ಕೋಲಾರ

ಬೇಡಿಕೆ ಈಡೇರಿಕೆಗೆ ಸಫಾಯಿ ಕರ್ಮಚಾರಿಗಳ ಒತ್ತಾಯ

Published On :

ಕೆಜಿಎಫ್: ಸಫಾಯಿ ಕರ್ಮಚಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಗರಸಭೆ ಆಯುಕ್ತರು ಈವರೆಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ ಎಂದು ಆರೋಪಿಸಿ ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಅಧ್ಯಕ್ಷ ಡಿ. ನಾಗರಾಜ್ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಾಗರಾಜ್ ಸಫಾಯಿ ಕರ್ಮಚಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರಸಭಾ ಪೌರಾಯುಕ್ತ ವಿ. ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಇಡೀ ನಗರದ ನೈರ್ಮಲ್ಯ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಮತ್ತು ಅವರ ಕುಟುಂಬದ ಅಭಿವೃದ್ಧಿಗೆ ನಗರಸಭೆ ಪೌರಾಯುಕ್ತರು ಮುಂದಾಗದೆ ಅವರನ್ನು ಕಡೆಗಣಿಸಿದ್ದು, ಸರ್ಕಾರ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ಮ್ಯಾನುವೆಲ್ ಸ್ಕಾವೆಂಜರುಗಳ ಸಮೀಕ್ಷೆ ಪಟ್ಟಿಯಲ್ಲಿ ದೋಷಪೂರಿತವಾಗಿದ್ದು ಪಟ್ಟಿಯಲ್ಲಿ ಬಿಟ್ಟಿರುವ ಫಲಾನಭವಿಗಳ ಹೆಸರುಗಳನ್ನು ಈ ಕೂಡಲೇ ಸೇರಿಸಬೇಕು, 60 ವರ್ಷಗಳಿಂದ ನಗರದಲ್ಲಿ ವಾಸವಿರುವ ಸಫಾಯಿ ಕರ್ಮಚಾರಿಗಳ ಮನೆಗಳನ್ನು ಅವರಿಗೆ ಸ್ವಂತ ಮಾಡಬೇಕು, ಮತ್ತು ಅವರ ಕುಟುಂಬಕ್ಕೆ ಪುನರ್ವಸತಿಗೆ ಶೇ.22.75 ಅನುದಾನದಲ್ಲಿ ಪ್ರಾಂಭವಾದ ಮನೆ ನಿರ್ಮಾಣ ಕಾರ್ಯವು ಕಳೆದ 14 ವರ್ಷಗಳಿಂದ ಸ್ಥಗಿತಗೊಂಡಿದ್ದು, ಕೂಡಲೇ ಮನೆ ನಿರ್ಮಾಣ ಕೆಲಸವನ್ನು ಪ್ರಾರಂಭಿಸಬೇಕು ಎಂದರು.
ಕೋಲಾರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 140 ಮಂದಿ ಪೌರಕಾರ್ಮಿಕರನ್ನು ಗುತ್ತಿಗೆ ಆದಾರದ ಮೇಲೆ ಕೆಲಸವನ್ನು ನೀಡುವಂತೆ ಆದೇಶಿಸಿದ್ದರೂ ಅವರಲ್ಲಿ 60 ಮಂದಿಯನ್ನು ಮಾತ್ರ ನೇಮಕ ಮಾಡಲಾಗಿದ್ದು, ಉಳಿದಂತೆ 80 ಕಾರ್ಮಿಕರನ್ನು ಕೈ ಬಿಟ್ಟಿರುವ ನಗರಸಭೆ ಅವರನ್ನು ಸಹ ನೇಮಕಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ವಿಮೆ ಜಾರಿಗೊಳಿಸಿ: ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರಿಗೆ ವೈಯುಕ್ತಿಕ ಸಂರಕ್ಷಣ ವಸ್ತುವನ್ನು ನೀಡಬೇಕು ಹಾಗೂ ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ನಗರಸಭಾ ಅಧಿಕಾರಿ ಜಯರಾಮ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಮುಖಂಡರಾದ ಮಣಿಮಾಲಾ, ಸಿ.ಗಾಂಧಿ, ಏಸಯ್ಯ, ರವಿಕುಮಾರ್, ಎಜ್ರಾ, ರಾಮು, ವಿಜಯ್‌ಕುಮಾರ್, ರವಿ, ಸುಬ್ರಮಣಿ, ರಾಜೇಂದ್ರ, ಮುರಳಿ, ಧನಶೇಖರ್, ಜಯರಾಜ್, ದಾಸ್, ಚಿರಂಜೀವಿ, ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.