ಹರಿದು ಬಂದ ವಿದ್ಯಾರ್ಥಿ ಸಾಗರ
ಕೋಲಾರ: ಸ್ವಾಮಿ ವಿವೇಕಾನಂದರ 150 ನೇ ಜಯಂತಿಯ ಸಮಾರೋಪದ ಅಂಗವಾಗಿ ನಗರದಲ್ಲಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥ್ಥಿಗಳು ಭಾಗವಹಿಸಿದ್ದರು.
ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಿಂದ ಶೋಭಾಯಾತ್ರೆ ಆರಂಭವಾಯಿತು. ವಿವೇಕಾನಂದರ ಪ್ರತಿಮೆ ಹೊತ್ತ ಅಲಂಕೃತ ವಾಹನಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಪುಷ್ಪಾರ್ಚನೆಯೊಂದಿಗೆ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಎಲ್ಲಾ ರಸ್ತೆಗಳಲ್ಲಿ ಶೋಭಾಯಾತ್ರೆಗೆ ಜನರಿಂದ ಉತ್ತಮ ಸ್ಪಂಧನೆ ಸಿಕ್ಕಿತು. ಪ್ರಮುಖ ವೃತ್ತಗಳಲ್ಲಿ ನಾಗರಿಕರು ವಿವೇಕಾನಂದರ ಪ್ರತಿಮೆಗೆ ಪುಷ್ಟವೃಷ್ಟಿ ಮಾಡುವ ಮೂಲಕ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ವೆಂಕಟೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ಜಿಲ್ಲಾ ಸಂಚಾಲಕ ಸುನಿಲ್ಕುಮಾರ್, ನಗರ ಕಾರ್ಯದರ್ಶಿ ಹರೀಶ್, ಗೌತಮ್, ಹನುಮಂತು, ನವೀನ್, ಸುಬ್ರಮಣಿ, ಅಭಿಷೇಕ್, ದಿಲೀಪ್, ವೆಂಕಟೇಶ್ ದೀಕ್ಷಿತ್, ರಮ್ಯ, ಪಲ್ಲವಿ, ಪ್ರತಿಮ, ಲಾವಣ್ಯ, ಸುಧಾ, ಮಂಜುಳ ಮುಂತಾದವರು ಇದ್ದರು.
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿಗೆ ಗಂಟೆಗಟ್ಟಲೆ ಕಾದ ಜನ
ಚಿಂತಾಮಣಿ: ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಲು ಬಂದ ಸಾರ್ವಜನಿಕರನ್ನು ಪೊಲೀಸ್ ಠಾಣೆ ಮುಂಭಾಗ ಗಂಟೆ ಗಟ್ಟಲೆ ಕಾಯಿಸಿರುವ ಸ್ಥಳೀಯ ಪೊಲೀಸರ ಕ್ರಮಕ್ಕೆ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.
ನಗರದ ಗ್ರಾಮಾಂತರ ಠಾಣೆ ಪರಿಶೀಲನೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಚಿಂತಾಮಣಿ ನಗರಕ್ಕೆ ಪ್ರಥಮ ಭೇಟಿ ನೀಡಲಿರುವ ಬಗ್ಗೆ ಸಾರ್ವಜನಿಕರು ತಿಳಿದು ವಿವಿಧ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದ ಜನರನ್ನು ಮೇಡಂ ಅವರ ದರ್ಶನ ಭಾಗ್ಯ ದೊರೆಯದೆ ಠಾಣೆ ಮುಂಭಾಗದಲ್ಲಿ ಗಂಟೆಗಟ್ಟಲೇ ಕಾಯಿಸಿದ್ದರು. ನೊಂದ ಸಾಮಾನ್ಯ ಜನರಿಗೆ ಕಾನೂನು ರಕ್ಷಣೆ ಕಲ್ಪಿಸಲು ಪ್ರಾಮಾಣಿಕ ಸೇವೆ ಮಾಡುತ್ತೇನೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಆತ್ಮಸ್ಥೈರ್ಯವನ್ನು ತುಂಬಿದರು. ವಿವಿಧ ಅರ್ಜಿಗಳ ಪೈಕಿ ನಗರದ ಆಜಾದ್ ಚೌಕ ಬಳಿ ಇರುವ ಶ್ರೀ ಹರಿಹರೇಶ್ವಸ್ವಾಮಿ ದೇವಾಲಯದ ಸುತ್ತಮುತ್ತಲೂ ಶೌಚಾಲಯ ನಿರ್ಮಿಸದೆ ತೊಂದರೆ ಮಾಡುತ್ತಿರುವ ಬಗ್ಗೆ ಮನವರಿಕೆ ಮಾಡಿ ಕೂಡಲೇ ಈ ಭಾಗದಲ್ಲಿ ಶೌಚಾಲಯ ನಿರ್ಮಿಸಕೊಡಬೇಕೆಂದು ಮನವಿ ಸಲ್ಲಿಸಿದರು.
