ಕೋಲಾರ

ಶಿಕ್ಷಕರು ಮಕ್ಕಳ ಸಾಧನೆಯ ಪ್ರೇರಕರು

Published On :

ಕೆಜಿಎಫ್: ಮಕ್ಕಳ ಸಾಧನೆಯ ಹಿಂದೆ ಪ್ರೇರಕ ಶಕ್ತಿಯಾಗಿರುವುದು ಶಿಕ್ಷಕರೇ ಎಂದು ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ ಹೇಳಿದರು. ಇತ್ತೀಚೆಗೆ ಕೆಜಿಎಫ್ ಸಮೀಪದ ಕ್ಯಾಸಂಬಳ್ಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎನ್. ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ಸರ್ಕಾರಿ ಶಾಲೆಗಳಲ್ಲಿ ಉನ್ನತ ಶಿಕ್ಷಣ ಪಡೆದ ಶಿಕ್ಷಕರು ನೇಮಕಾತಿ ಆಗಿರುವುದು. ಸರ್ಕಾರಿ ಶಾಲೆಗಳಲ್ಲಿ ಸೇರಿರುವ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾಶಶಿಧರ್ ಮಾತನಾಡಿ, ತಂದೆ ತಾಯಿ ಕೊಡದ ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ತುಂಬುವರು ಶಿಕ್ಷಕರು ಮಾತ್ರ. ಆದ್ದರಿಂದ ಅವರ ಸೇವೆ ಸದಾ ಸ್ಮರಣೀಯ ಎಂದರು. ಮುಖ್ಯ ಶಿಕ್ಷಕ ವೆಂಕಟಮುನಿಯಪ್ಪ, ಮುಖಂಡ ವೆಂಕಟಕೃಷ್ಣ, ವಿಷಯ ಪರಿವೀಕ್ಷಕ ಅಶೋಕ್, ಅಪ್ಪಾಜಿಗೌಡ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕಿ ಎಂ.ಕೆ. ಶಶಿಕಲಾ, ಶಿಕ್ಷಕ ಲಾವಣ್ಯ ಸಿಂಗ್ ಇದ್ದರು.
ಸೂರ್ಯಕಿರಣಗಳ ಚಮತ್ಕಾರ
ಗೌರಿಬಿದನೂರು: ಬುಧವಾರ ಮುಂಜಾನೆ ಪುರಾಣ ಪುರುಷ ಜನಮೇಜಯನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ, ಚಾಲುಕ್ಯರ ಕಾಲದಲ್ಲಿ ಜೀರ್ಣೋದ್ಧಾರವಾದ ಮುದುಗೆರೆ ಚನ್ನಕೇಶವಾಲಯದಲ್ಲಿ ಸೂರ್ಯ ಕಿರಣಗಳ ಚಮತ್ಕಾರವನ್ನು ವೀಕ್ಷಿಸಲು ಆನೇಕಮಂದಿ ಭಕ್ತರು ನೆರೆದಿದ್ದರು.
ಪ್ರಕೃತಿಯ ಚಮತ್ಕಾರವೆಂಬಂತೆ ಸೂರ್ಯಕಿರಣಗಳು ಚೆನ್ನಕೇಶವನ ಪಾದಗಳ ಮೇಲೆ ಕೆಲವು ಕ್ಷಣ ಬಿದ್ದು ಮರೆಯಾದವು. ಈ ಸಮಯಕ್ಕಾಗಿ ಸಾವಿರಾರುಮಂದಿ ಭಕ್ತರು ಸಾಲಾಗಿ ನಿಂತಿದ್ದರು. ಕೆಲವು ಮಂದಿಗೆ ವೀಕ್ಷಣೆ ಮಾಡಲು ಸಾಧ್ಯವಾಗದಾಯಿತು. ದೇವಾಲಯದ ಗರ್ಭ ಗುಡಿಗೆ ದಕ್ಷಿಣ ದಿಕ್ಕಿನಲ್ಲಿ ದ್ವಾರ ಇದ್ದು ಇದನ್ನು ವೈಕುಂಠ ದ್ವಾರ ಎಂದು ಕರೆಯುತ್ತಾರೆ. ಈ ದ್ವಾರವನ್ನು ಉತ್ತರಾಯಣ ಪುಣ್ಯಕಾಲದ ಗಿನ ಮಾತ್ರ ತೆರೆಯುತ್ತಾರೆ.
ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಹಣ ಮೀಸಲಿಡಿ
ಗೌರಿಬಿದನೂರು: ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಮುಂದಿನ ತಿಂಗಳು ಮಂಡಿಸಲಿರುವ ರಾಜ್ಯ ಮುಂಗಡ ಪತ್ರದಲ್ಲಿ ಹಣ ಮೀಸಲಿಡಬೇಕೆಂದು ತಾಲೂಕು ವಿಶ್ವಕರ್ಮ ಜನಾಂಗದ ಅಭಿವೃದ್ದಿಸಮಿತಿ ಅಧ್ಯಕ್ಷ ಎಮ್.ಎನ್. ರಾಧಾಕೃಷ್ಣ ಸರ್ಕಾರವನ್ನು ಆಗ್ರಹಿಸಿದರು. ರಾಜ್ಯದಲ್ಲಿ ಸುಮಾರು 30ಲಕ್ಷ ಜನಸಂಖ್ಯೆಯುಳ್ಳ ಈ ಜನಾಂಗ ಶಿಲ್ಪ ಕಲೆಯಲ್ಲಿ ಪರಿಣಿತರಾಗಿದ್ದು, ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೆಕೆಂದು ಮನವಿ ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ
ಮಾಲೂರು: ಪರಿಷ್ಕರಣೆಗೊಂಡ ಮತದಾರರ ಪಟ್ಟಿಯಲ್ಲಿರುವ ಪುನರಾವರ್ತನೆಗೊಂಡಂತೆ ಕಂಡುಬರುವ ಮತದಾರರನ್ನು ತೆಗೆದುಹಾಕುವ ಕಾರ್ಯಕ್ರಮ ಜ.16 ರಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ತಿಳಿಸಿದ್ದಾರೆ. ಮಾಲೂರು ವಿಧಾನ ಸಭಾ ಕ್ಷೇತ್ರದ ಭಾವಚಿತ್ರವುಳ್ಳ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2014 ರಡಿ ನಕಲಿ ಮತದಾರರನ್ನು ಗುರ್ತಿಸುವ ಹಾಗೂ ತೆಗೆದುಹಾಕುವ ಕಾರ್ಯಕ್ರಮ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಟೇಕಲ್ ಹಾಗೂ ಮಾಸ್ತಿ ಹೋಬಳಿ ಮತಗಟ್ಟೆ ಅಧಿಕಾರಿಗಳಿಗಾಗಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಹಾಗೂ ಕಸಬ ಮತ್ತು ಲಕ್ಕೂರು ಹೋಬಳಿಯ ಮತಗಟ್ಟೆ ಅಧಿಕಾರಿಗಳಿಗಾಗಿ ಮಧ್ಯಾಹ್ನ 3 ಗಂಟೆಗೆ ಸಭೆ ಕರೆಯಲಾಗಿದೆ. ಸಭೆಗೆ ಮತದಾರರ ಪಟ್ಟಿಯೂಂದಿಗೆ ನಿಗದಿತ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಹಾಜರಾಗಬೇಕು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಮುಳಬಾಗಲಲ್ಲಿ ಸಂಕ್ರಾಂತಿ ಮೆರವಣೆಗೆಗೆ ಚಾಲನೆ
