ಅಂಗನವಾಡಿ ಫೇಡರೇಷನ್ ಪ್ರತಿಭಟನೆ
ಮುಳಬಾಗಲು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಫೇಡರೇಷನ್ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಮಿನಿವಿಧಾನ ಸೌಧ ಎದುರು ಪ್ರತಿಭಟನೆ ನಡೆಸಲಾಯಿತು.
12 ಸಾವಿರದ 500 ನೂರು ವೇತನ ನಿಗದಿ ಮಾಡಬೇಕು, ಕ್ರಮವಾಗಿ ಕಾರ್ಯಕರ್ತೆ ಹಾಗೂ ಸಹಾಯಕನ್ನು ಸಿ ಮತ್ತು ಡಿ ಗ್ರೂಪ್ ನೌಕರರಾಗಿ ಕಾಯಂಗೊಳಿಸುವುದು ಸೇರಿದಂತೆ ಒಟ್ಟು 12 ಬೇಡಿಕೆಗಳ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಮೊಂಡಪ್ಪ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಎನ್.ದೇವರಾಜ್ ಅವರಿಗೆ ಸಲ್ಲಿಸಿದರು.
ರಾಜ್ಯ ಅಂಗನವಾಡಿ ಫೆಡರೇಷನ್ ಅಧ್ಯಕ್ಷ ಎಂ. ಗೋಪಾಲ್, ಉಪಾಧ್ಯಕ್ಷೆ ಸಕ್ಕುಬಾಯಿ, ಪ್ರಧಾನ ಕಾರ್ಯದರ್ಶಿ ನಾರಾಯಣಮ್ಮ, ತಾಲೂಕು ಅಧ್ಯಕ್ಷೆ ಜಯಲಕ್ಷ್ನಿ, ಮುನಿಚೌಡಪ್ಪ, ಈಶ್ವರಮ್ಮ, ಲಲಿತಮ್ಮ, ಗಂಗಮ್ಮ, ನಾಗಭೂಷಣಮ್ಮ ಮುಂತಾದವರು ಭಾಗವಹಿಸಿದ್ದರು.
ಕನಿಷ್ಠ ವೇತನ, ಮೂಲಸೌಲಭ್ಯಕ್ಕೆ ಆಗ್ರಹ
ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು (ಐಸಿಡಿಎಸ್) ಖಾಸಗೀಕರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗುತ್ತಿರುವುದು ಸೂಕ್ತ ನಿರ್ಧಾರವಲ್ಲ. ಇದನ್ನು ಕೂಡಲೇ ಹಿಂಪಡೆಯಬೇಕೆಂದು ಸಿಪಿಐ(ಎಂ) ಪಕ್ಷದ ರಾಜ್ಯ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಆಗ್ರಹಿಸಿದರು.
ಅಂಗನವಾಡಿ ಕೇಂದ್ರದ ಖಾಸಗೀಕರಣವನ್ನು ವಿರೋಧಿಸಿ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತದ ಭವನದ ಮುಂದೆ ಧರಣಿ ಕುಳಿತ ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಬೀದಿಪಾಲು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಅನುಗುಣವಾಗಿ ಕನಿಷ್ಠ ವೇತನ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಹಿಂದಿನಿಂದಲೂ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಐಸಿಡಿಎಸ್ ಮಿಷನ್ ಪ್ರಕ್ರಿಯೆಯನ್ನು ಕೈ ಬಿಡಬೇಕು. ಕರ್ನಾಟಕದ 12 ಜಿಲ್ಲೆಗಳಲ್ಲಿ ತಕ್ಷಣ ಬಂದ ಅಪಾಯಕಾರಿ ಶಿಫಾರಸುಗಳನ್ನು ವಾಪಸ್ ಪಡೆಯಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಸಿಟಿಯು ಸಂಘದ ಮುಖಂಡರಾದ ಸಿದ್ಧಗಂಗಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಭಾಗ್ಯಲಕ್ಷ್ಮೀ, ವಿಜಯಭಾರತಿ, ಅಶ್ವತ್ಥಮ್ಮ, ಆಯಿಷಾ, ಲಕ್ಷ್ಮೀನರಸಮ್ಮ, ಲಕ್ಷ್ಮೀದೇವಮ್ಮ ಮುಂತಾದವರು ಭಾಗವಹಿಸಿದ್ದರು.
