'ಉತ್ತಮ ಜೀವನಕ್ಕಾಗಿ ಸ್ಕೌಟ್ಸ್, ಗೈಡ್ಸ್ ಸೇರಿ'
ಕನ್ನಡಪ್ರಭ ವಾರ್ತೆ, ಕೋಲಾರ, ಜ.15
ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಲು ಸ್ಕೌಟ್ಸ್ ಸದಸ್ಯರಾಗುವುದು ಲೇಸು. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಾಮಾಜಿಕ ಸೇವಾ ಸಂಸ್ಥೆಯು ಜಾತಿ, ಜನಾಂಗ, ಧರ್ಮ ಎಂಬ ಬೇಧಭಾವವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ ತಿಳಿಸದರು.
ತಾಲೂಕಿನ ಗಟ್ಟಹಳ್ಳಿ ಆಂಜನಪ್ಪ ಆಶ್ರಮದಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಸ್ತು, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ದೇಶಸೇವೆ, ದೇಶಭಕ್ತಿ ಚಟುವಟಿಕೆಗಳು ಈ ಸಂಸ್ಥೆಯ ನೆಲೆಗಟ್ಟಾಗಿದೆ ಎಂದರು.
ಜಿಲ್ಲಾ ಸಂಸ್ಥೆಯ ಖಜಾಂಚಿ ಬಿಸಪ್ಪ ಗೌಡರು ಮಾತನಾಡಿ, ಮಕ್ಕಳು ಶಿಸ್ತನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿನ ಚಟುವಟಿಕೆಗಳು ಪೂರಕವಾಗಿದ್ದು ಸಮಾಜ ಮತ್ತು ದೇಶಕ್ಕೆ ಸೇವೆ ಮಾಡುವ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸುತ್ತದೆ ಎಂದರು.
ಜಿಲ್ಲಾ ಸಂಸ್ಥೆಯ ಗೈಡ್ಸ್ ಆಯುಕ್ತ ಜಯಶ್ರೀ ಮಾತನಾಡಿದರು. ಈ ಸಂದರ್ಭದಲ್ಲಿ ಗಟ್ಟಹಳ್ಳಿ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಾದ ಪವನ್ ಕುಮಾರ್ ಮತ್ತು ಮನೋಜ್ಕುಮಾರ್ ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಬಾಲವಿಜ್ಞಾನ ವಸ್ತುಪ್ರದರ್ಶನ ರಾಜ್ಯಮಟ್ಟದ ಒಲಂಪಿಯಾರ್ಡ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಹಾಗೂ ಪದಾಧಿಕಾರಿಗಳು ಅಭಿನಂದಿಸಿ ಶುಭ ಹಾರೈಸಿದರು.
ಕ್ಷುಲ್ಲಕ ಜಗಳ; ಆಸ್ಪತ್ರೆಗೆ ದಾಖಲು
ಶಿಡ್ಲಘಟ್ಟ: ಹುಡುಗಿಯನ್ನು ಚುಡಾಯಿಸಿದ ಕಾರಣಕ್ಕೆ ಜಗಳವಾಡಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಹನುಮಂತಪುರದ ನಿವಾಸಿಗಳಾದ ದೇವಪ್ಪನ ಮಗಳು ಸರೋಜ ಎಂಬವರನ್ನು ಪಕ್ಕದ ಮನೆಯ ತಿಮಪ್ಪನ ಮಗ ನಾಗರಾಜು ಎಂಬವರು ಚುಡಾಯಿಸಿದ ಕಾರಣಕ್ಕೆ ಗಲಾಟೆ ನಡೆದಿದೆ. ಜಗಳದಲ್ಲಿ ಮುನಿಯಮ್ಮ, ನಾಗರಾಜು, ಆನಂದನ ತಲೆಗೆ ಪೆಟ್ಟು ಬಿದ್ದು ಹೆಚ್ಚಿನ ಚಿಕಿಕ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ನರಸಮ್ಮ ಎಂಬವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಅನಾಥ ಗರ್ಭಿಣಿಯನ್ನು ರಕ್ಷಿಸಿದ ಮಹಿಳಾ ಸಾಂತ್ವನ ವಾಣಿ
ಗೌರಿಬಿದನೂರು: ಗಂಗಾದೇವಿ ಎಂಬ ಅನಾಥ ಗರ್ಭಿಣಿ ಕಳೆದ ನಾಲ್ಕೈದು ದಿನಗಳಿಂದ ಗಂಡು ಮಗುವಿನೊಂದಿಗೆ ಪಟ್ಟಣದ ನ್ಯಾಷನಲ್ ಕಾಲೇಜಿನ ಅಕ್ಕ ಪಕ್ಕ ಒಡಾಡಿಕೊಂಡು, ಬೀದಿಯಲ್ಲಿ ಮಲಗುತ್ತಿರುವುದನ್ನು ಗಮನಿಸಿದವರು ಸ್ಥಳೀಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ(ಅಸೆಡಸಂಸ್ಥೆ) ಕ್ಕೆ ಮಾಹಿತಿ ನೀಡಿದ್ದು, ಸಾಂತ್ವನ ಕೇಂದ್ರದ ಸಿಬ್ಬಂದಿ ಮಹಿಳೆಯನ್ನು ವಿಚಾರಿಸಿದಾಗ ಇಡಗೂರು ಗ್ರಾಮದ ನರಸಪ್ಪನ ಮಗಳೆಂದು, ತನ್ನವರು ಯಾರು ಇರುವುದಿಲ್ಲ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ. ಸಾಂತ್ವನ ಕೇಂದ್ರದವರು ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ಚಿಕ್ಕಬಳ್ಳಾಪುರದ ಸ್ವಾಧಾರ್ ಕೇಂದ್ರಕ್ಕೆ ಕಳುಹಿಸಿ ಮಹಿಳೆಗೆ ರಕ್ಷಣೆ ಕಲ್ಪಿಸಲು ಕೋರಿದ್ದಾರೆ.
