ಬೌ.. ಬೌ... ಹಾವಳಿ ತಡೆಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಮಿತಿ ಮೀರಿದ ನಾಯಿಗಳ ಕಾಟದ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸುವ ಕಾರ್ಯದಲ್ಲಿ ನಗರಸಭೆ ನಿರತವಾಗಿದೆ.
ಎಲ್ಲೆಡೆಯಂತೆ ಚಿಕ್ಕಬಳ್ಳಾಪುರದಲ್ಲೂ ನಾಯಿಗಳಿಂದಾಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಯಾವುದೇ ಗಲ್ಲಿಗೆ ಹೋದರೂ ಸಹ ಗುಂಪು ಗುಂಪಾಗಿ ನಾಯಿಗಳು ರಸ್ತೆಯಲ್ಲಿ ಕಂಡು ಬರುತ್ತವೆ. ಯಾರಾದರೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಯರ್ರಾಬಿರ್ರಿ ದಾಳಿ ನಡೆಸುತ್ತವೆ. ಚಿಕ್ಕ ಮಕ್ಕಳಂತೂ ರಸ್ತೆಯಲ್ಲಿ ಓಡಾಡಲು ಭಯ ಬೀಳುತ್ತಿದ್ದು ಅನೇಕ ಪ್ರಕರಣಗಳಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯ ಪಾಲಾದ ಘಟನೆಗಳು ಬಹಳಷ್ಟಿವೆ. ವಾರಕ್ಕೆ 20 ಜನರಾದರೂ ನಾಯಿ ಕಡಿತಕ್ಕೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಬರುತ್ತಾರೆ. ದ್ವಿಚಕ್ರ ವಾಹನಗಳ ಸವಾರರ ಪಾಡು ಹೇಳ ತೀರದಾಗಿದೆ. ನಾಯಿಗಳು ವಾಹನವನ್ನು ಹಿಂಬಾಲಿಸಿಕೊಂಡು ಹೋಗುವುದು, ಸವಾರರನ್ನು ಕಚ್ಚಲು ಮುಂದಾಗಿ ಅನೇಕರ ಜೀವವನ್ನು ಹಿಂಡಿ ಹಿಂಪೆ ಮಾಡಿದೆ. ಈ ನಡುವೆ ನಾಯಿಗಳ ಹಾವಳಿಯನ್ನು ತಪ್ಪಿಸುವಂತೆ ಸಾರ್ವಜನಿಕರು ಸ್ಥಳೀಯ ನಗರಸಭೆಯನ್ನು ಒತ್ತಾಯಿಸಿಕೊಂಡು ಬಂದಿದ್ದು ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆಯಲ್ಲೂ ಗಮನ ಸೆಳೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ 2009ರಲ್ಲಿ 500 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದ ನಗರಸಭೆ ಇದೀಗ ಶುಕ್ರವಾರದಿಂದ ಮತ್ತೆ ಕಾರ್ಯವನ್ನು ಕೈಗೊಂಡಿದೆ. ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿಸಲು ಬೆಂಗಳೂರಿನ ಸರ್ವೋದಯ ಸೇವಾ ಸಂಸ್ಥೆಯು 2.70 ಲಕ್ಷ ಟೆಂಡರ್ ಪಡೆದುಕೊಂಡಿದೆ. ಪ್ರಸ್ತುತ 300 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ದಿನಕ್ಕೆ 40-45 ನಾಯಿಗಳನ್ನು ಹಿಡಿಯಲಾಗುತ್ತದೆ. ಈ ಕಾರ್ಯ 