ಕೋಲಾರ

ಈ ಬಾರಿಯೂ ಸಂಕ್ರಾಂತಿ ಆಚರಣೆ ಇಲ್ಲ

Published On :

ಕೋಲಾರ: ಸಂಕ್ರಾಂತಿ ಹಬ್ಬವೆಂದರೆ ಸಾಕು ಗ್ರಾಮೀಣ ಭಾಗದ ರೈತರಿಗೆ ಸಂತಸವೋ ಸಂತಸ. ಆದರೆ ಕೋಲಾರ ಜಿಲ್ಲೆಯ ಆರಾಬಿಕೊತ್ತನೂರು ಗ್ರಾಮದಲ್ಲಿ ಮಾತ್ರ ಈ ಹಬ್ಬ ಆಚರಣೆಗೆ ಅಲ್ಲಿನ ಜನತೆ ಸುತಾರಂ ಒಪ್ಪಲ್ಲ. ಇದೇನು ವಿಚಿತ್ರ ಅಂತ ಹುಬ್ಬೇರಿಸಬೇಡಿ. ಇದು ಅಚ್ಚರಿಯಾದರೂ ಸತ್ಯ.
ಕೋಲಾರ ತಾಲೂಕಿನ ಆರಾಬಿಕೊತ್ತನೂರು ಗ್ರಾಮ ಶತಶೃಂಗ ಪರ್ವತಗಳ ಸಾಲಿನಲ್ಲಿರುವ ಒಂದು ಪುಟ್ಟ ಗ್ರಾಮ. ಸುಮಾರು 2,500 ಸಾವಿರ ಜನರಿರುವ ವೈವಿಧ್ಯತೆಗಳನ್ನು ಹೊಂದಿರುವ ಗ್ರಾಮವೂ ಹೌದು.
ಸುಮಾರು 350 ವರ್ಷಗಳಿಂದಲೂ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿಲ್ಲವೆಂಬುದು ಗ್ರಾಮದ ಹಿರಿಯರ ಮಾತು. ಇದಕ್ಕೆ ಕಾರಣ ಸಂಕ್ರಾಂತಿ ಹಬ್ಬದ ದಿನ ಗ್ರಾಮದ ಕೆಲ ರೈತರ ರಾಸುಗಳು ನಿಗೂಢವಾಗಿ ಸತ್ತಿರುವುದು ಎನ್ನುತ್ತಾರೆ.
ಗ್ರಾಮದ ಪುರಾತನ ಬಸವೇಶ್ವರ ದೇವಾಲಯದ ಬಳಿ ಅನೇಕ ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದ ದಿನ ಹಾಸುಗಳಿಗೆ ಕಿಚ್ಚು ಹಾಯಿಸಲು ಸಿದ್ಧತೆ ನಡೆದಿದ್ದ ಸಂದರ್ಭದಲ್ಲಿ ಕೆಲವು ಹಸುಗಳು ಸತ್ತಿದ್ದವು. ಮತ್ತೊಂದು ವರ್ಷವೂ ಇದೇ ರೀತಿ ದುರ್ಘಟನೆ ನಡೆದಿತ್ತು ಎಂಬ ಕಾರಣದಿಂದ ಊರಿನಲ್ಲಿ ಆಗಿನ ಹಿರಿಯರು ದೇವಾಲಯದಲ್ಲಿ ಸಭೆ ಸೇರಿ ರಾಸುಗಳಿಗೆ ಕಿಚ್ಚು ಹಾಯಿಸುವುದು ಬಸವನಿಗೆ ಇಷ್ಟವೆಂದು ಕಾಣುತ್ತದೆ, ದೇವರಿಗೆ ಇಷ್ಟವಾಗದ ಕಾರ್ಯ ಮುಂದುವರೆಸುವುದು ಬೇಡವೆಂದು ಕೈಗೊಂಡ ತೀರ್ಮಾನಕ್ಕೆ ಜನ ಇಂದಿಗೂ ಬದ್ಧವಾಗಿದ್ದಾರೆಂದು ಹೇಳುತ್ತಾರೆ.
ಹಬ್ಬದಂದು ರಾಸುಗಳನ್ನು ಸಿಂಗರಿಸಿ ಪೂಜೆ ಮಾಡುವುದಾಗಲಿ, ಮೆರವಣಿಗೆ ಮಾಡಿ ಕಿಚ್ಚು ಹಾಯಿಸುವುದಾಗಲಿ ಮಾಡದಿರಲು ಹಿರಿಯರು ನಿರ್ಧರಿಸಿರುವುದರಿಂದ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ದಿನ ಯಾವುದೇ ಸಂಭ್ರಮ ಕಾಣುವುದಿಲ್ಲ. ಮನೆ ಮುಂದೆ ತೋರಣ ಕಟ್ಟುವುದಿಲ್ಲ, ಬಸವನ ಗುಡಿಯಲ್ಲಿ ವಿಶೇಷ ಪೂಜೆ ಪುಸ್ಕಾರ ಇರುವುದಿಲ್ಲ, ಮನೆಗಳಲ್ಲಿ ಕನಿಷ್ಠ ಒಂದಿಷ್ಟು ಪಾಯಿಸಿ ಮಾಡಿ ದೇವರಿಗೆ ನೈವೈಧ್ಯವಿಟ್ಟು ನಂತರ ಅದನ್ನು ಮನೆ ಮಂದಿ ಸ್ವೀಕರಿಸುವುದೂ ಇಲ್ಲ.
