ನ್ಯೂ ಹೊರೈಜಾನ್ ಶಾಲೆಯಲ್ಲಿ ಅಣಕು ಅಧಿವೇಶನ
ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಸೌಲಭ್ಯ ಪಡೆಯುವುದರ ಮೇಲೆ ಬಯಲು ಸೀಮೆ ಜಿಲ್ಲೆಗಳ ಜನರ ಭವಿಷ್ಯ ಅಡಗಿದೆ. ಈ ಭಾಗಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರದಿಂದ ಆಗುತ್ತದೆಯೇ ಇಲ್ಲವೇ ಆಗುವುದಿಲ್ಲವೇ ಎನ್ನುವುದನ್ನು ಸ್ಪಷ್ಟವಾಗಿ ಹೇಳಿ.
ಹೀಗೆ ಪಟ್ಟು ಹಿಡಿದಿದ್ದು ನಗರದ ನ್ಯೂ ಹೊರೈಜಾನ್ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಅಣಕು ವಿಧಾನಸಭಾ ಅಧಿವೇಶನ.
ಬೆಂಗಳೂರಿನ ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ವಿಧಾನಸಭೆಯ ಸ್ಪೀಕರ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಪಾತ್ರದಲ್ಲಿ ಶಾಲಾ ಮಕ್ಕಳ ಸೇರಿದ್ದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಮರಳನ್ನು ಉಳಿಸಬೇಕಾಗಿದೆ. ಆದರೆ, ಹಣದ ಆಸೆಗಾಗಿ ಅಕ್ರಮವಾಗಿ ಮರಳನ್ನು ಲೂಟಿ ಮಾಡುತ್ತಿದ್ದರೂ ಸಹ ಕಡಿವಾಣ ಹಾಕಲು ಆಗುತ್ತಿಲ್ಲ. ಇದರಿಂದ ಮೊದಲೇ ನೀರಾವರಿ ಸಮಸ್ಯೆಯಿಂದ ತತ್ತರಿಸುತ್ತಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಇನ್ನೂ ಪಾತಾಳಕ್ಕೆ ಹೋಗುತ್ತಿದೆ.
ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಹೊಸ ಮರಳು ನೀತಿಯನ್ನು ಜಾರಿಗೆ ತರಬೇಕೆಂದು ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಪರಿಹಾರ ವಿತರಿಸಿ: ಇನ್ನೂ ಕಾಲು ಬಾಯಿ ಜ್ವರದಿಂದ ರಾಜ್ಯದಲ್ಲಿ ರಾಸುಗಳು ಮಾರಣ ಹೋಮವೇ ನಡೆಯುತ್ತಿದೆ.
ಹಾಲು ಉತ್ಪಾದನೆಯಿಂದ ಲಾಭವನ್ನು ಪಡೆಯಲು ಮುಂದಾಗಿದ್ದ ರೈತರು ರಾಸುಗಳ ಸಾವಿನಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಸುಗಳ ಮೇಲೆ ಮಾಡಿರುವ ಸಾಲವನ್ನು ತೀರಿಸುವ ಸಮಸ್ಯೆಯೂ ಎದುರಾಗಿದ್ದು ಕಾಲುಬಾಯಿ ಜ್ವರ ನಿಯಂತ್ರಣಕ್ಕಾಗಿ ತುರ್ತು ಲಸಿಕೆಗಳನ್ನು ಹಾಕಿಸಬೇಕು. ಜೊತೆಗೆ ಮೃತಪಟ್ಟ ರಾಸುಗಳಿಗೆ ಪರಿಹಾರವನ್ನು ವಿತರಿಸಬೇಕೆಂದು ಆಗ್ರಹಿಸಿದರು.
ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಬಿಸಿ ಚರ್ಚೆ ನಡೆಯಿತು. ಕಾರ್ಯಕ್ರಮದ ಮೂಲಕ ವಿಧಾನ ಪರಿಷತ್ತಿನಲ್ಲಿ ಆಡಳಿತ ಮಂಡಳಿ ರಚನೆ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕಾರ್ಯವೈಖರಿಯ ವಿಧಿ ವಿಧಾನಗಳನ್ನು ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಸೋಮೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕೆ.ಆರ್. ಗೀತಾ ಮತ್ತು ನಗರದ ನ್ಯೂಹೋರೈಜನ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅರುಣ್ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಂಜುನಾಥ, ಸೈಯದ್ ಬೇಗಂ, ಚಂದ್ರಶೇಖರ್, ಪಿ. ರಾಮಕೃಷ್ಣಪ್ಪ, ಶಾಲೆಯ ಮುಖ್ಯಸ್ಥ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

