ಕೋಲಾರ

ಗ್ಯಾಸ್ ದರ ಇಳಿಕೆಗೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

Published On :

ಕೋಲಾರ: ಗ್ಯಾಸ್ ದರ ಏರಿಕೆ ವಿರೋಧಿಸಿ ನಗರದಲ್ಲಿ ಬುಧವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಮಹಿಳೆಯರು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಮಹಿಳೆಯ ಪರವಾಗಿ ಪುರುಷರೇ ಘೋಷಣೆ ಕೂಗಿ ದರು. ಪ್ರತಿಭಟನೆಯಲ್ಲಿ ಶಕುಂತ ದೀಕ್ಷಿ ತ್, ಮಂಜುಳ ಅಮರ್, ಅರುಣಜ್ಯೋತಿ, ವಿಜಯಲಕ್ಷ್ಮಿ, ಮಂಜುಳಾದೇವಿ, ಕಲಾವತಿ, ಜಯಮ್ಮ, ಶೋಭಾ, ಪಾಪಮ್ಮ, ಯಶೋಧ, ವೀಣಾ, ಲಕ್ಷ್ಮೀ, ನಗರ ಬಿಜೆಪಿ ಅಧ್ಯಕ್ಷ ಜಯಂತಿಲಾಲ್, ಅಲ್ಪಸಂಖ್ಯಾತರ ಮೋರ್ಚಾದ ಜಾಮೀನ್, ಎಸ್ಪಿ ಮೋರ್ಚಾದ ಗಾಂಧಿನಗರ ವೆಂಕಟೇಶ್, ವಿಜಯಕುಮಾರ್, ಹಾರೋಹಳ್ಳಿ
ನಾರಾಯಣಸ್ವಾಮಿ, ಕೀಲುಕೋಟೆ ರವಿ, ಕೆ.ಎನ್.ಸುರೇಶ್, ಕೆಂಬೋಡಿ ನಾರಾಯಣಸ್ವಾಮಿ, ಪುನೀತ್, ಓಹಿಲೇಶ್, ವಕ್ತಾರ ಶಿಳ್ಳಂಗೆರೆ ಮಹೇಶ್ ಇದ್ದರು.
ದಲಿತರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಧರಣಿ
ಬಂಗಾರಪೇಟೆ: ಚಿಕ್ಕಅಂಕಂಡಹಳ್ಳಿ ಪಂಚಾಯ್ತಿ ಕಚೇರಿ ಬಳಿ ಹಲವು ವರ್ಷಗಳಿಂದ ಗೂಡಿಸಲಿನಲ್ಲಿ ವಾಸವಾಗಿರುವ ದಲಿತ ಕುಟುಂಬಗಳಿಗೆ ಕೂಡಲೆ ಹಕ್ಕು ಪತ್ರಗಳನ್ನು ವಿತರಿಸಿ ಆಶ್ರಯ ಯೋಜನೆಯಡಿ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಶೋಷಿತ ಸಮುದಾಯಗಳ ಹಕ್ಕು ಹೋರಾಟ ಸಮಿತಿ ಮುಖಂಡರು ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.
ಮನೆಯಿಲ್ಲದ ನಿರ್ಗತಿಕರು ಚಿಕ್ಕಅಂಕಂಡಹಳ್ಳಿ ಪಂಚಾಯ್ತಿ ಕಚೇರಿ ಬಳಿರುವ ಖಾಲಿ ನಿವೇಶನದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ದಲಿತರು ವಾಸ ಮಾಡುವ ಸ್ಥಳವನ್ನು ದಲಿತರಿಗೇ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡಿ ಪಂಚಾಯ್ತಿ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅನಗತ್ಯವಾಗಿದ್ದರೂ ಪಶು ವೈದ್ಯ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಈಗ ಆರೋಗ್ಯ ಕೇಂದ್ರ ಕಟ್ಟಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ತಾಪಂ ಇಒ ಕೆ.ಎಸ್. ಭಟ್ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರೂ ಧರಣಿ ನಿರತರು ಒಪ್ಪದೆ ಧರಣಿ ಮುಂದುವರೆಸಿದರು. ವೆಂಕಟೇಶ್, ಹೂವಳ್ಳಿ ನಾಗರಾಜ್, ಪ್ರಭಾವತಿ, ಶ್ರೀನಿವಾಸಗೌಡ, ಕಾರಬೆಲೆ ವೆಂಕಟೇಶ್ ಇದ್ದರು.
