ಕಾಲುಬಾಯಿ ರೋಗ; ಕಳೆಗುಂದಿದ ಸಂಕ್ರಾಂತಿ
ಕ.ಪ್ರ.ವಾರ್ತೆ , ಕೋಲಾರ , ಜ.15
ಕಾಲುಬಾಯಿ ರೋಗದಿಂದ ಜಿಲ್ಲೆಯಲ್ಲಿ ನೂರಾರು ರಾಸುಗಳು ಸತ್ತಿರುವುದರಿಂದ ಭಯ ಭೀತರಾಗಿರುವ ಹಾಗೂ ನಷ್ಟಕ್ಕೆ ಒಳಗಾಗಿರುವ ಗೋಪಾಲಕರು ಈ ಬಾರಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲು ಹಿಂದೇಟು ಹಾಕಿದ್ದರಿಂದ ಹಬ್ಬ ಕಳೆಗುಂದಿತು.
ಕೋಲಾರ ನಗರ ಹೊರತುಪಡಿಸಿ ತಾಲೂಕಿನ ಕೆಲವು ಕಡೆ ಮಾತ್ರ ಸಾಂಪ್ರದಾಯ ಬಿಡಲಾಗದೆ ಗ್ರಾಮಸ್ಥರು ಸರಳ ರೀತಿಯಲ್ಲಿ ಹಾಸುಗಳ ಮೆರವಣಿಗೆ ನಡೆಸಿ ಕಿಚ್ಚು ಹಾಯಿಸಿದರು.
ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿವಸ ರೈತರು,ಗೋಪಾಲಕರು ಹಸು,ಕರುಗಳನ್ನು ಸ್ವಚ್ಛಗೊಳಿಸಿ, ವಿವಿಧ ಬಣ್ಣಗಳಿಂದ ಹಾಗೂ ಹೂವುಗಳಿಂದ ಸಿಂಗರಿಸಿ ಮೆರವಣಿಗೆ ನಂತರ ಕಿಚ್ಚು ಹಾಯಿಸುತ್ತಿದ್ದರು.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ ಕಾಲುಬಾಯಿ ಜ್ವರದಿಂದ ಸುಮಾರು 2,400ಕ್ಕೂ ಹೆಚ್ಚು ಹಾಸುಗಳು ಸತ್ತಿರುವುದರಿಂದ ಹೈನುಗಾರಿಕೆಯನ್ನು ನಂಬಿರುವ ಗೋಪಾಲಕರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಹಾಲು ಉತ್ಪಾದನೆಯಲ್ಲೂ ಕುಸಿತ ಕಾಣುವಂತಾಗಿದೆ.
ಸರ್ಕಾರ ಕಾಲುಬಾಯಿ ಜ್ವರದಿಂದ ಸತ್ತಿರುವ ಹಾಸುಗಳಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೂ ಜಿಲ್ಲೆಯಲ್ಲಿ ಪರಿಹಾರ ಕಾರ್ಯ ತೃಪ್ತಿದಾಯವಾಗಿಲ್ಲದಿರುವುದು ಗೋಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆಯಲ್ಲದೆ, ನೆಮ್ಮದಿ ಇಲ್ಲದಿರುವಾಗ ಸಂಕ್ರಾಂತಿ ಸಂಭ್ರಮ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಸಂಭವಿಸಿದ ದುರಂತದಿಂದ ಚೇತರಿಕೆ ಕಾಣದ ಗೋಪಾಲಕರು ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸದೆ ತಮ್ಮ ತಮ್ಮ ಮನೆಗಳಲ್ಲೇ ಶಕ್ತಾನುಸಾರ ರಾಸುಗಳಿಗೆ ಸರಳವಾಗಿ ಪೂಜೆ ಮಾಡಿದರೆ, ತಾಲೂಕಿನ ಗದ್ದೆಕಣ್ಣೂರು ಮತ್ತು ಕೆಳಗಿನ ಪೇಟೆಯಲ್ಲಿ ರಾಸುಗಳ ಮೆರವಣಿಗೆ ಜತೆಗೆ ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು.
