ಕೋಲಾರ

ಖರ್ಚಾಗದ ಅನುದಾನ; ಅಧ್ಯಕ್ಷರ ಅಸಮಾಧಾನ

Published On :

ಚಿಕ್ಕಬಳ್ಳಾಪುರ: ಜಿ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿವಾದ ಸೃಷ್ಟಿಯಾಗಿರುವುದರ ನಡುವೆ ಸೋಮವಾರ ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.
ಜಿ.ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅಧ್ಯಕ್ಷರು, ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಗುಳೆ ಹೋಗುವುದನ್ನು ತಡೆಗಟ್ಟುವ ಸಲುವಾಗಿ ಮಹತ್ವಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಕೋಟ್ಯಂತರ ರು. ಅನುದಾನವನ್ನು ನೀಡುತ್ತಿದೆ. ಆದರೆ, ಇದನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಯೋಜನೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂಬ ಸೂಚನೆಯನ್ನು ಕೊಟ್ಟರೂ ಅಧಿಕಾರಿಗಳು ಕೆಲಸವನ್ನು ಮಾಡುತ್ತಿಲ್ಲ. ಜಿ.ಪಂ.ಗೆ ಸಮರ್ಪಕವಾಗಿ ಸ್ಪಂದನೆಯೂ ಸಿಗುತ್ತಿಲ್ಲ. ಇದರಿಂದ ಸರ್ಕಾರದ ಅನುದಾನ ಖರ್ಚಾಗದೇ ಹಾಗೆಯೇ ಉಳಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಹಣದ ಕೊರತೆಯಿಲ್ಲ. ಸರ್ಕಾರ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ನೀಡಿದಾಗ ಹಣ ಬಿಡುಗಡೆ ಮಾಡಲಾಗುವುದು. ಆದರೆ, ಜಿ.ಪಂ.ನಲ್ಲಿ ಇನ್ನೂ 20 ಕೋಟಿ ರು. ಹಣ ಖರ್ಚಾಗಬೇಕಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನರೇಗಾವನ್ನು ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯನ್ನು ಸಾಧಿಸದೇ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೃಷಿ ಇಲಾಖೆಯಿಂದ ಜಿಲ್ಲೆಯ 6 ತಾಲೂಕುಗಳಲ್ಲೂ ರೈತರ ಉತ್ಪನ್ನಗಳ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಕ್ವಿಂಟಲ್ ರಾಗಿಗೆ 1800 ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ. ಆದರೆ, ಬೇರೆ ಕಡೆ ರಾಗಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದರಿಂದ ರೈತರು ರಾಗಿಯನ್ನು ಖರೀದಿ ಕೇಂದ್ರಗಳಿಗೆ ತಂದು ಮಾರಾಟ ಮಾಡುತ್ತಿಲ್ಲ. ಇನ್ನೂ ಮೆಕ್ಕೆಜೋಳ ಮಾರಾಟದಲ್ಲೂ ಸಮರ್ಪಕವಾದ ಪ್ರತಿಕ್ರಿಯೆ ಇಲ್ಲ. ಸುಮಾರು 1 ಲಕ್ಷ ಟನ್ ನಿರೀಕ್ಷೆಗೆ ಕೇವಲ 1386 ಟನ್ ಮೆಕ್ಕೆಜೋಳವನ್ನು ರೈತರಿಗೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿ ತಿಳಿಸಿದಾಗ, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಧ್ಯಕ್ಷರು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳು ವರ್ಷಾಂತ್ಯದೊಳಗೆ ನಿಗದಿಪಡಿಸಿರುವ ಗುರಿಯನ್ನು ಸಾಧಿಸಬೇಕೆಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.