ಗ್ರಾಮದಲ್ಲಿ ಈಗಿರುವ ಹಿರಿಯರನ್ನು ಪ್ರಶ್ನಿಸಿದರೂ ಉತ್ತರ ಒಂದೇ ಆಗಿರುತ್ತದೆ, ನಮ್ಮ ಪೂರ್ವಿಕರು ಸಂಕ್ರಾಂತಿ ಹಬ್ಬ ಆಚರಣೆ ಬೇಡವೆಂದು ಹೇಳಿರುವಾಗ ಅವರ ಮಾತು ಮುರಿಯುವುದಿಲ್ಲ. ನಮ್ಮ ಹಳ್ಳಿಯಲ್ಲಿ ಜನ ಮತ್ತು ಜಾನುವಾರುಗಳು ಚನ್ನಾಗಿರಬೇಕು, ಸಂಕ್ರಾಂತಿ ಹಬ್ಬದ ದಿನ ಸಂಭ್ರಮಪಡುವುದಕ್ಕಿಂತ ಊರಿನಲ್ಲಿ ನೆಮ್ಮದಿ ಮುಖ್ಯವೆಂದು ವೇದಾಂತಿಗಳಂತೆ ಮಾತನಾಡುತ್ತಾರೆ.
ಕಾಲ ಬದಲಾಗುತ್ತಿದೆ, ಮೂಢ ನಂಬಿಕೆ ನಿಷೇಧಕ್ಕೆ ಒತ್ತಾಯಿಸಲಾಗುತ್ತಿದೆ, ವಿಜ್ಞಾನ-ತಂತ್ರಜ್ಞಾನ ಮುಂದುವರೆಯುತ್ತಿದೆ. ಹೀಗಿದ್ದರೂ ಸುಮಾರು 350 ವರ್ಷಗಳ ಹಿಂದಿನ ಘಟನೆಗಳನ್ನು ಮೆಲುಕು ಹಾಕಿ ಹಬ್ಬ ಆಚರಿಸದಿರುವುದು ಸರಿಯೇ ಎಂಬುದಕ್ಕೆ ಗ್ರಾಮದವರು ಹೇಳುವುದು ಏನೆಂದರೆ, ನಮಗೆ ದೇವರ ಮೇಲೆ ನಂಬಿಕೆ-ಭಯ ಇದೆ, ಜತೆಗೆ ನಮ್ಮ ಹಿರಿಯರು ಸುಳ್ಳು ಹೇಳಲು ಸಾಧ್ಯವಿಲ್ಲ, ಅನುಭವ ಆಧರಿಸಿ ನಮಗೆ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ. ಅದನ್ನು ಪಾಲಿಸುತ್ತಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಹಾಸುಗಳಿಗೆ ಪೂಜೆ ಮಾಡದಿರುವ ಕಾರಣ ಬಸವ ಜಯಂತಿ ದಿನದಂದು ಹಳ್ಳಿಯಲ್ಲಿ ಹಾಸುಗಳನ್ನು ತೊಳೆದು ಪೂಜೆ ಮಾಡಲಾಗುತ್ತದೆ, ರಥ ಸಪ್ತಮಿ ದಿನದಂದು ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ. ಸಂಕ್ರಾಂತಿ ಆಚರಣೆ ಮಾಡುವುದಕ್ಕೆ ಭಯಕ್ಕಿಂತ ನಮಗೆ ಹಿರಿಯರು ಹೇಳಿರುವ ಮಾತೇ ಮುಖ್ಯವೆಂದು ಗ್ರಾಮದ ನಿವಾಸಿ ವಿ. ಈಶ್ವರ್ ಕನ್ನಡಪ್ರಭಕ್ಕೆ ತಿಳಿಸಿದರು.


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.