ಕೋಲಾರ

ಸೌಕರ್ಯಗಳ ಕೊರತೆ; ಮಕ್ಕಳ ಸರಣಿ ಸಾವು

Published On :

ಚಿಕ್ಕಬಳ್ಳಾಪುರ: ಕಳೆದ ಎರಡ್ಮೂರು ವರ್ಷಗಳಿಂದಲೂ ಮೂಲ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ತತ್ತರಿಸುತ್ತಿರುವ ಇಲ್ಲಿನ ಬಸಪ್ಪನ ಛತ್ರದ ನಿವಾಸಿಗಳ ಪಾಡು ಹೇಳ ತೀರದಾಗಿದೆ. ಪ್ರಮುಖವಾಗಿ ಇಲ್ಲಿ ಪುಟ್ಟ ಕಂದಮ್ಮಗಳ ಮಾರಣ ಹೋಮವೇ ನಡೆಯುತ್ತಿದ್ದು, ಇಲ್ಲಿನವರ ಸಂಕಟ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ತಿಳಿಯದಾಗಿದೆ.  
ಬೇಸಿಗೆಯಲ್ಲಿ ಸುಡುವ ಬಿಸಿಲಿನ ತಾಪ, ಜೋರಾಗಿ ಗಾಳಿ ಬಂದರೆ ಹಾರಿ ಹೋಗುವ ಶೆಡ್‌ಗಳ ಛಾವಣಿ ಶೀಟುಗಳು, ಚಳಿಗಾಲದಲ್ಲಿ ಗಡಗಡ ನಡುಗಿಸುವ ವಿಪರೀತ ಚಳಿ, ಇವು ನಗರದ ಹೊರ ವಲಯದ ಕಂದವಾರದ ಸಮೀಪದ ಗುಡಾರದಲ್ಲಿ ವಾಸ ಮಾಡುತ್ತಿರುವ ಬಸಪ್ಪನ ಛತ್ರದ ನಿವಾಸಿಗಳು ಅನುಭವಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.
ನಗರದ ಬಿ.ಬಿ. ರಸ್ತೆಯಲ್ಲಿರುವ ಬಸಪ್ಪನ ಛತ್ರ ಒಂದು ಕಾಲದಲ್ಲಿ ಕುಸ್ತಿ ಪಂದ್ಯಾವಳಿಗಳಿಗೆ ಖ್ಯಾತಿ ಪಡೆದಿತ್ತು. ಬರು ಬರುತ್ತ ನಿರ್ಲಕ್ಷ್ಯದಿಂದ ಕುಸ್ತಿ ಪಂದ್ಯಾವಳಿಗಳು ನಡೆಯುವುದು ನಿಂತು ಹೋದವು, ಹಿರಿಯ ಪೈಲ್ವಾನುಗಳು ದಂತೆ ಕತೆಯಾದರೆ, ಹೊಸ ಪೈಲ್ವಾನರು ಸೃಷ್ಟಿಯಾಗಲಿಲ್ಲ. ಈ ನಡುವೆ ಬಸಪ್ಪನ ಛತ್ರಕ್ಕೆ ಹೊಂದಿಕೊಂಡಂತೆ ಕುದುರೆಗಳನ್ನು ಕಟ್ಟುವ ಸಲುವಾಗಿ ವಿಸ್ತಾರವಾಗಿ ಕಟ್ಟಿದ್ದ ಮಂಟಪದಲ್ಲಿ ವಸತಿ ಹೀನರಾಗಿದ್ದ ಸುಮಾರು 45 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದವು. ಇಲ್ಲಿ ಚಿಂದಿಪೇಪರ್ ಆಯುವವರು, ಪ್ಲಾಸ್ಟಿಕ್ ಜೊತೆಗೆ ಪಾತ್ರೆ ಪಗಡೆ ಸಾಮಾನುಗಳನ್ನು ಮಾರಾಟ ಮಾಡುವವರು ಸೇರಿದಂತೆ ಅನೇಕರು ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಗರದಲ್ಲಿ ಹೊಸದಾಗಿ ಹೈಟೆಕ್ ನಗರಸಭೆ ಕಚೇರಿ ನಿರ್ಮಾಣ ಮಾಡಬೇಕೆಂಬ ಯೋಜನೆ ಇಲ್ಲಿ ಅನೇಕ  ವರ್ಷಗಳಿಂದ ವಾಸ ಮಾಡುತ್ತಿದ್ದ ಜನರ ಪಾಲಿಗೆ ಮಾರಕವಾಯಿತು. ಏಕಾಏಕಿ ಖಾಲಿ ಮಾಡಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಜಿಲ್ಲಾಡಳಿತ ಪುನರ್ ವಸತಿ ಕಲ್ಪಿಸುವ ಭರವಸೆ ನೀಡಿ ನಗರದ ಹೊರ ವಲಯದಲ್ಲಿರುವ ಕಂದವಾರಕ್ಕೆ ಜನರನ್ನು ಸಾಗಹಾಕಿತು. ಇದರ ಜೊತೆಗೆ ವಸತಿ ಸೌಲಭ್ಯ ಕಲ್ಪಿಸಲು ವೈಯಕ್ತಿಕವಾಗಿ 50 ಲಕ್ಷ ರು. ನೀಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಆಂಜಿನಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂತೋಷದಲ್ಲಿ ಹೊರಟ ಜನರು ಇದೀಗ ಜಿಲ್ಲಾಡಳಿತ ಮನೆಗಳನ್ನು ಕಟ್ಟಿಕೊಟ್ಟು ಇಲ್ಲಿನ ನರಕ ಕೂಪದಿಂದ ಬಂಧ ಮುಕ್ತಗೊಳಿಸುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ.
ಕಂದಮ್ಮಗಳ ಸಾವಿನ ಸರಣಿ: ಜನರ ಒತ್ತಡಕ್ಕೆ ಜಿಲ್ಲಾಡಳಿತ ಇಲ್ಲಿನ ನಿವಾಸಿಗಳಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ಹಾಕಿಕೊಟ್ಟಿದೆ. ಆದರೆ, ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಪ್ರತಿದಿನ ಒಂದಲ್ಲಾ ಒಂದು ಸಮಸ್ಯೆ ಇಲ್ಲಿನ ಜನರನ್ನು ಕಾಡುತ್ತಿದೆ. ಇಲ್ಲಿನ ವಾತಾವರಣ ತಾಳಲಾರದೇ ಪುಟ್ಟ ಕಂದಮ್ಮಗಳು ಅನಾರೋಗ್ಯಕ್ಕೆ ಗುರಿಯಾಗಿ ಸಾವನ್ನಪ್ಪುತ್ತಿದ್ದು ಕಳೆದ ಅಕ್ಟೋಬರ್ ತಿಂಗಳಾಂತ್ಯದಿಂದ ಈವರೆಗೂ ಸುಮಾರು 10 ಕ್ಕೂ ಹೆಚ್ಚು ಕಂದಮ್ಮಗಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಜಮೀನುಗಳ ನಡುವೆ ಶೆಡ್‌ಗಳಿರುವುದರಿಂದ ದಟ್ಟವಾಗಿ ಆವರಿಸುವ ಮಂಜು ಶೆಡ್ಡಿನೊಳಗೂ ತೂರಿ  ಇಲ್ಲಿನ ದೊಡ್ಡವರನ್ನೇ ನಡುಗಿಸುತ್ತಿದೆ. ಇನ್ನೆಲ್ಲಿ ಕಂದಮ್ಮಗಳು ಚಳಿಯನ್ನು ತಡೆಯುವುದು. ಈ ಚಳಿಯಿಂದ ರಕ್ಷಿಸಲು ಜನರೇ ತಮಗೆ ತೋಚಿದ ಕೆಲಸವನ್ನು ಮಾಡಿದರೂ ಶೀತ ಚಳಿಗೆ ಆಗತಾನೇ ಜನಿಸಿದ ಮಗುವಿನಿಂದ ಹಿಡಿದು 2 ವರ್ಷದೊಳಗಿನ ಮಕ್ಕಳು ಜ್ವರ, ಉಸಿರಾಟ ಸಮಸ್ಯೆ ಸೇರಿದಂತೆ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗುತ್ತಿಲ್ಲ. ಸ್ವಲ್ಪ ಚೇತರಿಕೆ ಕಂಡಂತೆ ಕಂಡು ಬಂದರೂ ಮಗು ಚಿಂತಾಜನಕ ಸ್ಥಿತಿಗೆ ತಲುಪಿ ಕೊನೆಯುಸಿರು ಎಳೆಯುತ್ತಿವೆ. ಇದರ ಬಗ್ಗೆ ಪ್ರಾರಂಭದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಜನರು ಸರಣಿ ಮಕ್ಕಳು ಸಾವನ್ನಪ್ಪುತ್ತಿರುವುದಕ್ಕೆ ಅಲ್ಲಿನ ವಾತಾವರಣದ ಸಮಸ್ಯೆಯೇ ಕಾರಣವಾಗಿದೆ. ಇದನ್ನು ಅನೇಕ ಬಾರಿ ಗಮನಕ್ಕೆ ತಂದರೂ ಸಂಬಂಧಪಟ್ಟವರಿಗೆ ಜ್ಞಾನೋದಯವಾಗುತ್ತಿಲ್ಲ. ಇದರ ಫಲವಾಗಿ ಡಿ.10 ರಂದು ಜಬೀಯಾರವರ 6 ತಿಂಗಳ ಗಂಡು ಮಗು, ಜ.13 ರಂದು ಶಂಕರ ಮತ್ತು ಪದ್ಮ ದಂಪತಿಗಳ ಮಗು ಜನನಿ ಸಾವನ್ನಪ್ಪಿದೆ.
ಜಿಲ್ಲಾಡಳಿತ ಬಸಪ್ಪನ ಛತ್ರದ ನಿವಾಸಿಗಳಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಾಗ ಖರೀದಿಸಿ ಮನೆಗಳನ್ನು ಕಟ್ಟಿಕೊಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ, ಇಲ್ಲಿನ ಸಮಸ್ಯೆಗಳು ಪ್ರಾಣ ಹಿಂಡುತ್ತಿವೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸುತ್ತಮುತ್ತಲಿನ ಪರಿಸರದಿಂದ ಸಮಸ್ಯೆಗಳು ಉಂಟಾಗುತ್ತಿರಬಹುದು ಎಂದು ಹೇಳಿ ಹೋಗಿದ್ದರೂ ಇಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ. ಮಕ್ಕಳು ಸಾವನ್ನಪ್ಪಿದ ಸಂದರ್ಭದಲ್ಲಿ ಪ್ರತಿಭಟನೆಗಳು ಮತ್ತು ಹೋರಾಟಗಳನ್ನು ನಡೆಸಿದಾಗ ಮಾತ್ರ ಅಧಿಕಾರಿಗಳಿಗೆ ಇಲ್ಲಿನವರ ಸಮಸ್ಯೆಗಳು ನೆನಪಾಗುತ್ತದೆ.
ಇಲ್ಲಿ ಇರಲು ನಮಗೆ ಸಾಧ್ಯವಾಗುತ್ತಿಲ್ಲ, ಕೇವಲ ಹಲವರು ಬಂದು ಸಮಸ್ಯೆ ತಿಳಿದುಕೊಂಡು ಹೋಗುತ್ತಿದ್ದಾರೆಯೇ ಹೊರತು ಸಮಸ್ಯೆಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ಇಲ್ಲಿ ಕಾಡುತ್ತಿರುವ ಚಳಿಗೆ ಈಗ ನಮ್ಮ ಮಗು ಸತ್ತು ಹೋಗಿದೆ.
- ಶಂಕರ, ಮೃತ ಮಗುವಿನ ತಂದೆ


-ಎನ್. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.