10 ದಿನಗಳ ಕಾಲ ನಡೆಯಲಿದೆ. ಒಂದು ಗಂಡು ನಾಯಿಗೆ 850 ಮತ್ತು ಒಂದು ಹೆಣ್ಣು ನಾಯಿಗೆ 900 ಶಸ್ತ್ರಚಿಕಿತ್ಸೆ ಮಾಡಿಸಲು ಸಂಸ್ಥೆಗೆ ನೀಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಬೌ ಬೌ ದಾಳಿ: ಶಸ್ತ್ರಚಿಕಿತ್ಸೆಗೆ ನಾಯಿಗಳನ್ನು ಹಿಡಿಯುವ ಕಾರ್ಯವು ನಗರದ ಬಾಪೂಜಿ ನಗರದಿಂದ ಪ್ರಾರಂಭವಾಯಿತು. ಸರ್ವೋದಯ ಸೇವಾ ಸಂಸ್ಥೆಯ 6 ಮಂದಿ ತರಬೇತಿ ಸಿಬ್ಬಂದಿ ಬಲೆಗಳನ್ನು ಹಿಡಿದುಕೊಂಡು ಗಲ್ಲಿ ಗಲ್ಲಿಯಲ್ಲಿ ಕಂಡು ಬಂದ ನಾಯಿಗಳನ್ನು ಬಲೆಗೆ ಕೆಡವಿಕೊಂಡರು. ಮತ್ತೊಂದೆಡೆ ಒಂದು ನಾಯಿಯನ್ನು ಹಿಡಿಯುತ್ತಿದ್ದಂತೆ ಗಲ್ಲಿಯಲ್ಲಿನ ಇತರೆ ನಾಯಿಗಳು ಸಹ ಬೊಗಳಿಕೊಂಡು ಬಂದು ಕಚ್ಚಲು ಮೈ ಮೇಲೆ ಮುಗಿ ಬೀಳುತ್ತಿದ್ದವು. ಕೆಲ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನಾಯಿ ಹಿಡಿಯುವವರು ನೆಲಕ್ಕೆ ಬಿದ್ದಿದ್ದು ಸಹ ನಡೆಯಿತು. ಮಧ್ಯಾಹ್ನ 3 ಗಂಟೆಯಿಂದ ನಡೆದ ಮೊದಲ ದಿನದ ಕಾರ್ಯಾಚರಣೆಯಲ್ಲಿ ಸುಮಾರು 24 ನಾಯಿಗಳನ್ನು ಹಿಡಿದುಕೊಂಡಿದ್ದು ಗಂಗನಮಿದ್ದೆ ಬಳಿ ಇರುವ ನಗರಸಭೆಯ ಪಂಪ್ಹೌಸ್ ಕಟ್ಟಡದಲ್ಲಿ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದರು. ಸಂತಾನಕ್ಕೆ ಕಾರಣವಾಗುವ ಅಂಗವನ್ನೇ ತೆಗೆದು ಹಾಕುವುದರಿಂದ ಮತ್ತೆ ನಾಯಿ ಸಂತತಿ ಹೆಚ್ಚಳವಾಗುವುದಿಲ್ಲ. ಅಲ್ಲದೇ ಶಸ್ತ್ರಚಿಕಿತ್ಸೆಗೆ ಗುರಿಯಾದ ನಾಯಿ ಬಲ ಕಿವಿಗೆ ವಿ ಆಕಾರದ ಗುರುತು ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದರು.
ಜನರಿಗೆ ಸಂತಸ: ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ನಾಯಿಗಳನ್ನು ಹಿಡಿಯುವ ಕೆಲಸವನ್ನು ನಗರಸಭೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಜನರು ಸಂತಸ ವ್ಯಕ್ತಪಡಿಸಿದರು. ನಾಯಿಗಳ ಕಾಟದಿಂದ ರಾತ್ರಿ ಹೊತ್ತು ನಿದ್ದೆ ಬರುವುದಿಲ್ಲ. ಅಲ್ಲದೇ ಸಿಕ್ಕ ಸಿಕ್ಕವರಿಗೆ ನಾಯಿಗಳು ಕಚ್ಚುತ್ತಿದ್ದು ಒಂದು ರೀತಿಯಲ್ಲಿ ಜನರು ಭಯದಲ್ಲಿರಬೇಕಾಗಿದೆ. ಈ ಕಾಟವನ್ನು ತಪ್ಪಿಸಲು ಅಧಿಕಾರಿಗಳು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

