಸುವುದಿಲ್ಲ. ವಿದ್ಯುತ್ ಸಂಪರ್ಕ ಕೊಡುವುದಿಲ್ಲ. ಲಕ್ಷಾಂತರ ರು. ವೆಚ್ಚದಲ್ಲಿ ಕೊರೆಸಿರುವ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಇದರಿಂದ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದರೂ ಏನೂ ಪ್ರಯೋಜನವಿಲ್ಲದಂತಾಗುತ್ತಿದೆ. ಇದನ್ನು ಪ್ರಶ್ನಿಸಿ ಪ್ರಶ್ನಿಸಿ ಸಾಕಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ 1 ಸಾವಿರ ಅಡಿಯ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಸೇರಿದಂತೆ ಮಾರಕ ಲವಣಾಂಶಗಳನ್ನು ಹೊಂದಿರುವ ನೀರನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಮಾರಕ ಕಾಯಿಲೆಗಳು ಬರುತ್ತಿವೆ.
ಇದು ಬಾಗೇಪಲ್ಲಿಯಲ್ಲಿ ಗಂಭೀರ ಸಮಸ್ಯೆಯಾಗಿದೆಯಾದರೂಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಬಾಗೇಪಲ್ಲಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.ಇನ್ನೂ ಘಟಕಗಳ ಸ್ಥಾಪನೆಯ ಕೆಲಸವೂ ಪ್ರಾರಂಭವಾಗಿಲ್ಲ ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಚಿವರ ಗಮನ ಸೆಳೆದರು.
ಆಗ ಮಧ್ಯೆ ಪ್ರವೇಶಿಸಿದ ಸಚಿವರು, ಜಿಲ್ಲೆಯಲ್ಲಿ 715 ಗ್ರಾಮಗಳಲ್ಲಿ ಫ್ಲೋರೈಡ್ ಸಮಸ್ಯೆ, 526 ಗ್ರಾಮಗಳಲ್ಲಿ ಬಯೋ ಕೆಮಿಕಲ್ ಸಮಸ್ಯೆ ಸೇರಿದಂತೆ 1241 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಆದರೂ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನಗಳು ಸಮರ್ಪಕವಾಗಿ ನಡೆದಿಲ್ಲ ಎಂದು ತಿಳಿಸಿ,ವಿವಿಧೆಡೆ ಲಭ್ಯವಾಗುವ ನೀರಿನ ಸ್ಯಾಂಪಲ್ ಗಳ ಪರಿಶೀಲನೆ ನಡೆಸಿ ಫೆ.1 ರೊಳಗೆ ತಮ್ಮ ಕಚೇರಿಗೆ ಬಂದು ಮಾಹಿತಿಯನ್ನು ನೀಡಬೇಕು. ಆ ನಂತರ ವರದಿಯನ್ನಾಧಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶೌಚಾಲಯ ನಿರ್ಲಕ್ಷ್ಯ
ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಶೇ.3 ರಷ್ಟು ಸಾಧನೆ ಮಾಡಲಾಗಿದೆ.ಇನ್ನೂ ಶೇ.100 ರಷ್ಟು ಗುರಿಯನ್ನು ಸಾಧಿಸುವುದು ಯಾವಾಗ ಎಂದು ಸಚಿವ ಎಚ್.ಕೆ. ಪಾಟೀಲ್ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಾರ್ಷಿಕ ಗುರಿ 30,071 ಶೌಚಾಲಯಗಳ ನಿರ್ಮಾಣ ಗುರಿಯಲ್ಲಿ 14372 ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ಪಡೆದುಕೊಂಡಿದ್ದರೂ ಕೇವಲ 886 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಕೇವಲ 772 ಕಾಮಗಾರಿಗಳಿಗೆ ದೃಢೀಕರಣ ಪತ್ರ ಸ್ವೀಕೃತಿಯನ್ನು ಪಡೆದುಕೊಳ್ಳಲಾಗಿದೆ. ದೂರವಿರುವ ಕೊಪ್ಪಳ ಜಿಲ್ಲೆಯಲ್ಲಿಯೇ 1 ಲಕ್ಷ ಶೌಚಾಲಯ ನಿರ್ಮಾಣ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮುಂದಾಗುತ್ತಿದ್ದು ಬೆಂಗಳೂರಿಗೆ ಸಮೀಪವಿರುವ ಈ ಜಿಲ್ಲೆಯಲ್ಲಿ ಸಾಧನೆ ಈ ಮಟ್ಟದಲ್ಲಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಸಚಿವರ ಪರೀಕ್ಷೆ...