ಹಂಗಾಮಿ ಅಧ್ಯಕ್ಷರ ಆಯ್ಕೆ
ಮಾಲೂರು: ತಾಲೂಕಿನ ಕೊಂಡಶೆಟ್ಟಿ ಹಳ್ಳಿ ಗ್ರಾಪಂನಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಂಚಾಯ್ತಿ ಉಪಾಧ್ಯಕ್ಷೆ ಶೈಲಜಾ ಶ್ರೀನಿವಾಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಹಾಲಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿಯಾದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷೆ ಶೈಲಜಾ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳ ಆದೇಶದವರೆಗೂ ಶೈಲಜಾ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಸಂತ್ಕುಮಾರ್ ತಿಳಿಸಿದ್ದಾರೆ. ಹಂಗಾಮಿ ಅಧ್ಯಕ್ಷ ಶೈಲಜಾ ಶ್ರೀನಿವಾಸ್ರವರಿಗೆ ಕೆ. ವೆಂಕಟೇಶ್ಗೌಡ, ಎಂ.ನಂದೀಶಪ್ಪ, ಕೆಂಪರಾಜು, ಶ್ರೀನಿವಾಸ್,ನಾರಾಯಣಸ್ವಾಮಿ, ಕೃಷ್ಣಪ್ಪ, ಮುತ್ತಪ್ಪ, ವೆಂಕಟರಮಣ, ಶಿವರಾಜ್, ಪಂಚಾಯ್ತಿ ಕಾರ್ಯದರ್ಶಿ ಶ್ರೀನಿವಾಸ್ ಅಭಿನಂದನೆ ಸಲ್ಲಿಸಿದ್ದಾರೆ.
'ಕುವೆಂಪು ಆದರ್ಶ ಸಾರುವ ಕೆಲಸವಾಗಬೇಕು'
ಕೆಜಿಎಫ್: ರಾಷ್ಟ್ರಕವಿ ಕುವೆಂಪು ಅವರ ಕವನಗಳನ್ನು ಅರಿಯುವ ಮೂಲಕ ಅವರ ಆದರ್ಶಗಳನ್ನು ಇತರರಿಗೆ ಸಾರುವ ಕೆಲಸ ಮಾಡಬೇಕು ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಪ್ರಕಾಶ್ ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಚಾಂಪಿಯನ್ರೀಫ್ನಲ್ಲಿರುವ ಪೊಲೀಸ್ ಉಪರಕ್ಷಣಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ಎ.ಕೆ. ವಿವೇಕಾನಂದ ಅವರು ಮತ್ತೆ ಕೆಜಿಎಫ್ ಕ್ಷೇತ್ರಕ್ಕೆ ಡಿವೈಎಸ್ಪಿಯಾಗಿ ಅಧಿಕಾರಿ ವಹಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಕನ್ನಡಪರ ಸಂಘಟನೆಗಳಿಗೆ ಮತ್ತು ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ಹೊಂದಿರುವ ಡಿವೈಎಸ್ಪಿ ಎ.ಕೆ. ವಿವೇಕಾನಂದ ಅವರ ಸೇವೆ ಗುರುತಿಸಿ ಕರವೇ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡುವ ಮೂಲಕ ಅವರನ್ನು ಸನ್ಮಾನಿಸಿದರು. ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಕೋದಂಡರಾಮಯ್ಯ, ಎಸ್. ಕದಿರಪ್ಪ, ತಾಲೂಕು ಅಧ್ಯಕ್ಷ ನಂಜುಂಡಪ್ಪ, ನಗರಾಧ್ಯಕ್ಷ ಸುಬ್ರಮಣಿ, ಮಹಿಳಾಧ್ಯಕ್ಷೆ ಪಲ್ಲವಿ ಕೃಷ್ಣಮೂರ್ತಿ, ವಕೀಲ ಶ್ರೀನಿವಾಸಲು ಇದ್ದರು.
ರಾಜಕಾಲುವೆ ನೀರು ರಕ್ಷಿಸಲು ಆಗ್ರಹಿಸಿ ಪ್ರತಿಭಟನೆ
ಮಾಲೂರು: ಪಟ್ಟಣದ ದೊಡ್ಡ ಕೆರೆಗೆ ನೀರು ಹರಿಸುವ ರಾಜಕಾಲುವೆ ನೀರನ್ನು ಪ್ರಭಾವಿಗಳು ಪಂಪ್ ಮೂಲಕ ತಮ್ಮ ಜಮೀನಿಗೆ ಹಾಯಿಸಿಕೊಳ್ಳುತ್ತಿರುವುದರಿಂದ ಕೆರೆಗೆ ನೀರು ಬಾರದೆ ತೊಂದರೆಯಾಗುತ್ತಿದೆ ಎಂದು ಕೆರೆ ದಂಡಿನ ರೈತರು ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುಂಬರಲಿರುವ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಪುರಸಭೆ ಅಧಿಕಾರಿಗಳು ರಾಜಕಾಲುವೆಯಲ್ಲಿ ಅಕ್ರಮವಾಗಿ ನೀರು ಪಡೆಯುತ್ತಿರುವವರ ಪುಂಪ್ಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು. ಪ್ರತಿಭಟನೆ ಪ್ರಾರಂಭಿಸಿ ಗಂಟೆಯಾದರೂ ಪುರಸಭೆ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಬಾರದಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆಕಾರರು ಪುರಸಭೆಯ ಬಾಗಿಲನ್ನು ಮುಚ್ಚಿ ಪ್ರತಿಭಟಿಸಿದರು. ರಜೆ ಮೇಲಿರುವ ಮುಖ್ಯಾಧಿಕಾರಿಗಳು ಪೋನಿನ ಮೂಲಕ ಪ್ರತಿಭಟನೆಕಾರರೂಂದಿಗೆ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ಅಕ್ರಮಕಾರರ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಟ್ಟರು.
