ಅಂಡರ್ಪಾಸ್ ಕಾಮಗಾರಿಗೆ ರೈತರ ಅಡ್ಡಿ
ಕ.ಪ್ರ.ವಾರ್ತೆ , ಕೋಲಾರ , ಜ.11
ರೈತರ ಅನುಕೂಲಕ್ಕೆ ಸರ್ವೀಸ್ ರಸ್ತೆ ನಿರ್ಮಿಸುವವರೆಗೆ ಅಂಡರ್ ಪಾಸ್ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಕೋಲಾರ- ಬಂಗಾರಪೇಟೆ ರಸ್ತೆಯ ಚಿಕ್ಕ ಅಂಕಂಡಹಳ್ಳಿ ಬಳಿ ರೇಲ್ವೆ ಅಂಡರ್ ಪಾಸ್ ಕಾಮಗಾರಿಯನ್ನು ತಡೆದ ಪ್ರಸಂಗ ಶನಿವಾರ ನಡೆಯಿತು.
ಬೀರಂಡಹಳ್ಳಿ, ಚಿಕ್ಕ ಅಂಕಂಡಹಳ್ಳಿ, ಬಾವರಹಳ್ಳಿ ಮೊದಲಾದ ರೇಲ್ವೆ ಗೇಟ್ಗಳ ಬಳಿ ಹಾಲಿ ಇದ್ದ ಗೇಟ್ಗಳನ್ನು ಬಂದ್ ಮಾಡಿ ಲಾರಿ, ಬಸ್ಸು, ಆಂಬುಲೆನ್ಸ್, ಬೋರ್ವೆಲ್ ಕೊರೆಯುವ ಯಂತ್ರದ ವಾಹನ ಸೇರಿದಂತೆ ಅನೇಕ ದೊಡ್ಡ ವಾಹನಗಳು ಸಂಚರಿಸಲು ಯೋಗ್ಯವಲ್ಲದ ಜಾಗದಲ್ಲಿ ಚಿಕ್ಕ ಚಿಕ್ಕ ಅಂಡರ್ಪಾಸ್ಗಳನ್ನು ನಿರ್ಮಿಸುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಮಾತು ತಪ್ಪಿದ ಅಧಿಕಾರಿಗಳು: ಸುಮಾರು 6 ತಿಂಗಳ ಹಿಂದೆ ಬೀರಂಡಹಳ್ಳಿ ಗೇಟ್ ಬಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಿದಾಗ ಸರ್ವೀಸ್ ರಸ್ತೆ ಆದ ನಂತರ ಜನರಿಗೆ ಓಡಾಡಲು ಅನುಕೂಲ ಮಾಡಿ ಕಾಮಗಾರಿಯನ್ನು ಕೈಗೊಳ್ಳುವಂತೆ ಪ್ರತಿಭಟಿಸಿದಾಗ ಸ್ವಲ್ಪ ದಿನಗಳಲ್ಲಿ ಸರ್ವೀಸ್ ರಸ್ತೆ ಮಾಡಿಕೊಡುವ ಭರವಸೆಯನ್ನು ನೀಡಿದ್ದ ರೇಲ್ವೆ ಇಲಾಖೆಯ ಅಧಿಕಾರಿಗಳು ಮಾತು ತಪ್ಪಿದ್ದಾರೆಂದು ದೂರಿದರು.
ಬಂಗಾರಪೇಟೆ ಹೊರವಲಯದಿಂದ ಸ್ವಲ್ಪ ದೂರ ಸರ್ವೀಸ್ ರಸ್ತೆ ಕಾಮಗಾರಿ ಮಾಡಿ ನಂತರ ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇತ್ತೀಚೆಗೆ ಸುಮಾರು 1 ತಿಂಗಳ ಹಿಂದೆ ಚಿಕ್ಕ ಅಂಕಂಡಹಳ್ಳಿ ರೇಲ್ವೆ ಗೇಟನ್ನು ಬಂದ್ ಮಾಡಿ ಕಾಮಗಾರಿ ಆರಂಭಿಸಿದಾಗಲೂ ಪ್ರತಿಭಟನೆ ನಡೆಸಲಾಗಿತ್ತು. ಅಂಡರ್ ಪಾಸನ್ನು ದೊಡ್ಡದಾಗಿ ನಿರ್ಮಿಸಿ ಬೇಗನೆ ಜನರ ಉಪಯೋಗಕ್ಕೆ ನೀಡಲಾಗುವುದು ಎಂದು ಹೇಳಿದ್ದ ಅಧಿಕಾರಿಗಳು ಭರವಸೆ ಈಡೇರಿಸಿಲ್ಲವೆಂದರು.