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸ ಬದಲಾವಣೆಯನ್ನು ತಂದು ಜನರ ಸಮಸ್ಯೆಗಳನ್ನು ದೂರ ಮಾಡಿ ಅಭಿವೃದ್ಧಿಯನ್ನು ಸಾಧಿಸಲು ಪಣ ತೊಟ್ಟಿದೆ. ಸಾಕಷ್ಟು ಅನುದಾನವನ್ನು ಇಲಾಖೆಗಳಿಗೆ ಬಿಡುಗಡೆ ಮಾಡುತ್ತಿದೆ.ಇದನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳು ಕೆಲಸ ಮಾಡಿದರೆ ಜನರ ಬಹುತೇಕ ಸಮಸ್ಯೆಗಳ ದೂರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ 20 ಅಂಶಗಳ ಕಾರ್ಯಕ್ರಮದಲ್ಲಿ ಯಾವ್ಯಾವ ಕೆಲಸಗಳನ್ನು ಮಾಡಿಸಬಹುದೆನ್ನುವುದರ ಕುರಿತು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಗಳಿಗೆ ಅರಿವಿದೆಯೇ ಎನ್ನುವುದನ್ನು ಪರೀಕ್ಷಿಸಿದರು.ಇದರಿಂದ ಗಲಿಬಿಲಿಗೊಂಡೇ ಉತ್ತರ ನೀಡಲು ಮುಂದಾದ ಅಧಿಕಾರಿಗಳು ಕಡತಗಳನ್ನು ಸ್ವಲ್ಪ ಸಮಯ ತಡಕಾಡಿ ಅವುಗಳನ್ನು ನೋಡಿಕೊಂಡು ಓದುವ ಕೆಲಸವನ್ನು ಮಾಡಿದಾಗ, ಯೋಜನೆಯನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ 20 ಅಂಶಗಳ ವ್ಯಾಪ್ತಿಗೆ ಬರುವ ಕಾರ್ಯಕ್ರಮಗಳ ಬಗ್ಗೆಯೇ ಅರಿವಿಲ್ಲ ಎಂದು ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಸಭೆಯ ಮುಖ್ಯಾಂಶಗಳು
ಟಿ ನೀರಿನ ಸಮಸ್ಯೆ ನಿವಾರಣೆಯಲ್ಲಿ ವಿಫಲ
ಟಿ ಶೌಚಾಲಯ ನಿರ್ಮಾಣದಲ್ಲಿ (ಶೇ.) ಕಡಿಮೆ ಸಾಧನೆ
ಟಿ ಸಮಗ್ರ ಅಭಿವೃದ್ಧಿ ಸಾಧಿಸುವಲ್ಲಿ ತೀರಾ ಹಿನ್ನಡೆ
ಟಿ ಜಿ.ಪಂ.ಅಧಿಕಾರಿಗಳಿಗೆ ತೀವ್ರ ತರಾಟೆ
ಟಿ ಅಂಕಿ ಅಂಶಗಳ ಜೊತೆಗೆ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳಲೆತ್ನಿಸಿದ ಅಧಿಕಾರಿಗಳಿಗೆ ಚಳ್ಳೇಹಣ್ಣು ತಿನ್ನಿಸಿದ ಸಚಿವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

