ನಾಯಿ ದಾಳಿಗೆ ತುತ್ತಾದ ನವಜಾತ ಶಿಶು ರಕ್ಷಣೆ
ಗೌರಿಬಿದನೂರು: ನವಜಾತ ಶಿಶುವನ್ನು ನಾಯಿಗಳು ಎಳೆದಾಡುತ್ತಿದ್ದುದನ್ನು ಕಂಡ ಸಾರ್ವಜನಿಕರು ನಾಯಿಗಳಿಂದ ಪಾರುಮಾದ ಘಟನೆ ಪಟ್ಟಣದ ನ್ಯಾಷನಲ್ ಕಾಲೇಜು ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಹಿಂದೂಪುರ ರಸ್ತೆಯಲ್ಲಿರುವ ಪಿನಾಕಿನಿ ನದಿಯ ಸೇತುವೆಯ ಕೆಳಭಾಗದಿಂದ ನಾಯಿಗಳು ಎಳೆದು ರಸ್ತೆಯ ಮೂಲಕ ಮಗುವನ್ನು ಎಳೆದೊಯ್ಯುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಕಂಡು ಮಗುವನ್ನು ಕಾಪಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು ತಡೆಯುವಂತೆ ಪೊಲೀಸರಿಗೆ ದೂರು ನಿಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಯುವ ಸಂಸತ್ ಸ್ಪರ್ಧೆ: ನಿತಿನ್ ಪ್ರಥಮ
ಚಿಂತಾಮಣಿ: ಚಿಕ್ಕಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 70 ವಿದ್ಯಾರ್ಥಿಗಳು ಭಾಗವಹಿಸಿದ್ದು, ರಾಯಲ್ ಕಾಲೇಜಿನಿಂದ ಭಾಗವಹಿಸಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ನಿತಿನ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಜ.11 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆ ಪ್ರತಿನಿಧಿಸಲಿದ್ದಾನೆ. ಸತತ 2ನೇ ಬಾರಿಗೆ ಆಯ್ಕೆಯಾಗಿ ರಾಜ್ಯ ಮಟ್ಟದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ನಿತಿನ್ನನ್ನು ಸಂಸ್ಥೆ ಅಧ್ಯಕ್ಷ ಕೆ.ರಾಮಕೃಷ್ಣ, ಕೆ.ಆರ್.ಪ್ರೇಮಲತಾ ಪ್ರಾಂಶುಪಾಲರಾದ ಶಶಿಧರ್, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಇಂದು ಜಿಪಂ ಅವಿಶ್ವಾಸ ನಿರ್ಣಯ ಸಭೆ
ಚಿಕ್ಕಬಳ್ಳಾಪುರ: ನೂತನ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜ.10ರಂದು ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆ ನಡೆಯಲಿದೆ.
ಆದರೆ, ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದ ಬಹುತೇಕ ಸದಸ್ಯರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸಭೆಯ ಬಗ್ಗೆ ಕುತೂಹಲ ಮೂಡಿಸಿದೆ.
27 ಜಿಪಂ ಸದಸ್ಯರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷರಾಗಿ ಎಸ್.ಎನ್. ಚಿನ್ನಪ್ಪ ಮತ್ತು ಉಪಾಧ್ಯಕ್ಷರಾಗಿ ರಾಘವೇಂದ್ರ ಹನುಮಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಜಿ.ಪಂ.ನಲ್ಲಿ ಕಾಂಗ್ರೆಸ್ ಪಕ್ಷವೇ ಹೆಚ್ಚಿನ ಬಹುಮತವನ್ನು ಹೊಂದಿದ್ದಾರೆ. ಆದರೂ ಸಹ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಕೆಲ ಕಾಂಗ್ರೆಸ್ ಸದಸ್ಯರೇ ಇತರರೊಂದಿಗೆ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ಕೊಡದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಜಿ.ಪಂ.ನಿಂದ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ 12 ಮಂದಿ ಜಿ.ಪಂ.ಸದಸ್ಯರು ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡನೆ ಸಭೆಯನ್ನು ಕರೆಯುವಂತೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಕುರಿತ ವಿಶೇಷ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ತಿಳಿಸಿದ್ದಾರೆ.
ಕಾಂಗ್ರೆಸ್ಗೆ ಆಯ್ಕೆ
ಮಾಲೂರು: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಯುವ ಕಾಂಗ್ರೆಸ್ನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ತಾಲೂಕಿನಿಂದ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಬ್ಬ ಮತದಾರರ ಆಸೆಂಬ್ಲಿ, ರಾಜ್ಯ ಹಾಗೂ ಲೋಕಸಭೆ ಕ್ಷೇತ್ರಕ್ಕೆ ತಲಾ ಒಂದರಂತೆ ಮೂರು ಮತಗಳನ್ನು ಹಾಕಬಹುದಾಗಿದ್ದು, ತಾಲೂಕಿನ 427 ಮತದಾರರಲ್ಲಿ 421 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದರು.