ಸುತ್ತಮುತ್ತಲ ಹಳ್ಳಿಗಳಿಗೆ ತೊಂದರೆ: ಚಿಕ್ಕದಾಗಿ ಅಂಡರ್ ಪಾಸ್ ನಿರ್ಮಿಸಿರುಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಜೊತೆಗೆ ಅಂಡರ್ ಪಾಸ್ ಕಾಮಗಾರಿ ಆರಂಭ ಆದಾಗಿನಿಂದ ರೇಲ್ವೆ ಗೇಟ್ ಮುಚ್ಚಿರುವುದರಿಂದ ಬಸ್ಸು, ಶಾಲಾ ವಾಹನ, ಲಾರಿ, ಮೊದಲಾದ ದೊಡ್ಡ ವಾಹನಗಳು ಈ ಅಂಡರ್ ಪಾಸ್ಗಳಲ್ಲಿ ಬರಲು ಆಗುತ್ತಿಲ್ಲವಾದ್ದರಿಂದ ಸುತ್ತಮುತ್ತಲ 10 ಹಳ್ಳಿಗಳ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿದರು.
ಸಾರ್ವಜನಿಕರಿಗೆ ಅನುಕೂಲವಾಗುವ ತನಕ ಕಾಮಗಾರಿ ಮುಂದುವರೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಸರ್ವೀಸ್ ರಸ್ತೆ ನಿರ್ಮಾಣವಾಗುವ ತನಕ ಎಲ್ಲ ಗೇಟ್ಗಳನ್ನು ತೆರೆಯಬೇಕು ಮತ್ತು ಸರ್ವೀಸ್ ರಸ್ತೆ ನಿರ್ಮಾಣ ಮುಗಿದ ನಂತರವೇ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಬೇಕು ಅಲ್ಲಿಯ ತನಕ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ವಿಷಯ ತಿಳಿದ ರೇಲ್ವೆ ಅಧಿಕಾರಿಗಳಾದ ವೀರಭದ್ರಪ್ಪ ಮತ್ತು ಜ್ಯೋತಿಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಮುಂದುವರೆಯಲು ಬಿಡಿ ಸರ್ವೀಸ್ ರಸ್ತೆ ಅನುಮೋದನೆ ಗೊಂಡ ನಂತರ ಮಾಡಿಕೊಡುತ್ತೇವೆ ಎಂದು ಮಾಡಿದ ಮನವಿಗೆ ಒಪ್ಪದ ಪ್ರತಿಭಟನಾಕಾರರು ಸರ್ವೀಸ್ ರಸ್ತೆ ಮೊದಲು ಮುಗಿಸಿ ಜನರು ಓಡಾಡಲು ಅನುಕೂಲ ಮಾಡಿದ ಆನಂತರ ಅಂಡರ್ ಪಾಸ್ ಕಾಮಗಾರಿ ಮುಂದುವರೆಸಿ ಎಂದು ಪಟ್ಟು ಹಿಡಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಬಳಿ ಮಾತನಾಡಿ, ಕ್ರಮ ಜರುಗಿಸುವುದಾಗಿ ಹೇಳಿ ಸ್ಥಳದಿಂದ ನಿರ್ಗಮಿಸಿದರು.
ವಕೀಲ ನಂಜುಂಡಪ್ಪ, ಗ್ರಾಮ ಪಂಚಾಯಿತಿ ಮುಂಖಡ ಚಂದ್ರಪ್ಪಶೆಟ್ಟಿ, ಮಾಜಿ ಅಧ್ಯಕ್ಷ ಚಿಕ್ಕಅಂಕಂಡಹಳ್ಳಿ ನಾಗರಾಜ್ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