ತಾಪಂ ಲೆಕ್ಕ ನಿರ್ವಹಣೆ ರಾಷ್ಟ್ರೀಯ ಪ್ರಶಸ್ತಿ: ಪುಟ್ಟಸ್ವಾಮಿ
ಮಾಲೂರು: ತಾಲೂಕು ಪಂಚಾಯ್ತಿಯ ಅತ್ತುತ್ಯಮ ಲೆಕ್ಕ ನಿರ್ವಹಣೆಗಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎಂದು ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಸಂತಸ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಲ್ಲಿನ ಅಧಿಕಾರಿಗಳು, ಸದಸ್ಯರ ಸಹಕಾರದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಪ್ರಶಸ್ತಿ ಪಡೆಯಲು ಕಾರಣವಾಗಿರುವ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಮುಂದಿನ ಮಾರ್ಚ್ ನಂತರ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಬರುವ ಸಂಭವ ವಿರುವುದರಿಂದ ಮಾರ್ಚಿಯೊಳಗೆ ಬಂದಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿ ಹಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ನಂತರ ನಡೆದ ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಅನುರಾಧ ಮಾತನಾಡಿ, ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರೂ ಖಾಲಿ ಇರುವ 46 ಸಿಬ್ಬಂದಿ ಕೊರತೆಯಿಂದ ತೊಂದರೆಯಾಗುತ್ತಿದೆ ಎಂದು ಪರಿಸ್ಥಿತಿ ವಿವರಿಸಿದರು.
ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳೂಡನೆ ಈ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಕುರಿತು ಚರ್ರ್ಚಿಸಲಾಯಿತು. ಉಪಾಧ್ಯಕ್ಷೆ ರಾಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಲೋಕೇಶ್, ಟಿ.ಎಂ. ಮೂರ್ತಿ, ಚಂದ್ರಪ್ಪ, ಆನಂದ್, ಎಇಇ ಬದ್ರಿನಾಥ್, ಕೃಷಿ ಅಧಿಕಾರಿಣಿ ಭವ್ಯರಾಣಿ, ಎಪಿಎಂಸಿಯ ವಿಜಯಲಕ್ಷ್ಮಿ, ರೇಷ್ಮೆ ಇಲಾಖೆಯ ರುದ್ರಪ್ಪ, ತೋಟಗಾರಿಕೆ ಇಲಾಖೆಯ ಆನಂದ್, ಸಮಾಜ ಕಲ್ಯಾಣ ಅಧಿಕಾರಿ ಸೈಯದ್ ಮುನೀರ್, ವ್ಯವಸ್ಥಾಪಕಿ ಭಾನುಮತಿ ಇದ್ದರು.
60 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ
ಬಂಗಾರಪೇಟೆ: ದಲಿತರ ಕಾಲೋನಿಗಳಲ್ಲಿ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಹತ್ತು ಗ್ರಾಮಗಳನ್ನು ಆಯ್ಕೆ ಮಾಡಿ 60 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಚಿಕ್ಕಅಂಕಂಡಹಳ್ಳಿ, ಡಿಕೆಹಳ್ಳಿ, ಬೂದಿಕೋಟೆ, ಚಿನ್ನಕೋಟೆ ಹಾಗೂ ಬೆಂಗನೂರು ಪಂಚಾಯ್ತಿಗಳಲ್ಲಿ ಎಸ್ಸಿಪಿ ಯೋಜನೆಯಲ್ಲಿ 60 ಲಕ್ಷ ವೆಚ್ಚದಲ್ಲಿ ದಲಿತರು ವಾಸಿಸುವ ಕಾಲೋನಿಗಳಲ್ಲಿ ಉತ್ತಮ ಮತ್ತು ಯೋಗ್ಯವಾದ ರಸ್ತೆಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.ಗ್ರಾಮೀಣ ಪ್ರದೇಶದ ರಸ್ತೆಗಳು ತುಂಬಾ ಅವ್ಯವಸ್ಥೆಯಿಂದ ಕೂಡಿದ್ದು, ಅವುಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ 13.60 ಕೋಟಿ, ನ್ಯಾಯಾಲಯ ಸ್ವಂತ ಕಟ್ಟಡ ನಿರ್ಮಾಣಕ್ಕೆ 16 ಕೋಟಿ ಮಂಜೂರಾಗಿದೆ ಹಾಗೂ ಗ್ರಾಮೀಣ ಭಾಗದಲ್ಲಿ 300 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದು ಹೇಳಿದರು.
