ಕೋಲಾರ

ಮಾರ್ಚ್‌ವರೆಗಷ್ಟೇ ಟೇಕಲ್ ರಸ್ತೆ ಕಿರಿಕಿರಿ

Published On :

ಕೋಲಾರ: ಸುಮಾರು 900 ಮೀಟರ್ ಉದ್ದದ ಕೋಲಾರ-ಟೇಕಲ್ ರಸ್ತೆಯ ಅಗಲೀಕರಣ ಕಾಮಗಾರಿ ವಿಳಂಬವಾಗಿರುವುದರಿಂದ ವ್ಯಾಪಾರಿಗಳು, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.
14 ತಿಂಗಳ ಹಿಂದೆ ಕೊತ್ತಪಲ್ಲಿ-ಮಾಸ್ತಿಗೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆಯ ಅವಶ್ಯಕತೆ ಇರುವುದರಿಂದ ಕೋಲಾರ-ಟೇಕಲ್ ರಸ್ತೆಯ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಯಿತು.
ವಿಧಾನಸಭಾ ಚುನಾವಣೆ ಸಮೀಪಿಸಿದ್ದರಿಂದ ಕಳೆದ ವರ್ಷ ಆಗಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವರ್ತೂರ್ ಆರ್. ಪ್ರಕಾಶ್ ರಸ್ತೆ ಕಾಮಗಾರಿಗಾಗಿ ಆತುರಾತುರವಾಗಿ ಭೂಮಿ ಪೂಜೆ ನೆರವೇರಿಸಿದ್ದರು.
ಲೋಕೋಪಯೋಗಿ ಇಲಾಖೆ ಮೂಲಕ ನಡೆಯುವ ಈ ಕಾಮಗಾರಿ ಟೆಂಡರ್‌ಅನ್ನು ವೆಂಕಟರಾಮರೆಡ್ಡಿ  ಎಂಬುವರು ಪಡೆದುಕೊಂಡಿದ್ದು ಟೆಂಡರ್ ಅವಧಿ ಮುಗಿದಿದ್ದರೂ ಕಾಮಗಾರಿ ಮುಗಿಯದಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಧೂಳಿನ ಅಭಿಷೇಕ, ಅಡ್ಡಾದಿಡ್ಡಿ ವಾಹನ ಚಾಲನೆ, ಚರಂಡಿ ನಿರ್ಮಾಣದಿಂದ ಕೊಂಕಣ ಸುತ್ತಿ ತಮ್ಮ ಮನೆಗಳಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಹೆದ್ದಾರಿ ಯೋಜನೆಯಡಿ ನಡೆಸುತ್ತಿರುವ ಕೋಲಾರ-ಟೇಕಲ್ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರೇ ಕಾರಣವೆಂದು ಗೊತ್ತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅಸಮಾಧಾನ ವ್ಯಕ್ತಪಡಿಸಿರುವುದಲ್ಲದೆ, ತಮ್ಮ ಕಚೇರಿಗೆ ಗುತ್ತಿಗೆದಾರ ವೆಂಕಟರಾಮರೆಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿ ಆಂಜನಪ್ಪ ಅವರನ್ನು ಕರೆಸಿಕೊಂಡು ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಗಡುವು ನೀಡಿದ್ದಾರೆ.
ಟೆಂಡರ್ ಅವದಿ ಮುಗಿದು 2 ತಿಂಗಳಾಗಿದೆ. ರಸ್ತೆ ಅಗಲೀಕರಣಕ್ಕೆ ಟೇಕಲ್ ರಸ್ತೆಯ ಜನರು ಸಹಕಾರ ನೀಡಿ ತಮ್ಮ ಕಟ್ಟಡಗಳನ್ನು ತಾವೇ ಕೆಡವಿಕೊಂಡು ಚರಂಡಿ ನಿರ್ಮಾಣಕ್ಕೆ ಸಹಕಾರ ನೀಡಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದು ಸರಿಯಲ್ಲ. ಕೊತ್ತಪಲ್ಲಿ-ಮಾಸ್ತಿಗೆ ಸಂಕರ್ಪ ಕಲ್ಪಿಸುವ ರಸ್ತೆಯ ಕಾಮಗಾರಿ ಇನ್ನು 5 ತಿಂಗಳಲ್ಲಿ ಮುಗಿಸಬೇಕಾಗಿರುವುದರಿಂದ ಮಾರ್ಚ್ ಅಂತ್ಯಕ್ಕೆ ಟೇಕಲ್ ರಸ್ತೆಯ ಕಾಮಗಾರಿ ಮುಗಿಸದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ಇನ್ನು ಎರಡುವರೆ ತಿಂಗಳ ಕಾಲ ಈ ರಸ್ತೆಯಲ್ಲಿ ಓಡಾಡುವುದಕ್ಕೆ ಯಮಯಾತನೆ ಅನುಭವಿಸುವುದು ಅನಿವಾರ್ಯವಾಗಿದೆ.