ಜಿಲ್ಲಾ ಮಟ್ಟದ ವಸ್ತುಪ್ರದರ್ಶನ
ಚಿಕ್ಕಬಳ್ಳಾಪುರ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜ.11 ರಂದು ಮಧ್ಯಾಹ್ನ 12.30 ಕ್ಕೆ ಮಹಿಳಾ ಉದ್ಯಮಿಗಳು, ಸ್ತ್ರೀಶಕ್ತಿ, ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸಿರುವ ವಸ್ತುಗಳ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವಣದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ಮತ್ತು ನಾಗರೀಕ ಸರಬರಾಜು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಡಾ.ಕೆ. ಸುಧಾಕರ್ ವಹಿಸುವರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಹೆಚ್. ಮುನಿಯಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ, ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಶಾಸಕರಾದ ಎಂ. ರಾಜಣ್ಣ, ಎಸ್.ಎನ್. ಸುಬ್ಬಾರೆಡ್ಡಿ, ಎಂ. ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಡಾ.ಎ.ಹೆಚ್. ಶಿವಯೋಗಿಸ್ವಾವು, ವೈ.ಎ. ನಾರಾಯಣಸ್ವಾಮಿ, ನಸೀರ್ ಅಹಮದ್, ಡಿ.ಎಸ್. ವೀರಯ್ಯ ಮುಂತಾದವರು ಭಾಗವಹಿಸಲಿದ್ದಾರೆ.
'ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತೇಜಿಸಿ'
ಬಂಗಾರಪೇಟೆ: ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಮಟ್ಟವನ್ನು ಅಳೆಯುವ ಈ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾಠದ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಸರ್ಕಾರ ಕಲಿಕೋತ್ಸವ ಪ್ರಾರಂಭಿಸಿದೆ ಎಂದರು. ಇದರ ಅರಿವನ್ನು ಶಾಲೆ ಶಿಕ್ಷಕರು ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮೂಡಿಸಿ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಸಹಕರಿಸುವಂತೆ ಕೋರಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಶಿಕ್ಷಕರು ಮತ್ತೆ ಅವರನ್ನು ಕಲಿಕೋತ್ಸವದಲ್ಲಿ ಭಾಗವಹಿಸುವಂತೆ ಉತ್ತೇಜಿಸಬೇಕು, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪಾಠದ ಜೊತೆ ಇತರೇ ಚಟುವಟಿಕೆಗಳಲ್ಲಿ ತೊಡಗಿದರೆ ಮುಂದಿನ ಜೀವನ ಉತ್ತಮವಾಗಿರುತ್ತದೆ. ನಗರ ಪ್ರದೇಶದ ಮಕ್ಕಳ ಜೊತೆ ಸ್ಪರ್ಧೆ ಕಷ್ಟವಾದರೂ ಅವರೊಂದಿಗೆ ಪೈಪೋಟಿ ಮಾಡಲು ಸರ್ಕಾರ ಬಿಸಿಯೂಟ, ಪುಸ್ತಕ ಸೇರಿದಂತೆ ಎಲ್ಲಾ ಅನುಕೂಲಗಳನ್ನು ಕಲ್ಪಿಸಿದೆ ಈ ಯೋಜನೆಗಳನ್ನು ಗ್ರಾಮೀಣ ಮಕ್ಕಳ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ತಹಸೀಲ್ದಾರ್ ಉಷಾ, ಶಿಕ್ಷಣಾಧಿಕಾರಿ ಕೆ. ಜಯರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಯುವರಾಜು, ಬಿಆರ್ಸಿ ಶ್ರೀನಿವಾಸ್, ರಮಣ, ಸುಜಾತ ಮತ್ತು ನಯಾಜ್ ಇದ್ದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜಯಿಗಳಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸ್ವಾವಲಂಬಿ ಜೀವನ ಸಾಗಿಸಲು ಸಲಹೆ
ಶಿಡ್ಲಘಟ್ಟ: ಗ್ರಾಮೀಣ ಪ್ರದೇಶಗಳ ನಿರುದ್ಯೋಗಿ ಯುವಕ ಯುವತಿಯರು ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಸ್ವಾವಲಂಬಿ ಜೀವನ ಸಾಗಿಸಿ ಎಂದು ರಾಜೀವ್ ಗಾಂಧಿ ಯುವಚೈತನ್ಯ ಯೋಜನೆಯ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಪ್ಪ ಹೇಳಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿರುದ್ಯೋಗಿ ಯುವಕ ಯುವತಿಯರೊಂದಿಗೆ ಸಂವಾದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೃಷಿ, ರೇಷ್ಮೆ, ಹೈನು ಉದ್ಯಮ, ಗುಡಿಕೈಗಾರಿಕೆಗಳಂತಹ ಉಪಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು. ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯ ಸುಮಾರು 60ಕ್ಕೂ ಹೆಚ್ಚು ಮಂದಿ ನಿರುದ್ಯೋಗಿ ಯುವಕ ಯುವತಿಯರು ತರಬೇತಿಯಲ್ಲಿ ಭಾಗವಹಿಸಿದ್ದರು. ಗ್ರಾಪಂ ಪಿಡಿಒ ಫಣೀಂದ್ರ ಸೇರಿದಂತೆ ಮುಂತಾದವರು ಹಾಜರಿದ್ದರು.