ಆದಿಮದಲ್ಲಿಂದು ಸಂಕ್ರಾಂತಿ ಸಿನಿಮಾ ಸಂಭ್ರಮ
ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದ ಜಿಂಕೆ ರಾಮಯ್ಯ ತಾಣದಲ್ಲಿನ ಆದಿಮ ಸಾಂಸ್ಕೃತಿಕ ಕೇಂದ್ರದ ಆಜೀವಿಕ ಗುರುಕುಲದಲ್ಲಿ ಜ.16 ರಂದು ಸಂಕ್ರಾಂತಿ ಸಿನಿಮಾ ಸಂಭ್ರಮವನ್ನು ದಿನವಿಡೀ ಹಮ್ಮಿಕೊಳ್ಳಲಾಗಿದೆ.
ಬೆಟ್ಟದ ಹೂವುಗಳ ಕುರಿತ ಸಿನಿಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವಿರುತ್ತದೆ. ಅತಿಥಿಗಳಾಗಿ ಸಿನಿಮಾ ಚರಿತ್ರಕಾರರಾದ ಕೆ.ಪುಟ್ಟಸ್ವಾಮಿ, ಕೆ.ವೈ. ನಾರಾಯಣಸ್ವಾಮಿ, ಕೇಶವ ಮಳಗಿ, ಶ್ರೀಕಾಂತ ಪ್ರಭು, ವಸಂತ ಮೊಕಾಶಿ ಭಾಗವಹಿಸಲಿದ್ದಾರೆಂದು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.
ದಂಡ ವಸೂಲಿ
ಕೋಲಾರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಡಿಸೆಂಬರ್-2013 ರ ಮಾಹೆಯಲ್ಲಿ 3064 ಬಸ್ಗಳನ್ನು ತನಿಖೆಗೆ ಒಳಪಡಿಸಿ 714 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ 82,081 ರು.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಮಕ್ಕಳಿಗೆ ಸಂಸ್ಕಾರ ಕಲಿಸಿ: ಸಿಪಿಐ
ಕೋಲಾರ: ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸಿ ಸಮಾಜ ಮುಖಿಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದು ನಗರ ವೃತ್ತ ನಿರೀಕ್ಷಕ ಪಿ. ಶಿವಕುಮಾರ್ ತಿಳಿಸಿದರು. ನಗರದ ಸೈನಿಕ್ ಪಬ್ಲಿಕ್ ಸ್ಕೂಲ್ ಮತ್ತು ಕೆ.ಜಿ. ಇಂಟರ್ ನ್ಯಾಷನಲ್ ಸ್ಕೂಲ್ವತಿಯಿಂದ ಬ್ರೂಣ ಹತ್ಯೆ ನಿಲ್ಲಿಸಿ ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಘೋಷಣೆಯಡಿ, ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೋ ಅದೇ ಕ್ಷೇತ್ರದಲ್ಲಿ ಮುಂದುವರೆಸಿದರೆ ಅನೇಕ ಸಾಧನೆಗಳನ್ನು ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು. ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಅಪಾರ ಗೌರವ, ನಂಬಿಕೆ, ಅಭಿಮಾನವನ್ನು ಬೆಳೆಸಿಕೊಂಡಿರುತ್ತಾರೆ ಹಾಗಾಗಿ ಯಾವುದೇ ತಾರತಮ್ಯವನ್ನು ಮಾಡದೆ ಅವರೊಂದಿಗೆ ಬೆರೆತು ಉನ್ನತ ಮಟ್ಟಕ್ಕೆ ಕೊಂಡಯ್ಯಬೇಕು ಎಂದು ಶಿಕ್ಷಕಿರಿಗೆ ಕಿವಿಮಾತು ಹೇಳಿದರು. ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಪತ್ರಕರ್ತ ಸಿ.ಜಿ. ಮುರಳಿ ಬಹುಮಾನ ವಿತರಿಸಿದರು. ಬಹುಮುಖ ಪ್ರತಿಭೆ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಪಿ.ಎಸ್. ಸ್ವಾತಿ ಅವರಿಗೆ ಸೈನಿಕ್ ಸ್ಟಾರ್ ಎಂಬ ಅವಾರ್ಡ್ ನೀಡಲಾಯಿತು. ಉತ್ತಮ ಶಿಕ್ಷಕರಾಗಿ ಸೈನಿಕ್ ಪಬ್ಲಿಕ್ ಶಾಲೆಯ ಜಿ.ವಿ. ಮಂಜುನಾಥ್ ಹಾಗೂ ಕೆ.ಸಿ. ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕಿ ಕೆ. ಲಕ್ಷ್ಮೀ ಅವರಿಗೆ ಅವಾರ್ಡ್ ನೀಡಲಾಯಿತು. ಶಾಲಾ ಸಂಸ್ಥೆಯ ಕಾರ್ಯದರ್ಶಿ ವೈ.ಸಿ. ಮುನೇಗೌಡ, ಚೌಡಪ್ಪ, ಶಾಂತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