ರಸ್ತೆ ಅಗಲೀಕರಣಕ್ಕಾಗಿ ಅನೇಕ ಕಟ್ಟಡಗಳನ್ನು ಕೆಡವಿ ಚರಂಡಿ ನಿರ್ಮಿಸಲಾಗುತ್ತಿದೆ, ಈ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಸಬೇಕು, ಚರಂಡಿಯ ಮೇಲೆ ಡಕ್ ನಿರ್ಮಾಣ ಮಾಡಲಾಗುತ್ತಿದ್ದು ಇದರ ಮೇಲೆ ಪಾದಚಾರಿಗಳು ಓಡಾಡಲು ಅವಕಾಶ ಮಾಡಿಕೊಟ್ಟು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ವ್ಯಾಪಾರಿಗಳು ಚರಂಡಿಯ ಮೇಲಿನ ಡಕ್‌ಗಳನ್ನು ಒತ್ತುವರಿ ಮಾಡಿಕೊಂಡು ಮತ್ತೆ ಹಳೆ ರೀತಿಯಲ್ಲೇ ವ್ಯಾಪಾರ ವಹಿವಾಟು ಮುಂದುವರೆಸುವುದರಿಂದ ರಸ್ತೆ ಅಗಲೀಕರಣಕ್ಕೆ ಕಿಮ್ಮತ್ತು ಇರುವುದಿಲ್ಲವೆಂಬುದು ಸಾರ್ವಜನಿಕರು ಅಭಿಪ್ರಾಯವಾಗಿದೆ.
ಅಂಡರ್‌ಪಾಸ್ ನಿರ್ಮಾಣ ಅಗಲಿ: ಟೇಕಲ್ ರಸ್ತೆಯ ಬಳಿಯ ರೇಲ್ವೆ ಗೇಟ್ ಬಳಿ ಅಂಡರ್‌ಪಾಸ್ ನಿರ್ಮಾಣಕ್ಕೆ ಈಗಾಗಲೇ ಜನತೆಯಿಂದ ಮನವಿಗಳು ಸಲ್ಲಿಕೆಯಾಗಿದೆ. ಪ್ರತಿಭಟನೆಗಳು ನಡೆದಿವೆ. ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರು ರೇಲ್ವೆ ಇಲಾಖೆಯ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರ ಮನವೊಲಿಸಿ ಪ್ರಸ್ತುತ ತಂತ್ರಜ್ಞಾನದೊಂದಿಗೆ ಅಂಡರ್‌ಪಾಸ್ ನಿರ್ಮಾಣಕ್ಕೆ ಗಮನ ನೀಡದಿದ್ದರೆ ಟೇಕಲ್ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿ ಹೊಸ ಸಮಸ್ಯೆಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ನಗರಸಭೆ ಸದಸ್ಯರಾದ ಮುರಳಿಗೌಡ, ರವೀಂದ್ರ, ವಕೀಲ ಮಾಗೇರಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ,ಆದರ್ಶ ಕಾಲೇಜಿನ ರವೀಂದ್ರ ಸಿಂಗ್, ಪತ್ರಕರ್ತ ಎಸ್.ಎನ್. ಪ್ರಕಾಶ್ ಮುಂತಾದವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ರೈಲು ಸಂಚಾರ ಆರಂಭವಾದ ಮೇಲೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ರೇಲ್ವೆ ಗೇಟಟ್ಮುಚ್ಚಿದ ಸಂದರ್ಭದಲ್ಲಿ ಎರಡೂ ಕಡೆ ನೂರಾರು ವಾಹನಗಳು ಅಡ್ಡಾದಿಡ್ಡಿ ನಿಲ್ಲುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ವಾಹನ ಸವಾರರು ಕುಪಿತರಾಗಿ ಜಗಳಕ್ಕೆ ಇಳಿಯುತ್ತಿರುವುದರಿಂದ ಸಮಸ್ಯೆ ಉಲ್ಬಣಗೊಳ್ಳುವಂತಾಗುತ್ತಿರುವುದರಿಂದ ಕೇಂದ್ರ ಸಚಿವರು ಅದಷ್ಟು ಬೇಗನೆ ಸೂಕ್ತ ಪರಿಹಾರ ಹುಡುಕಿ ಜನತೆಯ ಹಿತಕಾಯಬೇಕೆಂದು ಒತ್ತಾಯಿಸಿದ್ದಾರೆ.
ಗುತ್ತಿಗೆದಾರನಿಗೆ ಗಡುವು ನೀಡಿದ್ದೇವೆ
ಟೇಕಲ್ ರಸ್ತೆ ಕಾಮಗಾರಿ ಮಾರ್ಚ್ ಒಳಗೆ ಮುಗಿಸಲು ಗುತ್ತಿಗೆದಾರ ವೆಂಕಟರಾಮರೆಡ್ಡಿಗೆ ಗಡುವು ನೀಡಲಾಗಿದೆ. ಜನತೆಯ ಕಷ್ಟ ಅರಿತು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ, ಒಂದು ವೇಳೆ ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡಿದಲ್ಲಿ ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ.
- ಮುನಿ ಆಂಜನಪ್ಪ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.