ಶೀಲ ಶಂಕಿಸಿ ಪತ್ನಿ ಕೊಲೆ ಯತ್ನ
ಚಿಂತಾಮಣಿ: ಹೆಂಡತಿ ಮೇಲೆ ಅನುಮಾನಗೊಂಡು ಆಕೆಯ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಯ್ಯಗಾರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಘಟನೆ ವಿವರ: ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ದೇವಪ್ಪಲ್ಲಿ ಗ್ರಾಮದ ಮಂಜುಳ(28) ಎಂಬಾಕೆಯನ್ನು ಹನುಮಯ್ಯಗಾರಹಳ್ಳಿ ಗ್ರಾಮದ ಶಂಕರ ಬಿನ್ ರಂಗಪ್ಪ ಎಂಬಾತನಿಗೆ ಕಳೆದ ಹಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಇತ್ತೀಚಿನ ದಿನಗಳಲ್ಲಿ ಗಂಡ ಶಂಕರ ಹೆಂಡತಿಯ ಮೇಲೆ ಅನುಮಾನಗೊಂಡು ಆಗಾಗ ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮಂಜುಳ ಮೇಲೆ ಅರಿತ ಚಾಕುವಿನಿಂದ ಶಂಕರ ಏಕಾಏಕಿ ಆಕೆಯ ಕೂದಲನ್ನು ಹಿಡಿದು ಕತ್ತು ಕೊಯ್ದು ಕೊಲೆ ಮಾಡಲು ಮುಂದಾದಾಗ ಆಕೆ ಜೋರಾಗಿ ಕಿರುಚಾಡಿ ಕೂಗಾಡಿದ ಪರಿಣಾಮ ನೆರೆಹೊರೆ ಸಹಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಪೋಲೀಸ್ ಠಾಣೆಯ ಸಬ್‌ಇನ್ಸೆಪೆಕ್ಟರ್ ಪ್ರವೀಣ್‌ಕುಮಾರ್ ಆರೋಪಿ ಶಂಕರ್‌ಗನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಮನೆ ಬೀಗ ಒಡೆದು ಕಳ್ಳತನ
ಶಿಡ್ಲಘಟ್ಟ: ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಹಗಲಿನಲ್ಲೇ ಮನೆ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಹಿತ್ತಲ ಹಳ್ಳಿಯಲ್ಲಿ ವಾಸವಾಗಿರುವ ಆರತಿ ಎಂಬುವವರು ಕೊಲಿ ಕೆಲಸಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ, ಮನೆ ಬೀಗ ಒಡೆದು ಕಳ್ಳತನ ಮಾಡಲಾಗಿದೆ, ಮನೆಯ ಊರಿನ ಮಧ್ಯದಲ್ಲಿದ್ದರೂ  ಕಳ್ಳತನ ನಡೆದಿದ್ದು  ಆತಂಕ ಮೂಡಿಸಿದೆ. ಮನೆಯಲ್ಲಿ ಒಡವೆ ಚಿನ್ನದ ಸರ, ಬಳೆ ಸೇರಿದಂತೆ 75 ಗ್ರಾಂನಷ್ಟು ಒಡವೆ, 2000 ರು. ಹಣ ಸೇರಿದಂತೆ ಸುಮಾರು 2 ಲಕ್ಷ ರು. ಬೆಲೆಬಾಳುವ ಒಡವೆ, ಹಣ ಕಳ್ಳತನವಾಗಿದೆ.  ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲು ಮಾಡಿದ್ದು ಪ್ರಕಣವನ್ನು ತನಿಖೆ ಮಾಡಲಾಗುತ್ತಿದೆ.
ದಿನಸೂಚಿ ಬಿಡುಗಡೆ
ಮುಳಬಾಗಲು: ರಾಜ್ಯ ಸರ್ಕಾರಿ ನೌಕರರ ಪ್ರಯೋಜನಕ್ಕಾಗಿ ದಿಸಸೂಚಿಯನ್ನು ಹೊರತಂದಿರುವ ಸರ್ಕಾರಿ ನೌಕರರ ಸಂಘ ಶ್ಲಾಘನೀಯ ಕೆಲಸ ಮಾಡಿದೆ ಎಂದು ತಾಪಂ ಇಒ ಅರುಣಕುಮಾರ್ ನುಡಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ದಿನಸೂಚಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಬಿಇಒ ಎನ್.ದೇವರಾಜ್,  ಎನ್.ಜಗದೀಶ್,  ಎಂ.ಸುಬ್ಪರಾಯಪ್ಪ,  ಮಂಜುನಾಥ್,  ತಿಮ್ಮರಾಜು, ಉಪಾಧ್ಯಕ್ಷರಾದ ಕೆ.ಸೀನಪ್ಪ, ಮುರಳಿಧರಶರ್ಮ, ವಿ.ಉಮಾ.ಫೈಜುಲ್ಲಾ,ಅನಸೂಯಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.