ಕೋಲಾರದ ಕೀಲಾರಪೇಟೆ, ಕೀಲುಕೋಟೆ, ಕೋಟೆ ಪ್ರದೇಶ, ಕುರುಬರ ಪೇಟೆ ಸೇರಿದಂತೆ ಮುಂತಾದ ಕಡೆ ಪ್ರತಿವರ್ಷ ಗೋಪಾಲಕರು ರಾಸುಗಳನ್ನು ಸಿಂಗರಿಸಿ ಊರಿನಲ್ಲಿ ಮೆರವಣಿಗೆ ಮಾಡಿ ನಂತರ ಕಿಚ್ಚು ಹಾಯಿಸುತ್ತಿದ್ದರು. ಆದರೆ, ಈ ವರ್ಷ ಇದ್ಯಾವುದೇ ಸಂಭ್ರಮ ಕಾಣಲಾಗಲಿಲ್ಲ.ಸೊಂಕು ಭೀತಿ: ಬರಗಾಲದ ನಡುವೆಯೂ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ರೈತರು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು. ಕಳೆದ ವರ್ಷ ಕಾಲುಬಾಯಿ ರೋಗದಿಂದ ಗೋಪಾಲಕರಿಗೆ ನಷ್ಟವಾಗಿದೆ, ಹೈನುಗಾರಿಕೆ ನಂಬಿರುವ ರೈತರಿಗೆ ಮತ್ತೆ ಸಾವಿರಾರು ರು.ಕೊಟ್ಟು ಹಸುಗಳನ್ನು ಖರೀದಿಸುವ ಶಕ್ತಿ ಇಲ್ಲದಂತಾಗಿದೆ.
ರಾಸುಗಳನ್ನು ಉಳಿಸಿಕೊಳ್ಳಲು ಲಸಿಕೆ ಹಾಕಿಸಲಾಗುತ್ತಿದೆ, ಈ ಸಂದರ್ಭದಲ್ಲಿ ದನಕರುಗಳನ್ನು ರಸ್ತೆಗೆ ತಂದು ಮೆರವಣಿಗೆ ಮಾಡಿದಲ್ಲಿ ಮತ್ತೆ ಸೋಂಕು ತಗುಲಿ ಅವುಗಳ ಪ್ರಾಣಕ್ಕೆ ಕುತ್ತು ಉಂಟಾಗಬಹುದೆಂಬ ಭಯದಿಂದ ರಾಸುಗಳಿಗೆ ಮನೆಯಲ್ಲೇ ಸರಳವಾಗಿ ಪೂಜೆ ಮಾಡಿದ್ದೇವೆ. ಮುಂದಿನ ವರ್ಷ ರಾಸುಗಳಿಗೆ ಯಾವುದೇ ತೊಂದರೆ ಆಗದಿದ್ದರೆ ಅದ್ಧೂರಿಯಾಗಿ ಸಂಕ್ರಾಂತಿ ಆಚರಿಸುತ್ತೇವೆ.
- ಪ್ರವೀಣ್, ಗೋಪಾಲಕ, ಕೋಲಾರ
ಈ ವರ್ಷ ಸಂಕ್ರಾಂತಿ ಹಬ್ಬದ ಸಡಗರ ಕಡಿಮೆಯಾಗಿದೆ. ರೈತರು ತಮ್ಮ ರಾಸುಗಳನ್ನು ಸಿಂಗರಿಸಲು ನೂರಾರು ರುಪಾಯಿ ಖರ್ಚು ಮಾಡಿ ಸಿಂಗಾರಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಇದರಿಂದ ನಮಗೂ ಒಂದಿಷ್ಟು ಲಾಭ ಸಿಗುತ್ತಿತ್ತು. ಈ ವರ್ಷ ಶೇ. 40ಕ್ಕಿಂತ ವ್ಯಾಪಾರ ಕಡಿಮೆ ಆಗಿದೆ.
- ಸೀನಪ್ಪ, ವ್ಯಾಪಾರಿ, ಕೋಲಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

