ಕೋಲಾರ

ವಿದ್ಯಾರ್ಥಿನಿ ಚಿಕಿತ್ಸೆಗೆ ನೆರವಿನೊಂದಿಗೆ ಕವಿ ನಮನಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಜ.12
ಸಾಮಾನ್ಯವಾಗಿ ಯಾವುದೇ ಸಭೆ, ಸಮಾರಂಭ ನಡೆದಲ್ಲಿ ಜ್ಯೋತಿ ಬೆಳಗಿಸಿ, ಗಿಡಕ್ಕೆ ನೀರು ಹಾಕಿ ಉದ್ಘಾಟನೆ ನೆರವೇರಿಸುವುದು ವಾಡಿಕೆ. ಆದರೆ ನಗರದಲ್ಲಿ ಭಾನುವಾರ ಮನ್ವಂತರ ಪ್ರಕಾಶನದಿಂದ ಕವಿನಮನ ಹಾಗೂ ಕವಿಗೋಷ್‌ಠಿ ಕಾರ್ಯಕ್ರಮ ಬಡ ವಿದ್ಯಾರ್ಥಿನಿಯೊಬ್ಬಳ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಚಾಲನೆ ನೀಡಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಹಿರಿಯ ಸಾಹಿತಿ, ಕವಿ ಸ.ರಘುನಾಥ ರವರಿಗೆ ಹಮ್ಮಿಕೊಂಡಿದ್ದ ಕವಿ ನಮನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ಮನ್ವಂತರ ಮೂಲಕ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನಗರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕೋಲಾರ ನಗರದ ಜಯನಗರ ನಿವಾಸಿ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಅಶ್ವಿನಿಯ ಚಿಕಿತ್ಸೆಗಾಗಿ ಮನ್ವಂತರದ 5 ಸಾವಿರ ರು.ಗಳನ್ನು ಗಾಯಾಳುವಿನ ತಾಯಿ ಮುನಿಯಮ್ಮಗೆ ನೀಡುವ ಮೂಲಕ ಉದ್ಘಾಟಿಸಿದರು.
ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಸಾಹಿತ್ಯದಲ್ಲಿ ವಾಕ್ಯ ಪದಗಳ ತೀಕ್ಷ್ಣತೆ ಮಳೆಗಾಲದಲ್ಲಿ ಬರುವ ಸಿಡಿಲು ಮಿಂಚಿನಂತಿರಬೇಕು,  ಪದಗಳ ಜೋಡಣೆ ಕಿವಿಗೆ ಗೆಳೆಯ ಗೆಳತಿಯೊಂದಿಗೆ, ಗಂಡ ಹೆಂಡತಿಯೊಂದಿಗೆ ಸಂಜೆಯ ಸಮಯದಲ್ಲಿ ಸೂರ್ಯನ ಕಿರಣಗಳು ದೇಹಕ್ಕೆ ಉಷ್ಣವನ್ನು ತೆಗೆದು ಮೈ ಪುಳಕಿಸುವಂತಹ ಸ್ಪರ್ಶದ ಕಿರಣಗಳಂತಿರಬೇಕು, ಜತೆಗೆ ತಂಪಾದ ಗಾಳಿ ಮನಸ್ಸನ್ನು ಪುಳಕಿಸಿ ದೇಹವನ್ನು ತಲ್ಲಣಗೊಳಿಸುವಂತಿರಬೇಕು. ಅಂತಹ ಸಮಯದಲ್ಲಿ ಯಾವ  ಪದಗಳನ್ನು ಬಳಸುತ್ತೇವೋ ಆ ರೀತಿ ಇರಬೇಕು ಎಂದು ವಿಶ್ಲೇಷಣೆ ಮಾಡಿದರು.
ತಮಗೆ ಕವಿತೆ ಬರೆಯಲು ಬರುವುದಿಲ್ಲ ಎಂದು ಮಾತು ಆರಂಭಿಸಿ ತಮ್ಮ ಪುಟ್ಟ ಭಾಷಣದುದ್ದಕ್ಕೂ ಸಾಹಿತ್ಯ ಸಂವೇದನಾ ಶೀಲರಾಗಿ ಮಾತನಾಡುವ ಮೂಲಕ ಗಮನ ಸೆಳೆದರು.
ತಾನು ಕೋಲಾರದ ಬಗ್ಗೆ ಮೊದಲು ಕೇಳುತ್ತಿದ್ದುದು ಬೇರೆ, ಕೋಲಾರ ಬರಡು ಭೂಮಿ ಅಲ್ಲ. ವಿವಿಧ ರೀತಿಯ ವೈಶಿಷ್ಟತೆಗಳನ್ನು ಒಳಗೊಂಡ ನಿಜವಾದ ತಾಣ.  ಪ್ರತಿಯೊಬ್ಬರೂ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ.  ಶ್ರಮಜೀವಿಗಳು. ಒಳ್ಳೆಯವರು. ಇಂತಹ ನಾಡಿನಲ್ಲಿ ಸೇವೆ ಮಾಡುತ್ತಿರುವುದು ತಮಗೆ ಖುಷಿ ಕೊಡುತ್ತಿದೆ ಎಂದು ನುಡಿದರು.
