ಸಾಮಾಜಿಕ ಭದ್ರತೆ ಕಲ್ಪಿಸಲು ಆಗ್ರಹ
ಬಾಗೇಪಲ್ಲಿ: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ರಾಜ್ಯಾಧ್ಯಕ್ಷ ಕೆ. ಮಹಾಂತೇಶ್ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಧಳಿ ಮುಂಭಾಗದಲ್ಲಿ ಬಾಗೇಪಲ್ಲಿ ಶಾಖೆ ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ಸಿ.ಐ.ಟಿ.ಯು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಮಾಲಿಗಳಿಗೆ ಸರ್ಕಾರದ ವತಿಯಿಂದ ಪರವಾನಗಿ ಹಾಗೂ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರು,ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿನ ನೌಕರರು ಹಾಗೂ ವ್ಯಾಪಾರಸ್ಥರು ಈ ಸಮಾಜಕ್ಕೆ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಈ ಸಮಾಜಕ್ಕೆ ಹಮಾಲಿಗಳೂ ಸಹ ಅಷ್ಟೇ ಮುಖ್ಯ. ಆದರೆ, ಸಮಾಜದ ದೃಷ್ಟಿಯಲ್ಲಿ ಹಮಾಲಿ ಎಂದರೆ ಯಾವುದೇ ಕೆಲಸಕ್ಕೆ ಬಾರದ ವ್ಯಕ್ತಿಯೆಂದು ಹೀನಾಯವಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣ ಗೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಹಮಾಲಿ ಕಾರ್ಮಿಕರ ದೇಹದಲ್ಲಿ ಶಕ್ತಿ, ಬೆನ್ನು ಮತ್ತು ಸೊಂಟ ಗಟ್ಟಿ ಇದ್ದಾಗ ಎಲ್ಲರೂ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ, ಅವರ ದೇಹದಲ್ಲಿ ಶಕ್ತಿ ನಶಿಸಿ ಹೋದಾಗ ಅವರನ್ನು ಕಬ್ಬಿನ ರಸವನ್ನು ಹೀರಿ ಕಬ್ಬಿನ ಸಿಪ್ಪೆಯನ್ನು ಬಿಸಾಡುವಂತೆ ನೋಡುವುದರಿಂದ ಭಿಕ್ಷೆ ಬೇಡುವಂತಹ ದುಸ್ಥಿತಿ ನಿರ್ಮಾಣವಾಗುತ್ತದೆ ಎಂದ ಅವರು, ನಮ್ಮ ರಾಜ್ಯದಲ್ಲಿ ಹಮಾಲಿ ಕಾರ್ಮಿಕರನ್ನು 4 ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಸುಮಾರು 144 ಮುಖ್ಯ ಮಾರುಕಟ್ಟೆಗಳು, 385 ಉಪ ಮಾರುಕಟ್ಟೆಗಳಿವೆ. ನಗರ ಮತ್ತು ಪಟ್ಟಣಗಳ ವಿವಿಧ ರೀತಿಯ ಅಂಗಡಿ ಮತ್ತು ಗೋಡೌನ್ಗಳು ಸೇರಿದಂತೆ ಈ ಮಾರುಕಟ್ಟೆಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೂಟೆ ಹೊರುವಂತಹ ಹಮಾಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಯಾವುದೇ ರೀತಿಯ ಭದ್ರತೆಯನ್ನು ಒದಗಿಸಿಲ್ಲವೆಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 1ಲಕ್ಷ15ಸಾವಿರ ಕೋಟಿ ರು. ಮತ್ತು ಕೇಂದ್ರದಲ್ಲಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ 15 ಲಕ್ಷ ಸಾವಿರ ಕೋಟಿ ರು. ಗಳ ಬಜೆಟ್ ಮಂಡಿಸಿದ್ದಾರೆ. ಆದರೆ, ಅಸಂಘಟಿತ ಹಾಗೂ ಹಮಾಲಿ ಕಾರ್ಮಿಕರಿಗೆ ಈ ಬಜೆಟ್ ಗಳಲ್ಲಿ ಪಾಲು ಏಕೆ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಅವರು, ಅಸಂಘಟಿತ ಕಾರ್ಮಿಕರು ತೆರಿಗೆ ನೀಡುತ್ತಿಲ್ಲವೆ. ನಮಗೆ ಕುಡಿಯುವ ನೀರು, ರೇಷನ್ ಕಾರ್ಡ್, ಮನೆ ಮುಂತಾದ ಸೌಲಭ್ಯಗಳನ್ನು ಪಡೆಯುವಂತಹ ಹಕ್ಕು ನಮಗಿಲ್ಲವೇ ಎಂದು ಪ್ರಶ್ನಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಪರವಾನಗಿ ನೀಡಿ, ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು, ಅವರ ಮಕ್ಕಳಿಗೆ ವಿದ್ಯಾಭ್ಯಾಸ, ಆರೋಗ್ಯ, ವಸತಿ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು, ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಹಮಾಲಿಗಳಿಗೆ ಸ್ಥಾನ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಿಐಟಿಯು ತಾಲೂಕು ಸಮಿತಿ ಹಾಗೂ ಹಮಾಲಿ ಸಂಘದ ಗೌರವಾಧ್ಯಕ್ಷ ಬಿ. ಆಂಜನೇಯರೆಡ್ಡಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಬಿ. ಸಾವಿತ್ರಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಕಾರ್ಯದರ್ಶಿ ಮುಸ್ತಾಫ್, ತಾ. ಸಮಿತಿ ಅಧ್ಯಕ್ಷ ವೈ.ಆರ್. ವೆಂಕಟೇಶ್ ಬಾಬು, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್, ಕೃಷಿ ಉತ್ಪನ್ನ ಮಾರಾಟ ಸಮಿತಿ ಕಾರ್ಯದರ್ಶಿ ರಾಜಣ್ಣ, ಕಾರ್ಮಿಕ ಇಲಾಖೆಯ ನಿರೀಕ್ಷಕ ಎಲ್. ಸೋಮಶೇಖರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುನಿರೆಡ್ಡಿ, ಪುರಸಭೆಯ ಸದಸ್ಯ ಬಿ.ಎನ್. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