ಶಿಡ್ಲಘಟ್ಟದಲ್ಲಿ ಸಿದ್ದರಾಮೇಶ್ವರ ಜಯಂತ್ಯುತ್ಸವ
ಶಿಡ್ಲಘಟ್ಟ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವವನ್ನು ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನಡೆಸಲಾಯಿತು.
ಶಾಸಕ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಸಮಾಜದ ಉದ್ಧಾರಕ್ಕಾಗಿ ಸಮಾಜದ ಎಲ್ಲ ವರ್ಗದವರನ್ನು ಸೇರಿಸಿ 9 ಜನರ ಮಂತ್ರಿ ಮಂಡಲ ರಚನೆ ಮಾಡಿ ಸಮಾಜ ಸುಧಾರಣೆಗಾಗಿ ದುಡಿದಿದ್ದು, ಈ ಮಂತ್ರಿ ಮಂಡಲದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರೂ ಒಬ್ಬರಾಗಿದ್ದರು ಎಂದರು.
ತಹಸೀಲ್ದಾರ್ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಶಿವಯೊಗಿ ಸಿದ್ದಾರಾಮೇಶ್ವರ ಜಯಂತ್ಯುತ್ಸವ ಮಾಡಬೇಕೆಂದು ಆದೇಶ ಹೊರಡಿಸಿದ್ದು, ಸರ್ಕಾರಿ ಆದೇಶದಂತೆ ಬೋವಿ ಜನಾಂಗದವರನ್ನು ಒಗ್ಗೂಡಿಸಿ ತರಾತುರಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸಿಲ್ದಾರ್ ರಮೇಶ್, ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥರೆಡ್ಡಿ, ಪುರಸಭೆಯ ಮುಖ್ಯಸ್ಥ ಚೆನ್ನರಾಯಪ್ಪ, ಕರ್ನಾಟಕ ಬೋವಿ ಸಂಘದ ತಾಲೂಕು ಅದ್ಯಕ್ಷ ಚಿಕ್ಕ ನರಸಿಂಹಪ್ಪ, ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ನರಸಪ್ಪ ಇದ್ದರು.
ಒಳ ಮೀಸಲಾತಿ ವರ್ಗೀಕರಣ ಸುಲಭದ ಮಾತಲ್ಲ
ಶ್ರೀನಿವಾಸಪುರ: ಭೋವಿ ಜಾತಿಯನ್ನು ಮೀಸಲಾತಿ ಪಟ್ಟಿಯಿಂದ ಹೊರ ತರಲು ಸದಾಶಿವ ಆಯೋಗ ಜಾರಿಗೆ ತಂದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸುತ್ತಿದ್ದು, ಒಳ ಮೀಸಲಾತಿ ಜಾರಿ ಸುಲಭದ ಮಾತಲ್ಲ ಎಂದು ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಪ್ರತಿಪಾದಿಸಿದ್ದಾರೆ.
ತಾಲೂಕು ಆಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಕೆರೆ ಕುಂಟೆಗಳನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದ ಸಿದ್ದರಾಮೇಶ್ವರರ ಜಯಂತಿಯನ್ನು ಉತ್ತರ ಕರ್ನಾಟಕ 841 ವರ್ಷಗಳಿಂದ ಆಚರಣೆಯಲ್ಲಿದೆ. ಹಿಂದಿನ ಬಿಜೆಪಿ ಸರ್ಕಾರ ಜನವರಿ 14 ರಂದು ಪತ್ರಿ ವರ್ಷವೂ ಈ ಜಯಂತಿಯನ್ನು ಆಚರಣೆ ಮಾಡಬೇಕೆಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಪಟ್ಟಿಯಲ್ಲಿ ಸೇರಿಸಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಸದಸ್ಯರಾದ ರತ್ನಮ್ಮ ಗಣೇಶ್, ಜಿ.ಕೆ. ನಾಗರಾಜ್, ತಹಸೀಲ್ದಾರ್ ಎಚ್. ಜಯ ಅವರು ಮಾತನಾಡಿದರು. ತಾಪಂ ಅಧ್ಯಕ್ಷ ಬಿ.ವಿ. ಕೃಷ್ಣಾರೆಡ್ಡಿ, ಸದಸ್ಯರಾದ ಕೆ.ಕೆ. ಮಂಜುನಾಥರೆಡ್ಡಿ, ಬಿಇಒ ಟಿ.ಕೆ. ರಾಘವೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

