ಗ್ರಾಹಕರಿಗೆ ವಂಚನೆ: ಕ್ರಮಕ್ಕೆ ಒತ್ತಾಯ
ಕೋಲಾರ: ಜಿಲ್ಲೆಯ ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಕೊಂಡ ಸರಕುಗಳಿಗೆ ರಸೀದಿ ನೀಡದೇ ವಂಚಿಸುತ್ತಿರುವುದರಿಂದ ಕೂಡಲೇ ಎಲ್ಲಾ ಅಂಗಡಿಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಯುನೈಟೆಡ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ಒತ್ತಾಯಿಸಿದೆ.
ವಕೀಲ ಹಾಗೂ ಫೌಂಡೇಷನ್ ಅಧ್ಯಕ್ಷ ನರೇಂದ್ರಬಾಬು ನೇತೃತ್ವದಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯ ಹೆಡ್ ಮುನ್ಷಿ ಕೃಷ್ಣೇಗೌಡರಿಗೆ ಮನವಿ ಸಲ್ಲಿಸಿ ಪ್ರತಿ ಸರಕಿಗೂ ಗ್ರಾಹಕರಿಗೆ ನಿಗಧಿತ ನಮೂನೆಯಲ್ಲಿ ಮೂಲ ರಸೀದಿ ನೀಡಬೇಕಾಗಿರುವುದು ಪ್ರತಿಯೊಬ್ಬ ಅಂಗಡಿ ಮಾಲೀಕರ ಕರ್ತವ್ಯವಾಗಿದ್ದರೂ ರಸೀದಿ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.
ಸರಕಿನ ವರ್ಣನೆ, ಸರಕಿನ ಗಾತ್ರ, ತೂಕ, ಅಳತೆ, ಇದರ ಮಾಡೆಲ್ ವಿವರ, ಇದರ ಮೌಲ್ಯ ಕುರಿತು ವಿವರ ಇರಬೇಕು. ಸರಕಿನ ಕಳಪೆ ಗುಣಮಟ್ಟ, ಅಳತೆ-ತೂಕದಲ್ಲಿನ ವಂಚನೆ, ಅನಧಿಕೃತ ಕಂಪನಿಗಳ ಖೊಟ್ಟಿ ಸರಕಿನ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ರಸೀದಿಗಳು ಅತ್ಯಗತ್ಯ. ರಸೀದಿ ನೀಡದೇ ಇರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಸಾಕಷ್ಟು ಅಂಗಡಿಗಳಲ್ಲಿ ಖೊಟ್ಟಿ, ಅನಧಿಕೃತ ಕಂಪನಿಗಳ ಸರಕುಗಳನ್ನು ರಾಜಾರೋಷವಾಗಿ ಮಾರುತ್ತಿದ್ದಾರೆ. ಗ್ರಾಹಕರು ಇಂಥವುಗಳನ್ನು ಕೊಂಡು ಮೋಸ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಜಿಲ್ಲೆಯ ಗ್ರಾಹಕರ ವೇದಿಕೆಯ ಮೊರೆ ಹೋಗದಿರುವ ಪರಿಣಾಮ ಇಂತಹ ಅಕ್ರಮ ವ್ಯವಹಾರ-ವ್ಯಾಪಾರ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತಿಯೊಂದು ಅಂಗಡಿಗಳ ಮೇಲೆಯೂ ನಿರಂತರ ದಾಳಿ ನಡೆಸುವುದು ಅತ್ಯಗತ್ಯ ಎಂದು ಅವರು ಆಗ್ರಹಿಸಿದರು.
ಇಂತಹ ಮಾರಾಟ, ವಂಚನೆ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಣ್ಣೆದುರೇ ಅಕ್ರಮ, ವಂಚನೆ ನಡೆದಿದ್ದರೂ ಜಾಣ ಕುರುಡರಾಗಿದ್ದಾರೆ. ಕುಡಿಯುವ ನೀರಿನ ಪ್ಯಾಕೆಟ್ನಿಂದ ಹಿಡಿದು, ಮೊಬೈಲ್, ಫ್ಯಾನ್, ಮೋಟಾರು ಪಂಪುಗಳೂ ಖೊಟ್ಟಿ ಅನಧಿಕೃತ ಕಂಪನಿಗಳ ಸರಕುಗಳೇ ಆಗಿವೆ. ಪರಿಸರ ಸ್ನೇಹಿ ಕಂಟೆಂಟ್ಸ್ ಬಳಸದ ಪರಿಣಾಮ ಇವುಗಳ ಬಳಕೆಯಿಂದ ದುಷ್ಪರಿಣಾಮಗಳು ಹೆಚ್ಚಾಗುತ್ತಿವೆ. ಹೀಗಾಗಿ ಯುನೈಟೆಡ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ವತಿಯಿಂದ ಗ್ರಾಹಕರ ಹಕ್ಕುಗಳ ಬಗ್ಗೆ ಶಾಲಾ-ಕಾಲೇಜು, ಕಚೇರಿಗಳಲ್ಲಿ, ಗ್ರಾಮ ಮಟ್ಟಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯೋಜಿಸಿದೆ. ಆಸಕ್ತರು 9480421145, 9742950741 ದೂರವಾಣಿಯನ್ನು ಸಂಪರ್ಕಿಸಿದಲ್ಲಿ ಸ್ಥಳಕ್ಕೆ ಬಂದು ಉಚಿತವಾಗಿ ಅರಿವು ಮೂಡಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