ನಾಳೆಯಿಂದ ಕ್ರಿಕೆಟ್ ಪಂದ್ಯಾವಳಿ
ಕೋಲಾರ: ತಾಲೂಕಿನ ಅರಿನಾಗನಹಳ್ಳಿ, ಮಲ್ಲಸಂದ್ರ ಗ್ರಾಮದ ಎಎಂಸಿಸಿ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಜಿಲ್ಲಾ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿಯನ್ನು ಜ.11 ಮತ್ತು 12ರಂದು ಮಲ್ಲಸಂದ್ರ ಗ್ರಾಮದ ಕೆರೆ ಅಂಗಳದಲ್ಲಿ ಆಯೋಜಿಸಲಾಗಿದೆ. ಆಸಕ್ತ ತಂಡಗಳು 300 ಪ್ರವೇಶ ಶುಲ್ಕದೊಂದಿಗೆ ತಂಡದ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದು. ಪ್ರಥಮ ಬಹುಮಾನ 10 ಸಾವಿರ, ಆಕರ್ಷಕ ಟ್ರೋಪಿ, ದ್ವಿತೀಯ ಬಹುಮಾನ 6 ಸಾವಿರ ಮತ್ತು ಆಕರ್ಷಕ ಟ್ರೋಪಿ ಹಾಗೂ ಉತ್ತಮ ಗ್ರಾಮೀಣ ತಂಡವನ್ನು ಆಯ್ಕೆ ಮಾಡಿ 3 ಸಾವಿರ ಮತ್ತು ಬಹುಮಾನವನ್ನು ನೀಡಲಾಗುವುದೆಂದು ಅರಿನಾಗನಹಳ್ಳಿ ಮಲ್ಲಸಂದ್ರ ಗ್ರಾಮದ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆನಂದ್ 9164066180, ವೆಂಕಿ 9739828350, ನಾಗರಾಜ್ 9844779788 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎತ್ತರ ಜಿಗಿತದಲ್ಲಿ ಕೃಷ್ಣಮೂರ್ತಿಗೆ ಬೆಳ್ಳಿ
ಕೋಲಾರ: ಆಂಧ್ರ ಪ್ರದೇಶದ ಮೆಹಬೂಬ್ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದ ಕ್ರೀಡಾಪಟು ಕೃಷ್ಣಮೂರ್ತಿ 2ನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಗ್ರಾಮೀಣ ಪ್ರತಿಭೆಯಾದ ಕೃಷ್ಣಮೂರ್ತಿ ಉದಯೋನ್ಮುಖ ಕ್ರೀಡಾಪಟುವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗಳಿಸಿದ್ದಾರೆ. ಅವರು ಯುವ ಸಬಲಕೀರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್. ಶಂಕರಪ್ಪ ಅವರ ಬಳಿ ಕಳೆದ ಒಂದು ವರ್ಷದಿಂದ ನಗರದ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವೈಜ್ಞಾನಿಕ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ತಿಳಿಸಿದ್ದಾರೆ.
ಸ್ತ್ರೀಶಕ್ತಿ ಸಂಘಕ್ಕೆ ಸಾಲ ವಿತರಣೆ
ಕೆಜಿಎಫ್: ನಗರಸಭಾ ವ್ಯಾಪ್ತಿಯ 28ನೇ ಪಾಲಕಾರ್ ವಾರ್ಡ್ನ ಸ್ತ್ರೀಶಕ್ತಿ ಸಂಘದ ಸುಮಾರು 100 ಮಹಿಳೆಯರಿಗೆ ಮಾಜಿ ಶಾಸಕ ಎಂ. ಭಕ್ತವತ್ಸಲಂ ನೇತೃತ್ವದಲ್ಲಿ ಐಸಿಐಸಿಐ ಬ್ಯಾಂಕ್ ವತಿಯಿಂದ ತಲಾ 10 ಸಾವಿರದಂತೆ 10 ಲಕ್ಷ ಸಾಲವನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಎಂ. ಭಕ್ತವತ್ಸಲಂ, ಸ್ತ್ರೀಶಕ್ತಿ ಸಂಘಗಳು ಹೆಚ್ಚು ಅಭಿವೃದ್ಧಿಯನ್ನು ಹೊಂದಿ ತಮ್ಮ ಕುಟುಂಬವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಳ್ಳಬೇಕು ಎಂದರು. ನಗರಸಭೆ ಮಾಜಿ ಅಧ್ಯಕ್ಷ ಪಿ. ದಯಾನಂದ್, ನಟರಾಜನ್, ನಗರಸಭೆ ಸದಸ್ಯರಾದ ಕುಲಶೇಖರ್, ಪಟಾಸ್ಸುರೇಶ್, ಆನಂದರಾಜ್, ಜೆಡಿಎಸ್ ಪಕ್ಷದ ನಗರಾಧ್ಯಕ್ಷ ಗೋಪಾಲನ್ ಸೇರಿದಂತೆ ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