ಮುಳಬಾಗಲು: ಸಂಕ್ರಾತಿ ಹಬ್ಬ ಮಹತ್ತರವಾದ ಹಬ್ಬವಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಪಟ್ಟಣದ ಶಿವಕೇಶವನಗರದಲ್ಲಿ ಬುಧವಾರ ಸಂಕ್ರಾಂತಿ ಹಬ್ಬದ ಮೆರವಣೆಗೆಗೆ ಚಾಲನೆ ನೀಡಿ ಮಾತನಾಡಿದರು. ಶಿವಕೇಶವನಗರದಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಮೆರವಣೆಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಕ್ತಾಯ ಕಂಡಿತು. ಕೋಮು ಸೂಕ್ಷ್ಮತೆಗೆ ಹೆಸರಾದ ಪಟ್ಟಣದಲ್ಲಿ ಮುಳಬಾಗಲು ಡಿವೈಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಆರ್. ಸೋಮಶೇಖರಯ್ಯ, ಪುರಸಭೆ ಮುಖ್ಯಾಧಿಕಾರಿ ಪಿ.ಅಶೋಕ್ ಕುಮಾರ್, ಅಲಂಗೂರು ಶಿವಣ್ಣ, ಸಿ.ವಿ. ಗೋಪಾಲ್, ಅತ್ತಿಪಲ್ಲಿ ವೆಂಕಟರವಣಪ್ಪ, ಹರೀಶ್, ಜಿ. ರಾಮಲಿಂಗಾರೆಡ್ಡಿ, ಸಂಕ್ರಾಂತಿ ಮೆರವಣೆಗೆ ಅಧ್ಯಕ್ಷ ಎಂ. ವೆಂಕಟೇಶ್, ಕಾರ್ಯದರ್ಶಿ ಕನ್ನಡ ಭಟ ವೆಂಕಟಪ್ಪ ಇದ್ದರು.
ಜ.26 ರಿಂದ 28 ವರೆಗೆ ಫಲಪುಷ್ಪ ಪ್ರದರ್ಶನ
ಕೋಲಾರ: ತೋಟಗಾರಿಕೆ ಇಲಾಖೆ ವತಿಯಿಂದ ಜ.26 ರಿಂದ 28 ವರೆಗೆ ತೋಟಗಾರಿಕೆ ಇಲಾಖೆಯ ಜಿಲ್ಲಾ ನರ್ಸರಿ ಕೋಲಾರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಅ.26 ರಂದು ಮಧ್ಯಾಹ್ನ 12 ಗಂಟೆಗೆ ಫಲಪುಷ್ಪ ಪ್ರದರ್ಶನದ ಉದ್ಘಾಟನೆ, ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.27 ರಂದು ಬೆಳಗ್ಗೆ10 ಗಂಟೆಗೆ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆ, ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿಗಳಿಗೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಚಟುವಟಿಕೆಗಳ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ.28 ರಂದು ಬೆಳಗ್ಗೆ 11 ಗಂಟೆಗೆ ಸಂರಕ್ಷಿತ ಬೇಸಾಯ ಬಗ್ಗೆ ರೈತರು ಹಾಗೂ ತಜ್ಞರೊಂದಿಗೆ ಸಂವಾದ , ಸಂಜೆ5ಗಂಟೆಗೆ ಪ್ರದರ್ಶನದಲ್ಲಿ ಭಾಗವಹಿಸಿದ ಉತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ಹಾಗೂ ಪ್ರತಿ ತಾಲೂಕಿನಿಂದ ಇಬ್ಬರು ಪ್ರಗತಿ ಪರ ರೈತರಿಗೆ ಸನ್ಮಾನ ಕಾರ್ಯಕ್ರಮ, ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಅಪಘಾತದಲ್ಲಿ ಮಡಿದ ಕುಟುಂಬಕ್ಕೆ ಪರಿಹಾರ