ಭೂ ಸುಧಾರಣೆ ಕಾಯ್ದೆ ವಿಧಿ ತಿದ್ದುಪಡಿಗೆ ವಿರೋಧ
ಕೋಲಾರ: ಕೃಷಿ ಭೂಮಿ ಖರೀದಿ ಮಾಡಲು ಕೃಷಿಯೇತರ ಆದಾಯದ ಮಿತಿ ಏರಿಕೆ ಮಾಡಿ ಭೂ ಸುಧಾರಣೆ ಕಾಯ್ದೆ ವಿಧಿ ತಿದ್ದುಪಡಿ ಮಾಡಲು ಹೊರಟಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಿರೋಧಿಸಿದೆ ಎಂದು ರಾಜ್ಯ ಕಾರ್ಯದರ್ಶಿ ಅಬ್ಬಣಿಶಿವಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಎಕರೆ ಕೃಷಿ ಭೂಮಿಯು ವಿವಿಧ ಉದ್ದೇಶಗಳಿಗೆ ಉಪಯೋಗಿಸುತ್ತಿದ್ದು, 1961ರ ವಿಧಿ 79 (ಎ) ಇದರ ಪ್ರಕಾರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಗೆ ಕೃಷಿಯೇತರ ಆದಾಯ ವರ್ಷಕ್ಕೆ 2 ಲಕ್ಷ ಮಿತಿಯಿದೆ. ಇದನ್ನು ತಿದ್ದುಪಡಿ ಮಾಡಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಲು ಹೊರಟಿರುವುದನ್ನು ಕಂಡರೆ ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರವು ಬಂಡವಾಳ ಶಾಹಿಗಳ ಪರ ಇರುವುದು ಕಂಡುಬರುತ್ತದೆ. ಈ ರೀತಿ ಕಾಯ್ದೆ ತಿದ್ದುಪಡಿ ಮಾಡುವುದರಿಂದ ಸಣ್ಣಪುಟ್ಟ ರೈತರು ಭೂಮಿ ಕಳೆದುಕೊಂಡು ಬಂಡವಾಳ ಶಾಹಿಗಳ ಗೇಟ್ಗಳಲ್ಲಿ ಕಾವಲುಗಾರರಾಗಿದ್ದು, ಈಗ ಹೆಚ್ಚಿನ ಭೂಮಿ ನಗದೀಕರಣಕ್ಕೆ ಕಾರ್ಖಾನೆಗಳಿಗೆ ಬಳಕೆಯಾಗುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ಉಳಿದಿರುವ ಕೃಷಿ ಭೂಮಿಯ ಸಹ ಬಂಡವಾಳಗಾರರ ಹಾಗೂ ರಿಯಲ್ ಎಸ್ಟೇಟ್ದಾರರ ವಶವಾಗಿ ಕೃಷಿಯು ಅವನತಿಗೆ ಹೋಗುವುದರಿಂದ ಮುಂದಿನ ದಿನಗಳಲ್ಲಿ ಆಹಾರದ ಭದ್ರತೆ ಕಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ತಿದ್ದುಪಡಿ ಮಾಡಲು ಹೊರಟಿರುವ ಕೃಷಿ ಭೂಮಿ ಖರೀದಿಯ ಕೃಷಿಯೇತರ ಆದಾಯಮಿತಿಯನ್ನು ಕಾಯ್ದೆಯನ್ನು ಕೂಡಲೇ ಕೈ ಬಿಡಬೇಕು ಹಾಗೇನಾದರೂ ತಿದ್ದುಪಡಿ ಮಾಡಿದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಶೇ.25ರ ಯೋಜನೆಯಡಿ ಕಂಬಳಿ ವಿತರಣೆ
ಮಾಲೂರು: ಪರಿಶಿಷ್ಟ ವರ್ಗ- ಪಂಗಡಗಳಿಗಾಗಿ ಸರ್ಕಾರ ಅನುಷ್ಠಾನಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಪ್ರಾಮಾಣಿಕ ಪ್ರಯತ್ನವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕು ಎಂದು ನೂಸಗೆರೆ ಪಂಚಾಯ್ತಿ ಅಧ್ಯಕ್ಷ ಭಾಗ್ಯಮ್ಮ ಮುನಿರಾಜು ಹೇಳಿದರು.
ತಾಲೂಕಿನ ನೂಸಗೆರೆ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶೇ.25ರ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಂಬಳಿ ವಿತರಿಸಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯೊಳಗೆ ಬರುವ ಎಲ್ಲ ಹನ್ನೊಂದು ಹಳ್ಳಿಗಳಲ್ಲಿಯೂ ಈಗಾಗಲೇ ಫಲಾನುಭವಿಗಳನ್ನು ಗುರ್ತಿಸಲಾಗಿದ್ದು, ಹಂತಹಂತವಾಗಿ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದರು.