ಸಾಹಿತಿಯೂ ಆಗಿರುವ ರಾಮನಗರ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಸಾಹಿತ್ಯ ಮತ್ತು ಸಂಸ್ಕಣತಿಯನ್ನು ವಿಶ್ಲೇಷಿಸುತ್ತಾ, ಸಾಹಿತ್ಯದಲ್ಲಿ ಭಿನ್ನತೆ ಬರಬೇಕು.,  ಸಾಹಿತ್ಯಕ್ಕೋಸ್ಕರ ಭಿನ್ನತೆ ಬರಬಾರದು.  ವ್ಯಕ್ತಿಯ ಅಂತರಂಗದ ಸಂಸ್ಕಾರವೇ ಸಂಸ್ಕೃತಿ. ಸಾಮಾಜಿಕ, ಆರ್ಥಿಕ, ಸಮುದಾಯ, ಚಾರಿತ್ರ್ಯಿಕ ಸಂಸ್ಕೃತಿ ಒಗ್ಗೂಡಿದರೆ ಒಂದು ಸಂಸ್ಕೃತಿ ಆಗುತ್ತದೆ. ಆಗ ಕನ್ನಡ ನಾಡು, ನುಡಿ, ಭಾಷೆಗೆ ಬೆಲೆ ಸಿಗುತ್ತದೆ ಎಂದರು.
ಇಂದಿನ ಯುವ ಸಮುದಾಯ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗೆಗೆ ಒಲವು ಮೂಡಿಸುವ ಕೆಲಸ ಆಗಬೇಕಿದೆ. ಸಂಸ್ಕೃತಿಯ ಕಣ್ಣು, ಕಿವಿ, ಬಾಯಿಗಳನ್ನು ಅರಳಿಸದಿದ್ದರೆ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಸಾಹಿತ್ಯದ ಜತೆಗೆ ಸಾಹಿತ್ಯದ ವೈಭವವನ್ನು ಕಣ್ಣಿನಲ್ಲಿ ಕಟ್ಟುವ,ಬಣ್ಣದ ಬೆಳಕಿನಿಂದ ವಿಜೃಂಭಿಸುವಂತೆ ಮಾಡಬೇಕು. ಆಗ ಸಾಹಿತ್ಯವೂ ಉಳಿಯುತ್ತದೆ ಎಂದು ನುಡಿದರು.
ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪಣಸಮಾಕನಹಳ್ಳಿ ಚೌಡರೆಡ್ಡಿ, ವಿಶ್ವ ಕುಂದಾಪುರ, ಕಾ.ಹು. ಚಾನ್‌ಪಾಷ,  ಕೆ.ವಿ. ಕಾಳಿದಾಸ, ಮೈ. ಸತೀಶ್‌ಕುಮಾರ್, ಪದ್ಮಾವತಿ, ರಾಜೇಶ್ವರಿ ಸೇರಿದಂತೆ 19 ಮಂದಿ ಕವನಗಳನ್ನು ವಾಚಿಸುವ ಮೂಲಕ ಸಾಹಿತಿ ಕವಿ. ಸ. ರಘುನಾಥ್ ಅವರಿಗೆ  ಕವಿ ನಮನ ಸಲ್ಲಿಸಿದರು. ಲೇಖಕ ಎಚ್.ಎ. ಪುರುಷೋತ್ತಮ ರಾವ್ ಕವಿಗೋಷ್ಠಿ ನಿರ್ವಹಿಸಿದರು. ಆಶಯ ಭಾಷಣ ಮಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಮನ್ವಂತರ ಪ್ರಕಾಶನ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕೃಷ್ಣದೇವಾರಾಯನಂತೆ ಕಾರ್ಯ ನಿರ್ವಹಿಸುತ್ತಿದೆ, ಜನತೆ ಇದಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದರು.
ಗಡಿನಾಡ ಕನ್ನಡ ಸೇವಕ, ತಮಿಳುನಾಡಿನ ಹೊಸೂರಿನ ನಂದ್ಯಾಲ ನಾರಾಯಣರೆಡ್ಡಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ಸನ್ಮಾನಿಸಿದರು. ಹಂಪಿ ವಿವಿಯ ಡಾ. ಶಿವಾರೆಡ್ಡಿ, ಸಾಹಿತಿ ನಾಗತ್ತಿಹಳ್ಳಿ ರಮೇಶ್, ಮನ್ವಂತರ ಪ್ರಕಾಶನ ಖಜಾಂಚಿ ಪ್ರಕಾಶ್, ಭವಾನಿ ಶಂಕರ್, ಸಹ್ಯಾದ್ರಿಯ ಉದಯಕುಮಾರ್, ನಗರಸಭೆ ಸದಸ್ಯ ಪ್ರಸಾದ್‌ಬಾಬು, ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿ, ಗೋಕುಲ್ ನಾರಾಯಣಸ್ವಾಮಿ, ಸಿ.ಎಂ. ಮುನಿಯಪ್ಪ ಇದ್ದರು. ಕವಿಗೋಷ್ಠಿಯ ಜೊತೆಗೆ ಹಾವೇರಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಎಂ.ಬಿ.ಶ್ವೇತ ಅವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಸೊಗಸಾಗಿತ್ತು. ಸ್ವಾಗತ ಸಮಿತಿ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಸ್ವಾಗತಿಸಿ, ಕೆ.ಎಸ್. ಗಣೇಶ್ ನಿರೂಪಿಸಿದರು. ಪ್ರಕಾಶನದ ಸಂಘಟನಾ ಸಂಚಾಲಕ ರವೀಂದ್ರ ಸಿಂಗ್ ಅಭಿನಂದನಾ ಪತ್ರ ವಾಚಿಸಿದರು. ಮಾಲೂರು ಅಶ್ವತ್ಥರೆಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.