ಕೋಲಾರ: ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಪ್ರಯಾಣಿಸುವಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂಸ್ಥೆಯಿಂದ ಅಪಘಾತ ಪರಿಹಾರ ನಿಧಿಯಿಂದ 2.50 ಲಕ್ಷ ರು.ಪರಿಹಾರ ನೀಡಲಾಗಿದೆ. ಕಳೆದ ಜೂ.3 ರಂದು  ಕೆಜಿಎಫ್ ಘಟಕಕ್ಕೆ ಸೇರಿದ ಬಸ್ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿರುವಾಗ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಮರಣಾಂತಿಕ ಅಪಘಾತಕ್ಕೀಡಾಗಿರುತ್ತದೆ.   ಅಪಘಾತದಲ್ಲಿ ನಿಗಮದ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ಚಿತ್ತೂರು ಜಿಲ್ಲೆಯ ದುರ್ಗಾಸಮುದ್ರಂ ಗ್ರಾಮದ ಪಿ. ನಾಗರಾಜ್ ಸ್ಥಳದಲ್ಲೆ ಮೃತಪಟ್ಟಿದ್ದರು.  ಮೃತರ ವಾರಸುದಾರರಿಗೆ ಅಪಘಾತ ಸಮಯದಲ್ಲಿ 15ಸಾವಿರ ರು.ಗಳನ್ನು ನೀಡಲಾಗಿತ್ತು. ಉಳಿದ ಮೊತ್ತ 2.35ಲಕ್ಷ ರು.ಗಳನ್ನು ಅಪಘಾತ ಪರಿಹಾರ ನಿಧಿಯಿಂದ ಚೆಕ್ ಮೂಲಕ ಮೃತರ ಪತ್ನಿ ಪಿ. ರಜನಿರವರಿಗೆ ಕೋಲಾರ ವಿಭಾಗದ ಅಧಿಕಾರಿಗಳು ನೀಡಿರುತ್ತಾರೆ.
ಇಂದು ದಲಿತರ ಐಕ್ಯತಾ ದಿನ
ಕೋಲಾರ: ಕದಸಂಸ ವತಿಯಿಂದ ದಲಿತ ನಾಯಕ ದಿ. ಎನ್.ಶಿವಣ್ಣ ಅವರ 64ನೇ ಜನ್ಮದಿನವನ್ನು ಜ.16 ರಂದು ಬೆಳಿಗ್ಗೆ 11.30ಕ್ಕೆ ನಗರದ ಪತ್ರಕರ್ತರ ಭವನದಲ್ಲಿ ದಲಿತರ ಐಕ್ಯತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಕಾರ್ಯಕ್ರಮ ಉದ್ಘಾಟಿಸುವರು. ಚಿತ್ರದುರ್ಗದ ಎಂ. ಜಯಣ್ಣ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಮಾವಳ್ಳಿ ಶಂಕರ್, ಮೋಹನ್‌ರಾಜ್, ವಿ.ನಾರಾಯಣಸ್ವಾಮಿ, ಹೆಣ್ಣೂರು ಶ್ರೀನಿವಾಸ್ ಇತರರು ಭಾಗವಹಿಸುವರು.
ಪ್ರತಿಭಾ ಪುರಸ್ಕಾರ
ಕೋಲಾರ: ಜಿಲ್ಲಾಡಳಿತದ ವತಿಯಿಂದ ಜ.21 ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಟಿ. ಚನ್ನಯ್ಯ ರಂಗಮಂದಿರದಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ನಿರ್ಧರಿಸಿದೆ.  2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ದ್ವಿತೀಯ ಪಿಯುಸಿ ಹಾಗೂ ಉನ್ನತ ಶಿಕ್ಷಣ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರ ಬೆಸ್ತರ ವಿದ್ಯಾರ್ಥಿಗಳ ವಿಳಾಸ, ದೂರವಾಣಿ ಸಂಖ್ಯೆ, ಪಡೆದ ಅಂಕಗಳೊಂದಿಗೆ ಸವಿವರ ಮಾಹಿತಿಯನ್ನು ಜ.18 ರ ಒಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.