ಪಂಚಾಯ್ತಿ ವ್ಯಾಪ್ತಿಯ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಬಗ್ಗೆ ಶಾಸಕರೊಡನೆ ಮಾತನಾಡಿದ್ದು, ಸ್ಪಂದಿಸಿದ್ದಾರೆ. ಸಮಸ್ಯೆ ಶಾಶ್ವತವಾಗಿ ಬಗೆಹರಿಯುವ ವರೆಗೂ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ನೂಸಗೆರೆ ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ವೆಂಕಟೇಶಪ್ಪ, ಸಿ.ಎಂ. ನಾರಾಯಣಸ್ವಾಮಿ, ಮುನಿರಾಜು, ಮಾದನಹಟ್ಟಿ ಕುಮಾರ್, ಬಿಲ್ ಕಲೆಕ್ಟರ್ ನಾಗೇಶ್, ಕಾಡದೇನಹಳ್ಳಿ ವೆಂಕಟೇಶಪ್ಪ, ವೆಂಕಟಗಿರಿಯಪ್ಪ,ಅಶ್ವತ್ಥಪ್ಪ, ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಇದ್ದರು.
ನಾಳೆ ಬೆಂಗಳೂರಿನಲ್ಲಿ ಸಮಾವೇಶ
ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಬೆಂಗಳೂರಿನಲ್ಲಿ ಜ.12ರಂದು ಒಕ್ಕೂಟದ ದಶಮಾನೋತ್ಸವ ಹಾಗೂ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಮುಖಂಡ ಎನ್. ವೆಂಕಟೇಶಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಡನಾಡಿದ ಅವರು, ಬೆಂಗಳೂರಿನ ಅಂತಾರಾಷ್ಚ್ರೀಯ ವಸ್ತುಪ್ರದರ್ಶನ ಜಾಗದ ಎದುರು ಮೈದಾನದಲ್ಲಿ ಜ.12ರಂದು ಬೆಳಿಗ್ಗೆ 11 ಗಂಟೆಗೆ ಉದ್ಫಾಟನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಂಖ್ಯೆಯಲ್ಲಿ ಹಿಂದುಳಿದ ಜಾತಿಗಳ ಸಮುದಾಯದವರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಹಿಂದುಳಿದ ಜಾತಿಗಳ ಮುಖಂಡರಾದ ಮುಖಂಡರಾದ ಟಿ.ಎಂ. ಶ್ರೀನಿವಾಸ್, ಅಯ್ಯಗಾರಿ ಶ್ರೀನಿವಾಸ್, ಟೆ.ಎಸ್. ರಮೇಶ್, ದೇವರಾಜ್, ಎಂ. ವೆಂಕಟೇಶ್, ಜಿಪಂ ಮಾಜಿ ಸದಸ್ಯ ರಾಜಗೋಪಾಲ್, ಶ್ರೀನಿವಾಸ್,ನಾಗರಾಜ್, ಸೋಮಣ್ಣ, ತೇಜೋಮೂರ್ತಿ, ಶ್ರೀರಾಮಪ್ಪ, ರಾಮಚಂದ್ರಪ್ಪ, ಶಂಕರ್ ಮೀಸೆ ಶಂಕರಪ್ಪ, ತೊರಡಿ ಶಿವಣ್ಣ, ನರಸಿಂಹರೆಡ್ಡಿ, ಕೆ. ಕೋದಂಡರಾಮ್, ದೇವರಾಯಸಮುದ್ರಂ ರಾಜು, ನಲ್ಲಂಡಹಳ್ಳಿ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಗೌಡರಹಳ್ಳಿ ಶಂಕರಪ್ಪ,ನಾಗಭೂಷಣ್ ಮುಂತಾದವರು ಭಾಗವಹಿಸಿದ್ದರು.
'ಹಿರಿಯರ ಆದರ್ಶ ಪಾಲಿಸಿ'
ಮುಳಬಾಗಲು: ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಶ್ರೀ ಪ್ರಸನ್ನ ಚೌಡೇಶ್ವರಿ ಪ್ರೌಢಶೌಲೆ ಆಡಳಿತ ಮಂಡಳಿ ಅಧ್ಯಕ್ಷ ಎಂ. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಕೊಲದೇವಿ ಗ್ರಾಮದ ಶ್ರೀ ಪ್ರಸನ್ನ ಚೌಡೇಶ್ವರಿ ಪ್ರೌಢಶೌಲೆ 8ನೇ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಂಡಿಕಲ್ ಶ್ರೀನಿವಾಸಗೌಡ ಮಾತನಾಡಿ, ಮಕ್ಕಳು ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆಯನ್ನು ವ್ಯಾಸಂಗಮಾಡಿ ಅವರ ಕನಸಿನ ನವ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಮುನಿಯಪ್ಪ, ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ, ಗ್ರಾಪಂ ಸದಸ್ಯ ಹನುಮಂತು, ಅಗರಂ ವೆಂಕಟೇಶ್, ಕೆ.ಎಸ್. ಚೌಡಪ್ಪ, ಎಂ.ಸಿ. ಶ್ರೀನಿವಾಸ್, ಎಂ. ಸುಧೀಂದ್ರ, ಆರ್.ನಾಗರಾಜ್ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

